Moksha Kushal - ಮಾಡೆಲಿಂಗ್ನಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಟಿಯರ ಪೈಕಿ ಸದ್ಯ ಹೆಚ್ಚು ಸದ್ದು ಮಾಡುತ್ತಿರುವವರು "ಕೋಟಿ' ಖ್ಯಾತಿಯ ಮೋಕ್ಷಾ ಕುಶಾಲ್. ಸದ್ಯ ಅವರು ಸಿಂಪಲ್ ಸುನಿ ನಿರ್ದೇಶನದ "ಮೋಡ ಕವಿದ ವಾತಾವರಣ' ಚಿತ್ರದಲ್ಲಿ ಬಿಜಿಯಿದ್ದು, ಸಿನಿಮಾ ಇದೇ ಏಪ್ರಿಲ್ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಚಿತ್ರದ ಬಗ್ಗೆ ಮೋಕ್ಷಾ, "ನಾನು "ಸಖತ್' ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದೆ. ಸುನಿ ಸರ್ ಇಷ್ಟಪಟ್ಟಿದ್ದರು. ಆದರೆ, ಕಾರಣಾಂತರಗಳಿಂದ ಸಿನಿಮಾ ನನಗೆ ಸಿಗಲಿಲ್ಲ. ಆದರೆ, ಸುನಿ ಸರ್ ನನ್ನನ್ನು ನೆನಪಿನಲ್ಲಿಟ್ಟುಕೊಂಡಿದ್ದರು. "ಮೋಡ ಕವಿದ ವಾತಾವರಣ' ಪ್ರಾರಂಭವಾಗುತ್ತಲೇ ನಾನು ನಾಯಕಿಯ ಪಾತ್ರಕ್ಕೆ ಸೂಟ್ ಆಗುತ್ತೀನಿ ಅಂತನ್ನಿಸಿ, ಅವಕಾಶ ನೀಡಿದರು. ಕಥೆ ಮತ್ತು ಪಾತ್ರ ನನಗೂ ಇಷ್ಟವಾದ ಕಾರಣ ಒಪ್ಪಿಕೊಂಡೆ. ಇದು ಎಲ್ಲರಿಗೂ ಇಷ್ಟವಾಗುವಂತಹ ಅಂಶಗಳಿರುವ ಸಸ್ಪೆನ್ಸ್ ಥ್ರಿಲ್ಲರ್ ಜತೆಗೆ ಕ್ಯೂಟ್ ಲವ್ಸ್ಟೋರಿ ಇರುವ ಸಿನಿಮಾ. ನಾನು ಯಂಗ್, ಬಬ್ಲಿ ಮತ್ತು ಎನರ್ಜಿಟಿಕ್ ಹುಡುಗಿಯ ಪಾತ್ರದಲ್ಲಿ ನಟಿಸಿದ್ದೇನೆ. ಪಾತ್ರಕ್ಕೆ ಸಿದ್ಧತೆ ಬೇಕಿತ್ತು. ಹೀಗಾಗಿ ವರ್ಕ್ಶಾಪ್ ಮಾಡಿದೆವು. ಕೆಲವೊಮ್ಮೆ ಸುನಿ ಸರ್ ಸ್ಪಾಟ್ನಲ್ಲೇ ಸೀನ್, ಡೈಲಾಗ್ಸ್ ಬದಲಿಸಿಬಿಡುತ್ತಿದ್ದರು. ಇದು "ಮುಂಗಾರು ಮಳೆ' ನೆನಪಿಸುವಂತಹ ಮಲೆನಾಡ ದೃಶ್ಯವೈಭವ' ಎಂದು ಮಾಹಿತಿ ನೀಡುತ್ತಾರೆ. ಶೀಲಂ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ "ಮೋಡ ಕವಿದ ವಾತಾವರಣ'ದಲ್ಲಿ ಇಬ್ಬರು ನಾಯಕಿಯರಿದ್ದು, ಮೋಕ್ಷಾ ಜತೆ ಸಾತ್ವಿಕಾ ಕೂಡ ನಟಿಸಿದ್ದಾರೆ.
ನನಗೆ ನಾನೇ ಸ್ಪರ್ಧಿ
ಸಾಮಾನ್ಯವಾಗಿ ಒಂದೇ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದರೆ, ಅವರವರ ನಡುವೆಯೇ ಚೆನ್ನಾಗಿ ಪಾರ್ಮ್ರ್ ಮಾಡಲು ಸ್ಪರ್ಧೆ ಇರುತ್ತದೆ. ಆದರೆ, "ನಟಿ ಸಾತ್ವಿಕಾ ಕೊನೆಯಲ್ಲಿ ಚಿತ್ರತಂಡ ಸೇರಿಕೊಂಡರು. ಪ್ರತಿ ಶೆಡ್ಯುಲ್ನಲ್ಲೂ 15ರಿಂದ 20 ದಿನಗಳ ಕಾಲ ಚಿಕ್ಕಮಗಳೂರು, ಕಳಸದಲ್ಲಿ ಶೂಟಿಂಗ್ ನಡೆಸಿದ ಕಾರಣ ಇಬ್ಬರೂ ಒಳ್ಳೆ ಫ್ರೆಂಡ್ಸ್ ಆದೆವು. ನಾನು ಚಿತ್ರರಂಗಕ್ಕೆ ಸ್ಪರ್ಧಿಸಲು ಬಂದಿಲ್ಲ. ನನಗೆ ನಾನೇ ದೊಡ್ಡ ಸ್ಪರ್ಧಿ' ಎನ್ನುತ್ತಾರೆ ಮೋಕ್ಷಾ.
ಗುಣಮಟ್ಟ ಮುಖ್ಯ, ಸಂಖ್ಯೆ ಅಲ್ಲ
"ನಟಿ ಅಂತ ಅನ್ನಿಸಿಕೊಳ್ಳಬೇಕು ಅಂತಿದ್ದರೆ ನೂರು ಸಿನಿಮಾ ಮಾಡಿಬಿಡುತ್ತಿದ್ದೆ' ಎನ್ನುವ ಮೋಕ್ಷಾ, "ನಾನು ಆಯ್ಕೆಯ ವಿಷಯದಲ್ಲಿ ತುಂಬ ಎಚ್ಚರ ವಹಿಸುತ್ತೇನೆ. ನಟನೆ ನನಗೆ ಶಿಕ್ಷಣದಂತೆ. ನನ್ನ ಕೆಲಸವನ್ನು ತುಂಬ ಗೌರವಿಸುತ್ತೇನೆ. ಪ್ರತಿ ಪಾತ್ರವೂ ನನ್ನ ನೆನಪಿನಲ್ಲಿ ಉಳಿಯಬೇಕು. ಅಂತಹ ಕಥೆ, ಪಾತ್ರ ಸಿಕ್ಕರಷ್ಟೇ ನಟಿಸುತ್ತೇನೆ. ನಾಯಕಿಯರ ಶೆಲ್ಫ್ ಲೈಫ್ ಮೊದಲು ಕಡಿಮೆ ಇತ್ತು. ಈಗ ಅದೆಲ್ಲ ಬದಲಾಗಿದೆ. ಖುಷಿ ರವಿ ಅವರಂತಹ ನಟಿಯರು ಮದುವೆ, ಮಕ್ಕಳಾದ ಬಳಿಕವೂ ನಾಯಕಿಯಾಗಿದ್ದಾರೆ. ಪ್ರತಿಭೆ, ಇಂಟರೆಸ್ಟ್, ಪ್ಯಾಷನ್ ಇದ್ದರೆ ದೇವರೇ ಗುರಿ ತೋರಿಸುತ್ತಾನೆ. ನಾನೇನೋ ಕಥೆಗಳನ್ನು ಕೇಳುತ್ತಿದ್ದೇನೆ. ಈ ವರ್ಷದೊಳಗೆ ಇನ್ನೊಂದು ಸಿನಿಮಾ ಸೈನ್ ಮಾಡಲಿದ್ದೇನೆ. ಮತ್ತೊಂದು ತೆಲುಗು ಚಿತ್ರದ ಮಾತುಕತೆ ಕೂಡ ನಡೆಯುತ್ತಿದೆ. ನಾಯಕಿಯರನ್ನು ಗ್ಲಾಮರಸ್ ಆಗಿ ನೋಡುತ್ತಾರೆ. ಆದರೆ, ನನ್ನದು ಈ ಚಿತ್ರದಲ್ಲಿ ಎಲ್ಲ ಭಾವನೆಗಳನ್ನೂ ಅನುಭವಿಸುವ ಸವಾಲಿನ ಪಾತ್ರವಾಗಿತ್ತು. ನಾನು ತುಂಬ ಚೆನ್ನಾಗಿ ಬಳಸಿಕೊಂಡಿದ್ದೇನೆ. ಹೀಗಾಗಿ "ಮೋಡ ಕವಿದ ವಾತಾವರಣ' ಬಿಡುಗಡೆಯ ಬಳಿಕ ಇನ್ನಷ್ಟು ಉತ್ತಮ ಅವಕಾಶಗಳು ಬರುವ ನಿರೀೆ ಇದೆ' ಎಂದು ಭರವಸೆ ವ್ಯಕ್ತಪಡಿಸುತ್ತಾರೆ.