ಪ್ರಿಯಾಂಕಾ ಕುಮಾರ್ 
ಸ್ಯಾಂಡಲ್‌ವುಡ್

Priyanka Kumar - ಒಳ್ಳೆ ಪಾತ್ರಕ್ಕೆ ಎರಡಲ್ಲ, ಐದು ವರ್ಷ ಕಾಯಲು ರೆಡಿ ಎಂದ ಪ್ರಿಯಾಂಕಾ

Priyanka Kumar -
ತಮಿಳು ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಹೆಗ್ಗಳಿಕೆ ಕನ್ನಡತಿ ಪ್ರಿಯಾಂಕಾ ಕುಮಾರ್​ಗೆ ಸಲ್ಲುತ್ತದೆ. "ಕಾಟ್ರುಕ್ಕೆನ್ನ ವೇಲಿ' ಧಾರಾವಾಹಿಯಲ್ಲಿ 800ಕ್ಕೂ ಅಧಿಕ ಸಂಚಿಕೆಗಳಲ್ಲಿ ಮಿಂಚಿದ ಅವರು, 2023ರಲ್ಲಿ "ಬ್ಯಾಡ್​ ಮ್ಯಾನರ್ಸ್​' ಚಿತ್ರದ ಮೂಲಕ ಕನ್ನಡದಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದರು. ನಂತರ ಕಳೆದ ವರ್ಷ "ದೂರ ತೀರ ಯಾನ', "ರುದ್ರ ಗರುಡ ಪುರಾಣ'ದಲ್ಲಿ ಕಾಣಿಸಿಕೊಂಡಿದ್ದ ಅವರು, ಇದೀಗ "ಅಂದೊಂದಿತ್ತು ಕಾಲ' ನಿರ್ದೇಶಕ ಕೀರ್ತಿ ಆ್ಯಕ್ಷನ್​&ಕಟ್​ ಹೇಳಲಿರುವ, "ಬಿಗ್​ಬಾಸ್​' ಖ್ಯಾತಿಯ ಕಾರ್ತಿಕ್​ ಮಹೇಶ್​ ನಾಯಕನಾಗಿರುವ "ಸೀತಾ ರಾಮ ರಾಜು' ಚಿತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. "ನಾನು ಈ ಚಿತ್ರಕ್ಕೆ ಆಡಿಷನ್​ ಮೂಲಕ ಆಯ್ಕೆಯಾದೆ. ಮೊದಲು ಕೀರ್ತಿ ಇಂರ್ಟವಲ್​ವರೆಗೂ ಕಥೆ ಹೇಳಿದ್ದರು. ನಾನು ಮನೆಗೆ ವಾಪಸ್ಸಾದ ಬಳಿಕವೂ ಕಥೆ ಮುಂದೆ ಏನಾಗುತ್ತದೆ ಅಂತ ಯೋಚಿಸುತ್ತಲೇ ಇದ್ದೆ. ಬಳಿಕ ಭರತನಾಟ್ಯ ಕಾಸ್ಟ್ಯೂಮ್​ನಲ್ಲಿ ಲುಕ್​ ಟೆಸ್ಟ್​ಗೆ ಕರೆದರು. ನಂತರ ನಾನು ಸೀತಾ ಪಾತ್ರಕ್ಕೆ ಸೂಟ್​ ಆಗುತ್ತೇನೆ ಅಂತ ಅನ್ನಿಸಿ ಆಯ್ಕೆ ಮಾಡಿಕೊಂಡರು. ನನ್ನದಿಲ್ಲಿ ಸೀತಾ ಪಾತ್ರ. ನಿರ್ದೇಶಕ ಕೀರ್ತಿ ಒಂದೊಳ್ಳೆ ಪಾತ್ರ ನೀಡಿದ್ದಾರೆ. ನಟನೆಗೆ ಪ್ರಾಮುಖ್ಯವಿರುವ ಪಾತ್ರ, ಸಿನಿಮಾದಲ್ಲಿ ನಟಿಸಬೇಕು ಎಂಬುದು ಪ್ರತಿಯೊಬ್ಬ ಕಲಾವಿದರ ಕನಸು. ನನ್ನ ಆ ಕನಸನ್ನು ಈ ಸಿನಿಮಾ ಈಡೇರಿಸಿದೆ. ಇದು ಕೇವಲ ಲವ್​ಸ್ಟೋರಿಯಲ್ಲ. ನನ್ನ ಪಾತ್ರಕ್ಕೆ ಹಲವು ಲೇಯರ್​ಗಳಿರಲಿವೆ. ತುಂಬ ಕಲಿಯುವುದಿದೆ. ಈ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತೇನೆ ಎಂಬ ಕುತೂಹಲ ನನಗೂ ಇದೆ. ಮೇ ಅಂತ್ಯಕ್ಕೆ ಅಥವಾ ಜೂನ್​ ಮೊದಲ ವಾರ ಶೂಟಿಂಗ್​ ಪ್ರಾರಂಭವಾಗಲಿದೆ. ಅಲ್ಲಿಯವರೆಗೂ ವರ್ಕ್​ಶಾಪ್​ಗಳು ನಡೆಯಲಿವೆ' ಎಂದು ಮಾಹಿತಿ ನೀಡುತ್ತಾರೆ.

ಕಲೆಯೇ ಜೀವನ

"ಸಿನಿಮಾ ಅಂದರೆ ನನಗೆ ತುಂಬ ಇಷ್ಟ. ಸಣ್ಣ ವಯಸ್ಸಿನಿಂದಲೂ ಅದೇ ನನ್ನ ಕನಸು' ಎನ್ನುವ ಪ್ರಿಯಾಂಕಾ, "ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತಿರಬೇಕು, ಜನರ ಮುಂದೆ ಬರುತ್ತಿರಬೇಕು ಎಂಬ ಆಸೆ ಎಲ್ಲ ಕಲಾವಿದರಿಗೂ ಇರುತ್ತದೆ. ಹಾಗಂತ ಹಾಗೆ ಬಂದು ಹೀಗೆ ಹೋಗಲು ನನಗಿಷ್ಟವಿಲ್ಲ. ಅಂತಹ ಪಾತ್ರದಲ್ಲಿ ಕಾಣಿಸಿಕೊಂಡರೆ, ಜನ ಮರೆತುಬಿಡುತ್ತಾರೆ. ಹೀಗಾಗಿ ಎರಡು ವರ್ಷವಾಗಲಿ, ಐದು ವರ್ಷಗಳೇ ಆಗಲಿ ಒಂದೊಳ್ಳೆ ಪಾತ್ರದ ಮೂಲಕ ತುಂಬ ವರ್ಷಗಳ ಕಾಲ ಜನರ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಬೇಕು ಅನ್ನೋದು ನನ್ನಾಸೆ. ಹೀಗಾಗಿ ಮುಂದೆಯೂ ಸಹ ಕಥೆ, ತಡವಾದರೂ ಸರಿ ಒಳ್ಳೆ ಪಾತ್ರಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುತ್ತೇನೆ. ಹೀಗಾಗಿಯೇ ಕನ್ನಡ ಸೇರಿ ಬೇರೆ ಭಾಷೆಗಳಿಂದ ಕಥೆಗಳು ಬಂದರೂ, ನಾನು ಒಪ್ಪಿಲ್ಲ' ಎನ್ನುತ್ತಾರೆ. 10ನೇ ತರಗತಿವರೆಗೆ ಭರತನಾಟ್ಯ ಕಲಿತಿದ್ದ ಪ್ರಿಯಾಂಕಾ ಇದೀಗ "ಸೀತಾ ರಾಮ ರಾಜು'ಗಾಗಿ ಮತ್ತೆ ಭರತನಾಟ್ಯ ತರಬೇತಿ ಪಡೆಯಲಿದ್ದಾರಂತೆ. ಹಾಗೇ "ಕಥಕ್​, ಬಾಕ್ಸಿಂಗ್​, ಜಿಮ್​, ಯೋಗ, ಡ್ರಾಯಿಂಗ್​ ಹೀಗೆ ವಿವಿಧ ಕಲಾ ಪ್ರಕಾರಗಳನ್ನೇ ನಾನು ಕಲಿಯುತ್ತಿದ್ದೇನೆ' ಎಂದು ನಗುತ್ತಾರೆ.