ಎಲ್ಲ ಗಂಡಸರನ್ನು ಜೈಲಿಗೆ ಹಾಕಿ ಎಂದ ನಟಿ ರಮ್ಯಾ 
ಸ್ಯಾಂಡಲ್‌ವುಡ್

ಯಾವಾಗ ರೇಪ್, ಕೊಲೆ ಮಾಡ್ತಾನೋ ಗೊತ್ತಿಲ್ಲ... ಎಲ್ಲ ಗಂಡಸರನ್ನು ಜೈಲಿಗೆ ಹಾಕಿ ಎಂದಿದ್ದೇಕೆ ರಮ್ಯಾ?! Actress Ramya

ಪ್ರಮುಖ ಮುಖ್ಯಾಂಶಗಳು

  • ಬೀದಿ ನಾಯಿಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್​ನಿಂದ ಮಹತ್ವದ ಹೇಳಿಕೆ
  • ದೇಶದ ಉನ್ನತ ನ್ಯಾಯಾಲಯದ ಹೇಳಿಕೆಗಳನ್ನು ಖಂಡಿಸಿದ ನಟಿ ರಮ್ಯಾ
  • ನಾಯಿಗಳ ಮನಸ್ಥಿತಿಯನ್ನು ಪುರುಷರಿಗೆ ಹೋಲಿಕೆ ಮಾಡಿ ನಟಿ ರಮ್ಯಾ ಟೀಕಾ ಪ್ರಹಾರ
ಬೆಂಗಳೂರು: ಬೀದಿ ನಾಯಿಗಳ ವಿಚಾರದಲ್ಲಿ ದೇಶದ ಉನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್​ ನೀಡಿರುವ ಹೇಳಿಕೆಗಳನ್ನು ಖಂಡಿಸಿರುವ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ( Actress Ramya ), ಪುರುಷರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ನ್ಯಾಯಾಲಯ ನಾಯಿಗಳ ಬಗ್ಗೆ ಹೇಳಿದ್ದನ್ನು ನಟಿ ರಮ್ಯಾ ಖಂಡಿಸಿರುವುದು ಸರಿ ಆದರೆ, ರಮ್ಯಾ ಅವರು ಗಂಡಸರ ವಿರುದ್ಧ ವಾಗ್ದಾಳಿ ನಡೆಸಿದ್ದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಇಲ್ಲಿ ರಮ್ಯಾ ಅವರು ಸುಪ್ರೀಂಕೋರ್ಟ್​ ಉಲ್ಲೇಖಿಸಿದ ನಾಯಿಗಳ ಮನಸ್ಥಿತಿಯನ್ನು ಪುರುಷರಿಗೆ ಹೋಲಿಕೆ ಮಾಡಿ ಟೀಕಾ ಪ್ರಹಾರ ನಡೆಸಿದ್ದಾರೆ. ರಮ್ಯಾ ಹೇಳಿದ ಮಾತಿನ ಅರ್ಥವನ್ನು ತಿಳಿಯಬೇಕಾದರೆ, ಮೊದಲು ಸುಪ್ರೀಂ ಕೋರ್ಟ್​ ಬೀದಿ ನಾಯಿಗಳ ವಿಚಾರದಲ್ಲಿ ನೀಡಿದ ಹೇಳಿಕೆಗಳನ್ನು ತಿಳಿದುಕೊಳ್ಳಬೇಕು.

ನಾಯಿಗಳ ಮನಸ್ಸನ್ನು ತಿಳಿಯಲಾಗದು

ಬೀದಿ ನಾಯಿಗಳ ಹಾವಳಿ ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಸಾಕಷ್ಟು ಮಧ್ಯಂತರ ಅರ್ಜಿಗಳ ಸಂಬಂಧ ಸುಪ್ರೀಂಕೋರ್ಟ್​ ಇಂದು ವಿಚಾರಣೆ ನಡೆಸಿತು. ನ್ಯಾಯಮೂರ್ತಿಗಳಾದ ವಿಕ್ರಮ್​ ನಾಥ್​, ಸಂದೀಪ್​ ಮೆಹ್ತಾ ಮತ್ತು ಎನ್​ ವಿ ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಪ್ರಾಣಿಗಳು ಯಾವಾಗ ಕಚ್ಚುವ ಮೂಡ್​ನಲ್ಲಿ ಇರುತ್ತವೆ ಹಾಗೂ ಯಾವಾಗ ಸುಮ್ಮನಿರುತ್ತವೆ ಎಂದು ತಿಳಿಯುವುದು ಕಷ್ಟ. ಅವುಗಳ ಮನಸ್ಸನ್ನು ಓದಲಾಗದು. ಹೀಗಾಗಿ, ರೋಗವನ್ನು ವಾಸಿ ಮಾಡುವುದಕ್ಕಿಂತ ಅದು ಬರದಂತೆ ತಡೆಗಟ್ಟುವುದು ಮುಖ್ಯ ಎನ್ನುವಂತೆ, ಪ್ರಾಣಿಗಳ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತು.
ರಸ್ತೆಗಳು ನಾಯಿಗಳಿಲ್ಲದೆ ಸ್ವಚ್ಛವಾಗಿರಬೇಕು. ಅವು ಕಚ್ಚದೇ ಇರಬಹುದು, ಆದರೆ ಅವು ಅಪಘಾತಗಳಿಗೆ ಕಾರಣವಾಗುತ್ತವೆ. ಬೀದಿಗಳು, ಶಾಲೆಗಳು ಮತ್ತು ಸಾಂಸ್ಥಿಕ ಪ್ರದೇಶಗಳಲ್ಲಿ ನಮಗೆ ನಾಯಿಗಳು ಏಕೆ ಬೇಕು? ಎಂದು ಪ್ರಶ್ನಿಸಿದ ಪೀಠ, ನಾಯಿಗಳ ಜನನ ನಿಯಂತ್ರಣ (ABC) ನಿಯಮಗಳನ್ನು ಜಾರಿಗೆ ತರುವಂತೆ 2018ರಲ್ಲೇ ನಾವು ಸರ್ಕಾರಕ್ಕೆ ನಿರ್ದೇಶನ ನೀಡಿದ್ದೆವು. ಇಲ್ಲಿಯವರೆಗೆ ಈ ವಿಚಾರದಲ್ಲಿ ಏನು ನಡೆದಿದೆ? ಸರ್ಕಾರವು ಎಬಿಸಿ ನಿಯಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂಬ ಕಾರಣಕ್ಕಾಗಿ, ಸಾಮಾನ್ಯ ಜನರು ತೊಂದರೆ ಅನುಭವಿಸಬೇಕೇ? ಎಂದು ಪೀಠವು ಪ್ರಶ್ನಿಸಿ, ಪ್ರಕರಣವನ್ನು ಗುರುವಾರಕ್ಕೆ ಮುಂದೂಡಿತು.

ಪುರುಷರನ್ನು ಜೈಲಿಗೆ ಹಾಕಿ

ನಾಯಿಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಸಾರಾಸಗಟಾಗಿ ಖಂಡಿಸಿರುವ ನಟಿ ರಮ್ಯಾ, ತಮ್ಮ ಕೋಪವನ್ನು ಗಂಡಸರ ಮೇಲೆ ತೋರಿಸಿದ್ದಾರೆ. ಪುರುಷನು ಯಾವಾಗ ರೇಪ್ ಮಾಡ್ತಾನೋ? ಯಾವಾಗ‌‌ ಕೊಲೆ ಮಾಡ್ತಾನೋ? ನಮಗೆ ಗೊತ್ತಿಲ್ಲ. ನಾಯಿಗಳಂತೆ ಗಂಡಸಿನ ಮನಸ್ಸಿನಲ್ಲಿಯೂ ಏನಿದೆ ಎಂದು ತಿಳಿಯಲು ಆಗುವುದಿಲ್ಲ. ಹೀಗಾಗಿ, ಪುರುಷರನ್ನು ಜೈಲಿಗೆ ಹಾಕಿ ಎಂದು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬೀದಿನಾಯಿ ವಿಚಾರವಾಗಿ ಸುಪ್ರೀಂ ಕೋರ್ಟ್​ ನೀಡಿರುವ ಹೇಳಿಕೆಯನ್ನು ವರದಿ ಮಾಡಿರುವ ಎನ್​ಡಿಟಿವಿ ಮಾಧ್ಯಮದ ನ್ಯೂಸ್​ ಲಿಂಕ್​ ಶೇರ್​ ಮಾಡಿ, ನಟಿ ರಮ್ಯಾ ಕಿಡಿಕಾರಿದ್ದಾರೆ.
ಎಲ್ಲರ ಕಣ್ಣು ಭಾರತದ ಸುಪ್ರೀಂಕೋರ್ಟ್​ ಮೇಲೆ (All Eyes On Supreme Court Of India) ಎಂಬ ಘೋಷ ವಾಕ್ಯದೊಂದಿಗೆ ಭಾರತದ ನಾಯಿಗಳನ್ನು ಕಾಪಾಡಿ (#SAVEINDIANDOGS) ಎಂದು ಹ್ಯಾಸ್​ ಟ್ಯಾಗ್​ ಮೂಲಕ ನಟಿ ರಮ್ಯಾ ಅವರು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.