ಕ್ಯಾಲೆಂಡರ್ 
ಸ್ಯಾಂಡಲ್‌ವುಡ್

Calendar Review - ಋತುಚಕ್ರದ ನೋವು, ಕಾಲಚಕ್ರದ ಸುಳಿಯ ನಡುವೆ ಬದಲಾಗುವ ಜೀವನಚಕ್ರ

Calendar Review -
ಆತ ಡಾ. ಆಕಾಶ್​ (ಆದರ್ಶ್​). ಜನಾನುರಾಗಿ ವೈದ್ಯ. ಆದರೆ, ಪ್ರೀತಿಸಿದ ನಕ್ಷತ್ರ (ಸುಷ್ಮಿತಾ) ಮರೀಚಿಕೆಯಾದಾಗ, ಗುಂಡಿನ ದಾಸನಾಗುತ್ತಾನೆ. ಆಸ್ಪತ್ರೆಗಿಂತ ಆಲ್ಕೋಹಾಲ್​ ಸಿಗುವ ಬಾರ್​ನಲ್ಲೇ ಸಮಯ ಕಳೆಯತೊಡಗುತ್ತಾನೆ. ಪ್ರೀತಿಸಿದವಳನ್ನು ಮರೆಯಲಾಗದೇ, ಕುಡಿದು ನಶೆಯಲ್ಲಿ ಮೈಮರೆಯುವ ಪ್ರಯತ್ನ ಆಕಾಶ್​ದು. ಅದರ ನಡುವೆಯೇ ನಡೆಯುವ ಕೊಲೆ, ಆತ್ಮಹತ್ಯೆ ಆಕಾಶ್​ನನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಅಲ್ಲಿಂದ ಈ ಡ್ರಾಮಾ ಇನ್ವೆಸ್ಟಿಗೇಟಿವ್​ ಕ್ರೈಮ್​ ಥ್ರಿಲ್ಲರ್​ನತ್ತ ಹೊರಳುತ್ತದೆ. ಪೊಲೀಸ್ ಅಧಿಕಾರಿ ಯುವರಾಜ್ ಒಂಟಿಮನಿ (ರಮೇಶ್​ ಇಂದಿರ), ಲಾಯರ್​ (ಸುಚೇಂದ್ರ ಪ್ರಸಾದ್​), ರಾಜಕಾರಣಿ (ಪ್ರಮೋದ್ ಶೆಟ್ಟಿ), ಆರೋಗ್ಯ ಸಚಿವೆ (ಮಾಲಾಶ್ರೀ)... ಹೀಗೆ ಹೊಸ ಹೊಸ ಪಾತ್ರಗಳು ಎಂಟ್ರಿಯಾಗಿ, ಉಪಕಥೆಗಳು ತೆರೆದುಕೊಳ್ಳುತ್ತವೆ. ಅದರ ನಡುವೆಯೇ ಆಕಾಶ್​ನ ಆಕಾಶದಷ್ಟು ನೋವಿನ ಕಥೆಯೂ ಸಾಗುತ್ತಿರುತ್ತದೆ. ಕೊನೆಗೆ ಆಕಾಶ್ ಏನಾಗುತ್ತಾನೆ? ಏನು ಮಾಡುತ್ತಾನೆ? ಈ ಉಪಕಥೆಗಳೇನು? ಕೊಲೆಗಾರ ಯಾರು? ಆತ್ಮಹತ್ಯೆಗೆ ಕಾರಣವೇನು? ಹೀಗೆ ಎಲ್ಲ ಪ್ರಶ್ನೆಗಳಿಗೂ ಕಥೆ ಸಾಗಿದಂತೆ ಉತ್ತರ ದೊರೆಯುತ್ತದೆ.
ಇದೊಂದು ಸೋಷಿಯಲ್ ಡ್ರಾಮಾ ಜಾನರ್ ಚಿತ್ರವಾಗಿದ್ದರೂ ರೊಮ್ಯಾನ್ಸ್​, ಸಸ್ಪೆನ್ಸ್​, ಥ್ರಿಲ್ಲರ್, ಮರ್ಡರ್​ ಮಿಸ್ಟರಿ ಸೇರಿ ಹಲವು ಅಂಶಗಳನ್ನು ಸೇರಿಸಿ ನಿರ್ದೇಶಕ ನವೀನ್​ ಶಕ್ತಿ ತಮ್ಮ ಶಕ್ತಿಯನ್ನು ಅನಾವರಣಗೊಳಿಸಲು ಪ್ರಯತ್ನಿಸಿದ್ದಾರೆ. ಅದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸು ಗಳಿಸಿದ್ದಾರೆ. ಆದರ್ಶ್​, ಸುಷ್ಮಿತಾ, ನಿವಿಷ್ಕಾ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಆದರೆ, ಪೊಲೀಸ್ ಅಧಿಕಾರಿ ಯುವರಾಜ್​ ಒಂಟಿಮನಿ ಪಾತ್ರದಲ್ಲಿ ರಮೇಶ್​ ಇಂದಿರ ಎಲ್ಲರಿಗೂ ಒಂದು ಹೆಜ್ಜೆ ಮುಂದಿದ್ದಾರೆ. ಅಷ್ಟು ಚೆನ್ನಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಾಂತ್ರಿಕವಾಗಿಯೂ ಸಿನಿಮಾ ಸಶಕ್ತವಾಗಿ ಮೂಡಿಬಂದಿದೆ. ಕೆಲವೆಡೆ ಕಥೆ, ಉಪಕಥೆಗಳ ನಡುವೆ ಅಲ್ಲಲ್ಲಿ ಲಿಂಕ್​ ಮಿಸ್​ ಆಗುವ ಕಾರಣ, ಪ್ರೇಕ್ಷಕರಿಗೆ ಗೊಂದಲ ಉಂಟಾಗಬಹುದು. ಆದರೂ, ಪ್ರೇಕ್ಷಕರು ಈ ಕ್ಯಾಲೆಂಡರ್​ ನೋಡಲು ಕ್ಯಾಲೆಂಡರ್​ನಲ್ಲಿ ಒಂದು ದಿನ ಮಾರ್ಕ್​ ಮಾಡಿಕೊಳ್ಳಬಹುದು.