ನಟಿ ವೈಷ್ಣವಿ ಕೌಂಡಿಣ್ಯ, ನಟಿ ನಿಶ್ವಿಕಾ ನಾಯ್ಡು ಹಾಗೂ ನಟಿ ರಮ್ಯಾ
- ಉಡುಗೆ ವಿಚಾರವಾಗಿ ಕಿರುತೆರೆ ನಟಿ ವೈಷ್ಣವಿ ಕೌಂಡಿಣ್ಯ ಟ್ರೋಲ್
- ವೈಷ್ಣವಿ ಬೆಂಬಲಕ್ಕೆ ನಿಂತ ನಟಿ ನಿಶ್ವಿಕಾ ನಾಯ್ಡು ವಿರುದ್ಧವೂ ಟೀಕೆ
- ನಿಶ್ವಿಕಾ ಪರ ಬ್ಯಾಟ್ ಬೀಸಿದ ಮೋಹಕ ತಾರೆ ರಮ್ಯಾ
ಬೆಂಗಳೂರು: ಇತ್ತೀಚೆಗೆ ತಮ್ಮ ಉಡುಗೆ ವಿಚಾರವಾಗಿ ಕಿರುತೆರೆ ನಟಿ ವೈಷ್ಣವಿ ಕೌಂಡಿಣ್ಯ ಟ್ರೋಲ್ಗೆ ಗುರಿಯಾಗಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಬಳಿಕ ವೈಷ್ಣವಿಗೆ ಬೆಂಬಲವಾಗಿ ನಿಂತು ನಟಿ ನಿಶ್ವಿಕಾ ನಾಯ್ಡು ನೀಡಿದ ಹೇಳಿಕೆ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಪರ-ವಿರೋಧ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಮೋಹಕ ತಾರೆ ರಮ್ಯಾ ( Actress Ramya ) ಅವರು ನಿಶ್ವಿಕಾ ಪರ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರಮ್ಯಾ, ನಿಶ್ವಿಕಾ ಹೇಳಿದ್ದು ಸರಿ ಇದೆ. ಗಂಡಸರಿಗೆ ಇರುವಷ್ಟೇ ಹಕ್ಕು ನಮಗೂ ಇದೆ. ನೀವು ಇಷ್ಟ ಬಂದ ಹಾಗೇ ಬಟ್ಟೆ ಹಾಕುವಾಗ ನಾವು ಹಾಕಬಾರದಾ? ಇಲ್ಲಿ ಹೆಣ್ಣು ಮಕ್ಕಳಿಗೂ ಸ್ವಾತಂತ್ರ್ಯ ಇದೆ. ನಿಮಗೆ ಇಷ್ಟ ಇಲ್ಲ ಅಂದರೆ ಕಾಮೆಂಟ್ ಮಾಡೋಕೆ ಹೋಗಬೇಡಿ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಅಕೌಂಟ್ ಇದೆ. ಹಾಗಾಂತ ಎಲ್ಲದಕ್ಕೂ ಕಾಮೆಂಟ್ ಮಾಡಬಾರದು ಎಂದು ರಮ್ಯಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವೈಷ್ಣವಿ ಟ್ರೋಲ್
ನಟಿ ವೈಷ್ಣವಿ ಕೌಂಡಿಣ್ಯ 'ಮಿಥುನ ರಾಶಿ' ಹಾಗೂ 'ಪ್ರೇಮ ಕಾವ್ಯ' ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇಯಾದ ಹೆಸರು ಮಾಡಿದ್ದಾರೆ. ಆದರೆ, ಇತ್ತೀಚೆಗೆ ತಮ್ಮ ಬೋಲ್ಡ್ ಲುಕ್ ಹಾಗೂ ತುಂಡುಡುಗೆ ವಿಚಾರವಾಗಿ ಜಾಲತಾಣದಲ್ಲಿ ಟ್ರೋಲ್ಗೆ ಗುರಿಯಾಗಿದ್ದಾರೆ. ನ. 11ರಂದು ಲವ್ ಯೂ ಮುದ್ದು ಸಿನಿಮಾದ ಪ್ರೀಮಿಯರ್ ಇವೆಂಟ್‌ಗೆ ವೈಷ್ಣವಿ ತುಂಬಾ ಬೋಲ್ಡ್ ಅವತಾರದಲ್ಲಿ ಹಾಜರಾದರು. ಧಾರಾವಾಹಿಗಳಲ್ಲಿ ವೈಷ್ಣವಿ ಅವರನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ನೋಡಿದವರು ಆಕೆಯ ಬೋಲ್ಡ್ ಲುಕ್ ನೋಡಿ ಒಂದು ಕ್ಷಣ ದಂಗಾದರು. ಯಾವಾಗ ವಿಡಿಯೋ ವೈರಲ್ ಆಯ್ತೋ, ವೈಷ್ಣವಿ ಅವರ ಉಡುಗೆಯನ್ನು ಟೀಕಿಸಲು ಶುರು ಮಾಡಿದರು. ನಿಮ್ಮ ಡ್ರೆಸ್ ಕೋಡ್ ಮೇಲೆ ಗಮನ ಇರಲಿ ಎಂದು ಟೀಕಿಸಿದರು.
ವೈಷ್ಣವಿ ಬೆಂಬಲಕ್ಕೆ ನಿಂತ ನಿಶ್ವಿಕಾ
ವೈಷ್ಣವಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುವುದನ್ನು ಗಮನಿಸಿದ ನಟಿ ನಿಶ್ವಿಕಾ, ಆಕೆಯ ಪರ ಧ್ವನಿ ಎತ್ತಿದರು. ಅಲ್ಲದೆ, ಟ್ರೋಲಿಗರ ವಿರುದ್ಧ ಕಿಡಿಕಾರಿದರು. ಒಂದು ಹೆಣ್ಣು ಬೆತ್ತಲೆಯಾಗಿ ನಿಂತಿದ್ದರೂ ಆಕೆಯ ಅನುಮತಿ ಇಲ್ಲದೇ ಕಣ್ಣೆತ್ತಿ ನೋಡಬಾರದು ಎಂದು ನಿಶ್ವಿಕಾ ಹೇಳಿದರು. ಆದರೆ, ನಿಶ್ವಿಕಾ ಹೇಳಿಕೆಯನ್ನೂ ಅನೇಕರು ಟ್ರೋಲ್ ಮಾಡಿದರು. ಉಡುಗೆ ಯಾವಾಗಲೂ ಸಭ್ಯತೆಯಿಂದ ಕೂಡಿರಬೇಕು. ಮನೆಯಲ್ಲಿ ಹೇಗಾದರೂ ಧರಿಸಿ ಆದರೆ, ಸಾರ್ವಜನಿಕ ಸ್ಥಳಕ್ಕೆ ಬಂದಾಗ ನಿಮ್ಮ ಉಡುಗೆ ಸಭ್ಯತೆಯನ್ನು ಮೀರದಿರಲಿ. ಇಂದಿನ ಸಮಾಜಕ್ಕೆ ನೀವು ಕೊಡುವ ಸಂದೇಶ ಇದೇನಾ? ಎಂದು ನೆಟ್ಟಿಗರು ಕಿಡಿಕಾರಿದರು. ಈ ಹಿನ್ನೆಲೆಯಲ್ಲಿ ನಟಿ ರಮ್ಯಾ ಅವರು ನಿಶ್ವಿಕಾ ಪರ ಮಾತನಾಡಿದ್ದಾರೆ.