ಮೇಘನಾ ರಾಜ್ 16 ವರ್ಷಗಳ ಕರಿಯರ್ನಲ್ಲಿ ಕನ್ನಡ ಸೇರಿ, ಮಲಯಾಳಂ, ತೆಲುಗು, ತಮಿಳಿನಲ್ಲಿ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇಂತಹ ಮೇಘನಾ 2019ರ "ಕುರುಕ್ಷೇತ್ರ' ಬಳಿಕ ಚಿರು ಸರ್ಜಾ ಜತೆ ಮದುವೆ, ಪುತ್ರ ರಾಯನ್ ರಾಜ್ ಸರ್ಜಾಗಾಗಿ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದರು. 2022ರಲ್ಲಿ "ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಮೂಲಕ ಕಮ್ಬ್ಯಾಕ್ ಮಾಡಿದ ಅವರು, 2023ರಲ್ಲಿ "ತತ್ಸಮ ತದ್ಭವ'ದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ "ಬುದ್ಧಿವಂತ 2'ರಲ್ಲಿ ನಟಿಸಿದ್ದರೂ, ಅದರ ಬಿಡುಗಡೆ ತಡವಾಗಿದೆ. ಅದರ ನಡುವೆಯೇ ಮೇಘನಾ ಸದ್ಯ ತಲಾ ಒಂದು ಕನ್ನಡ, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಕರ್ನಾಟಕದ ಹೆಸರಾಂತ ರಾಜಕಾರಣಿಯೊಬ್ಬರ ಬಯೋಪಿಕ್ನಲ್ಲಿ ಮೇನಾ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಈಗಿನ್ನೂ ಈ ಸಿನಿಮಾ ಮಾತುಕತೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಸದ್ಯ ಮೇಘನಾ ರಾಜ್ ಕೋಮಲ್ಗೆ ನಾಯಕಿಯಾಗಿ, "ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್'ನಲ್ಲಿ ನಟಿಸುತ್ತಿದ್ದಾರೆ. ಹಾಗೇ ಏಳು ವರ್ಷಗಳ ಬಳಿಕ ಮಲಯಾಳಂಗೆ ಕಮ್ಬ್ಯಾಕ್ ಮಾಡಿರುವ ಅವರು ಸಂಸದ, ನಟ ಸುರೇಶ್ ಗೋಪಿಗೆ ನಾಯಕಿಯಾಗಿ "ಒಟ್ಟಕೊಂಬನ್'ನಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು "ಜೈಲರ್ 2' ಮೂಲಕ ಮೇಘನಾ 14 ವರ್ಷಗಳ ನಂತರ ತಮಿಳಿಗೂ ಕಮ್ಬ್ಯಾಕ್ ಮಾಡಿರುವುದು ಬಹುತೇಕ ಪಕ್ಕಾ ಆಗಿದ್ದು, ಆ ಬಗ್ಗೆ ಚಿತ್ರತಂಡ ಅಥವಾ ಖುದ್ದು ಅವರೇ ಅಧಿಕೃತ ಮಾಹಿತಿ ನೀಡಬೇಕಿದೆ.
ಮುದ್ದು ಮಗನ ಬಗ್ಗೆ ಮಾತನಾಡುವ ಮೇಘನಾ, "ರಾಯನ್ ಈಗ ಮಾಂಟ್ 3ಗೆ ಹೋಗುತ್ತಿದ್ದಾನೆ. ಮದುವೆಯ ಬಳಿಕ ಕನ್ನಡದಲ್ಲೇ ಹೆಚ್ಚು ಬಿಜಿಯಿದ್ದೆ. ಬೆಂಗಳೂರಿನಲ್ಲೇ ಚಿತ್ರೀಕರಣ ಇದ್ದರೆ ಸಮಸ್ಯೆ ಇಲ್ಲ. "ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್' ಚಿತ್ರೀಕರಣ 25 ದಿನಗಳ ಕಾಲ ಕುಂದಾಪುರದಲ್ಲಿತ್ತು. ಮಲಯಾಳಂನ "ಒಟ್ಟಕೊಂಬನ್' ಶೂಟಿಂಗ್ ಕೇರಳದಲ್ಲಿ 30 ದಿನ ಇತ್ತು. ಹೀಗೆ ದೂರ ಹೋದ ಸಮಯದಲ್ಲಿ ರಾಯನ್ಗೆ ಸಮಯ ಕೊಡಲಾಗುವುದಿಲ್ಲ. ಆ ಬೇಸರ ಅವನಿಗೆ ಈಗಲೇ ಅರ್ಥವಾಗದಿದ್ದರೂ, ನನಗಂತೂ ಇದೆ. ಹೀಗಾಗಿಯೇ ನಾನೂ ಸಿನಿಮಾದಿಂದ ಗ್ಯಾಪ್ ತೆಗೆದುಕೊಂಡಿದ್ದೆ. ಈಗೀಗ ರಾಯನ್ಗೂ ಅಭ್ಯಾಸವಾಗಿದೆ. ದಿನಕ್ಕೆ 20ರಿಂದ 25 ಬಾರಿ ವಿಡಿಯೋ ಕಾಲ್ ಮಾಡುತ್ತೇನೆ. ವಾಪಸ್ ಬರುವಾಗ ಏನಾದರೂ ಗಿಫ್ಟ್ ತರಬೇಕು ಎನ್ನುತ್ತಿರುತ್ತಾನೆ' ಎಂದು ನಗುತ್ತಾರೆ.
ಕನ್ನಡದಲ್ಲೂ ವೆಬ್ಸರಣಿಗಳು ಬರಬೇಕು
ಮೇಘನಾಗೆ ವೆಬ್ಸರಣಿಗಳಲ್ಲೂ ಅವಕಾಶಗಳು ಬಂದಿವೆಯಂತೆ. ಆದರೆ, "ನನಗೆ ಮತ್ತು ವೀಕ್ಷಕರಿಗೂ ಇಷ್ಟವಾಗುವ ಕಂಟೆಂಟ್ನಲ್ಲಿ ನಟಿಸಬೇಕು ಅಂತ ಆಸೆ ಇದೆ. ಹೀಗಾಗಿ ಒಪ್ಪಿಲ್ಲ. ತಮಿಳು, ತೆಲುಗಿನಲ್ಲಿ ಸರಣಿಗಳು ಬರುತ್ತಿವೆ. ಹಾಗೇ ಕನ್ನಡದಲ್ಲೂ ಹೆಚ್ಚಾಗಬೇಕು. ನಾವು ಕಂಟೆಂಟ್ ಕೊಟ್ಟರೆ ಜನ ನೋಡುತ್ತಾರೆ. ನಾವು ಕೊಡದೇ ಜನ ನೋಡುವುದಿಲ್ಲ ಅಂದರೆ ತಪ್ಪು. ಒಳ್ಳೊಳ್ಳೆ ನಿರ್ದೇಶಕರಿದ್ದಾರೆ. ಅವರನ್ನು ಉಪಯೋಗಿಸಿಕೊಂಡು ನಿರ್ಮಾಪಕರು ವೆಬ್ಸರಣಿಗಳನ್ನೂ ಮಾಡಬಹುದು. ಅದಕ್ಕೆ ತಕ್ಕಂತೆ ಒಟಿಟಿಯವರೂ ಕನ್ನಡ ಕಂಟೆಂಟ್ಗೂ ಪ್ರಾಮುಖ್ಯ ನೀಡಬೇಕು' ಎನ್ನುತ್ತಾರೆ.