Malaika Vasupal - "ಉಪಾಧ್ಯಕ್ಷ' ಮತ್ತು "ವಿದ್ಯಾಪತಿ' ಚಿತ್ರಗಳ ಬಳಿಕ ಮಲೈಕಾ ವಸುಪಾಲ್ ನಟಿಸಿರುವ ಮೂರನೇ ಚಿತ್ರ "ಕಲ್ಟ್'. "ಉಪಾಧ್ಯಕ್ಷ' ನಿರ್ದೇಶಕ ಅನಿಲ್ ಕುಮಾರ್ ಆ್ಯಕ್ಷನ್-ಕಟ್ ಹೇಳಿರುವ ರೊಮ್ಯಾಂಟಿಕ್ ಡ್ರಾಮಾಗೆ "ಬನಾರಸ್' ಝೈದ್ ಖಾನ್ ನಾಯಕನಾಗಿದ್ದು, ಅವರಿಗೆ ರಚಿತಾ ರಾಮ್ ಮತ್ತು ಮಲೈಕಾ ಇಬ್ಬರು ನಾಯಕಿಯರು. ಸಿನಿಮಾ ಇದೇ ಶುಕ್ರವಾರ (ಜ. 23) ತೆರೆಗೆ ಬರಲಿದ್ದು, ಅದೇ ಖುಷಿಯಲ್ಲಿ ಮಲೈಕಾ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. "ಸಿನಿಮಾ, ಸೀರಿಯಲ್ನಲ್ಲಿ ಮುದ್ದಾದ, ಬಬ್ಲಿ, ಕ್ಯೂಟ್ ಪಾತ್ರಗಳಲ್ಲಿ ನಟಿಸಿದ್ದೆ. ಆದರೆ, "ಕಲ್ಟ್'ನಲ್ಲಿ ನನ್ನ ಕರಿಯರ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಪಾತ್ರದಲ್ಲಿ ನಟಿಸಿದ್ದೇನೆ. ಈ ಪಾತ್ರ ಒಪ್ಪಿಕೊಳ್ಳಲು ಈಕೆಗೆ ಎಷ್ಟು ಧೈರ್ಯ ಅಂತ ಜನ ಮೆಚ್ಚುಗೆ ವ್ಯಕ್ತಪಡಿಸಬಹುದು ಅಥವಾ ಬೈಯಲೂಬಹುದು. ಅಂತಹ ಪಾತ್ರ. ಅನಿಲ್ ಸರ್ ನನಗೆ ಕಥೆ ಹೇಳುವಾಗ ಕಷ್ಟ ಇರಬಹುದು ಅಂತನ್ನಿಸುತ್ತಿತ್ತು. ಆದರೆ, ಒಮ್ಮೆ ಶೂಟಿಂಗ್ ಪ್ರಾರಂಭವಾದ ಬಳಿಕ, ಕಷ್ಟ ಅನ್ನಿಸಲಿಲ್ಲ. ನಾನಿಲ್ಲಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಲವ್ಸ್ಟೋರಿಗಳು ಹಲವು ಬಂದಿವೆ. ಆದರೆ, ಬರವಣಿಗೆ, ಕಥೆ ಮತ್ತು ಚಿತ್ರಕಥೆ ಬಹಳ ವಿಭಿನ್ನವಾಗಿರುವುದೇ "ಕಲ್ಟ್' ವಿಶೇಷ' ಎಂದು ಮಾಹಿತಿ ನೀಡುತ್ತಾರೆ ಮಲೈಕಾ.
ರಚಿತಾ ಜತೆ ಸ್ಪರ್ಧೆ ಇಲ್ಲ
ಈಗಾಗಲೇ ಸ್ಟಾರ್ಡಂ ಇರುವ ನಟಿ ರಚಿತಾ ರಾಮ್ ಜತೆ ತೆರೆ ಹಂಚಿಕೊಂಡಿದ್ದರ ಬಗ್ಗೆ ಮಲೈಕಾ, "ನಾನು ಈ ವಿಷಯದಲ್ಲಿ ಅನಿಲ್ ಸರ್ನ ಸಂಪೂರ್ಣವಾಗಿ ನಂಬಿದ್ದೆ. ಅವರು ರಚಿತಾ, ಝೈದ್ ಸೇರಿ ನಮ್ಮ ಮೂರು ಜನರ ಪಾತ್ರಗಳಿಗೂ ಸಮನಾಗಿ ಪ್ರಾಮುಖ್ಯ ನೀಡಿದ್ದಾರೆ. ಯಾರಿಗೂ ಹೆಚ್ಚು ಕಡಿಮೆ ಮಾಡಿಲ್ಲ. ನಾನು, ಝೈದ್ ಮತ್ತು ರಚಿತಾ ಮೂವರೂ ತೆರೆ ಹಂಚಿಕೊಂಡಿರುವ ಸನ್ನಿವೇಶವೂ ಇದೆ. ಆದರೆ, ಅದರಲ್ಲಿ ಸಂಭಾಷಣೆಗಳಿಲ್ಲ. ಮಾತನಾಡದೇ ತುಂಬ ವಿಷಯಗಳು ನಡೆಯುತ್ತಿರುತ್ತವೆ. ರಚಿತಾ ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತಾರೆ. ನನ್ನದು ಕಿಕ್ ಕೊಡುವ ಪಾತ್ರ. ಎದುರು ರಚಿತಾ ರಾಮ್ ಅಥವಾ ಝೈದ್ ಯಾರೇ ಇರಲಿ, ನನ್ನ ಕೆಲಸ ನಾನು ಸರಿಯಾಗಿ ಮಾಡಬೇಕು ಎಂಬುದಷ್ಟೇ ನನ್ನ ಗಮನದಲ್ಲಿತ್ತು' ಎನ್ನುತ್ತಾರೆ.
ಬೋಲ್ಡ್ ಅಲ್ಲ, ಬ್ಯೂಟಿಫುಲ್!
"ಕಲ್ಟ್' ಫಸ್ಟ್ ಲುಕ್ ರಿಲೀಸ್ ಆದಾಗಿನಿಂದಲೂ, ಇದೊಂದು ಬೋಲ್ಡ್ ಸಿನಿಮಾ ಇರಬಹುದು ಅಂತ ಹಲವರಿಗೆ ಅನ್ನಿಸಿತ್ತು. ಆದರೆ, "ಇದು ಬೋಲ್ಡ್ ಚಿತ್ರವಲ್ಲ' ಎನ್ನುವ ಮಲೈಕಾ, "ನಾನು ಸಿನಿಮಾ ಒಪ್ಪಲು ಕಿಸ್ಸಿಂಗ್ ಸೀನ್ ಮಾಡುವುದಿಲ್ಲ ಅಂತ ಕಂಡೀಷನ್ ಹಾಕಿದ್ದೆ. ಅಂತಹ ಸೀನ್ಗಳಲ್ಲಿ ನಟಿಸಬಾರದು ಅಂತ ನಾನೇ ಬೌಂಡರಿ ಹಾಕಿಕೊಂಡಿದ್ದೇನೆ. ಕನ್ನಡ ಅಂತಲ್ಲ, ಬೇರೆ ಭಾಷೆಗಳ ಸಿನಿಮಾಗಳಲ್ಲಿ ಅವಕಾಶ ಸಿಕ್ಕರೂ ನಾನು ಅಂತಹ ಸೀನ್ಗಳನ್ನು ಮಾಡುವುದಿಲ್ಲ. ಸಿನಿಮಾಗಾಗಿ ನಮ್ಮ ಸಂಪ್ರದಾಯ, ಸಂಸತಿ ಮೀರಲು ಸಾಧ್ಯವಿಲ್ಲ. ಎಲ್ಲದಕ್ಕೂ ಒಂದು ಬೌಂಡರಿ ಅಂತ ಇರುತ್ತದೆ. ಅದರ ಒಳಗೇ ಸಿನಿಮಾ ಒಪ್ಪಿಕೊಂಡು, ಮಾಡುತ್ತಿದ್ದೇನೆ. ಕಿಸ್ಸಿಂಗ್ ಸೀನ್ ಮಾಡಲು ಝೈದ್ ಕೂಡ ರೆಡಿ ಇರಲಿಲ್ಲ. ಸರಸ-ಸಲ್ಲಾಪದ ದೃಶ್ಯಗಳೂ ಅಷ್ಟೇ, ಸೀಮಿತವಾಗಿರಬೇಕು' ಎಂದು ಹೇಳಿಕೊಳ್ಳುತ್ತಾರೆ.