Sanjana Anand Interview - "ಕೆಮಿಸ್ಟ್ರಿ ಆಫ್ ಕರಿಯಪ್ಪ', "ಸಲಗ', "ರಾಯಲ್', "ಎಕ್ಕ' ಚಿತ್ರಗಳ ಖ್ಯಾತಿಯ ನಟಿ ಸಂಜನಾ ಆನಂದ್ ಇದೀಗ "ಹಯಗ್ರೀವ' ಚಿತ್ರದಲ್ಲಿ "ಬಜಾರ್', "ಬೈಟೂ ಲವ್', "ವಾಮನ', "ಕೈವ' ನಟ ಧನ್ವೀರ್ ಗೌಡಗೆ ನಾಯಕಿಯಾಗಿದ್ದಾರೆ. ರಘು ಕುಮಾರ್ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿರುವ ಈ ಕ್ರೈಮ್ ಮಿಸ್ಟರಿ ಥ್ರಿಲ್ಲರ್ ಇದೇ 27ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಅವರು, "ಹಯಗ್ರೀವ' ಚಿತ್ರ, ಪಾತ್ರದ ಬಗ್ಗೆ, "ಹೊಸ ಪರಿಕಲ್ಪನೆಯ ವಿಭಿನ್ನ ಕಥೆಯಿದು. ನಾನಿಲ್ಲಿ ಎರಡು ಶೇಡ್ಗಳಿರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಒಂದು ಲುಕ್ನಲ್ಲಿ ಕಾಲೇಜ್ ವಿದ್ಯಾರ್ಥಿನಿಯಾಗಿದ್ದರೆ, ಮತ್ತೊಂದು ಲುಕ್ನಲ್ಲಿ ವೈದ್ಯೆಯಾಗಿರುವ ನಾಯಕ ಅರ್ಜುನ್ ಹಯಗ್ರೀವನ (ಧನ್ವೀರ್) ಪತ್ನಿಯಾಗಿದ್ದೇನೆ. ವೈದ್ಯಕಿಯ ವಿಷಯಕ್ಕೆ ಸಂಬಂಧಿಸಿದ ಕಥೆಯಿದು. ಬಹುತೇಕ ಗಂಭೀರವಾಗೇ ಸಾಗುವ ಕೆಮ್ ಮಿಸ್ಟರಿ ಥ್ರಿಲ್ಲರ್ ಸ್ಟೋರಿಯಲ್ಲಿ ಒಂದು ತುಂಟತನ, ಫನ್ ತರುವ ಪಾತ್ರ ನನ್ನದು. ಹಾಗಂತ ಹಾಗೆ ಬಂದು ಹೀಗೆ ಹೋಗುವ ರೋಲ್ ಅಲ್ಲ. ಸಿನಿಮಾದಾದ್ಯಂತ ಕ್ಯಾರಿ ಆಗುವ ಪಾರ್ಮೆನ್ಸ್ಗೆ ತುಂಬ ಮಹತ್ವವಿರುವ ಪಾತ್ರ. ಅಷ್ಟೇ ಯಾಕೆ ಕಥೆ ಮುಗಿಯುವುದೇ ನನ್ನ ಪಾತ್ರದ ಜತೆ' ಎಂದು ಮಾಹಿತಿ ನೀಡುತ್ತಾರೆ. ಧನ್ವೀರ್, ಸಂಜನಾ ಜತೆ ಶರತ್ ಲೋಹಿತಾಶ್ವ, ಸಾಧು ಕೋಕಿಲ, ರಮೇಶ್ ಭಟ್, ಶೋಭರಾಜ್, ಗಿಲ್ಲಿ ನಟ, ಅಶ್ವಿನಿ ಗೌಡ, ಸಂಗೀತಾ, ಕೃಷ್ಣ ಹೆಬ್ಬಾಳೆ ಪ್ರಮುಖ ತಾರಾಗಣದಲ್ಲಿದ್ದಾರೆ.
ಹೆಮ್ಮೆಯ ಪಾತ್ರ
"ವೈದ್ಯೆ ಪಾತ್ರದಲ್ಲಿ ನಟಿಸಿದ ಹೆಮ್ಮೆ ಇದೆ' ಎಂದು ಸಂತಸ ವ್ಯಕ್ತಪಡಿಸುವ ಸಂಜನಾ, "ವೈದ್ಯೆ ಆದ ಬಳಿಕ ಬರುವ ಸನ್ನಿವೇಶಗಳನ್ನು ಆಸ್ಪತ್ರೆಯಲ್ಲಿ ಚಿತ್ರೀಕರಿಸಿದ್ದೆವು. ಆಗ ಡಾಕ್ಟರ್ ಕೋಟ್ ಹಾಕಿಕೊಂಡು, ಸ್ಟೆಥೋಸ್ಕೋಪ್ ಹಿಡಿದು ಆಸ್ಪತ್ರೆ ತುಂಬ ಓಡಾಡಿದೆ. ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಅಂತಹ ಪಾತ್ರ ತೆರೆಯ ಮೇಲೆ ತಂದಿದ್ದು ಖುಷಿ ನೀಡಿದೆ. ತುಂಬ ಶ್ರಮ ಹಾಕಿ, ತುಂಬ ಇಷ್ಟಪಟ್ಟು ಮಾಡಿರುವ ಚಿತ್ರವಿದು. ಜನರಿಗೆ ಇಷ್ಟವಾಗುವ ಭರವಸೆಯಿದೆ' ಎನ್ನುತ್ತಾರೆ.
ಮುಂದಿನ ಚಿತ್ರಗಳು
ಇತ್ತೀಚಿನ ದಿನಗಳಲ್ಲಿ ತುಂಬ ಎಚ್ಚರಿಕೆಯಿಂದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ ಸಂಜನಾ ಆನಂದ್. "ಈ ಹಿಂದಿನ ಐದು ಚಿತ್ರಗಳಲ್ಲಿ ನಾನು ಬಹುತೇಕ ಗರ್ಲ್ ನೆಕ್ಸ್ಟ್ ಡೋರ್ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದೇನೆ. ಹೀಗಾಗಿಯೇ ಈಗೀಗ ಕಥೆ, ಪಾತ್ರ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸುತ್ತಿದ್ದೇನೆ. ಹಾಗಂತ ನನಗೆ ಮಹಿಳಾ ಪ್ರಧಾನ ಕಥೆಗಳೇ ಬೇಕು ಅಂತೇನಲ್ಲ. "ಕೆಜಿಎಫ್'ನಲ್ಲಿ ಅರ್ಚನಾ ಜೋಯಿಸ್ ಅವರು ನಟಿಸಿದ್ದ ಅಮ್ಮನ ಪಾತ್ರ ಸಣ್ಣದಾಗಿದ್ದರೂ ಈಗಲೂ ಎಲ್ಲರಿಗೂ ನೆನಪಿನಲ್ಲಿದೆ. ಹಾಗೆ ಪಾತ್ರ ಚಿಕ್ಕದಾಗಿದ್ದರೂ ಕಥೆಯಲ್ಲಿ ಪ್ರಾಮುಖ್ಯವಿರಬೇಕು. ಸದ್ಯ ನಾನು ವಿಕ್ರಮ್ ರವಿಚಂದ್ರನ್ ಜತೆ "ಮುಧೋಳ್'ನಲ್ಲಿ ನಟಿಸುತ್ತಿದ್ದೇನೆ. ಅದಿನ್ನು ಎರಡು, ಮೂರು ದಿನ ಚಿತ್ರೀಕರಣ ಬಾಕಿ ಇದೆ. ಹಾಗೇ ಶಿವರಾಜಕುಮಾರ್ ಸರ್ ಜತೆ "ಬೇಲ್' ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದು ಇನ್ನು ಐದಾರು ದಿನ ಶೂಟಿಂಗ್ ಬಾಕಿ ಇದೆ' ಎಂದು ಹೇಳಿಕೊಳ್ಳುತ್ತಾರೆ.