ಬೆಂಗಳೂರು : ‘ದಿಯಾ’ ನಟಿ ಖುಷಿ ರವಿ ನಾಡಹಬ್ಬ ದಸರಾದ ಸಂಭ್ರಮದಲ್ಲಿದ್ದಾರೆ. ಮನೆಯಲ್ಲಿ ಸರಳವಾಗಿ ಹಬ್ಬದ ಆಚರಿಸುತ್ತಿದ್ದಾರೆ. ಇದೇ ವೇಳೆ ನಟಿಗೆ ಎರಡು ಸಿನಿಮಾಗಳು ಅಪ್ಡೇಟ್ ದೊರೆತಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ನವರಾತ್ರಿ ಖುಷಿ ಹೆಚ್ಚಿಸಿದೆ. ಹಬ್ಬದ ವಿಶೇಷತೆ ಬಗ್ಗೆ ಖುಷಿ ರವಿ, ‘ಮನೆಯಲ್ಲಿ ನವರಾತ್ರಿ ಆಚರಣೆ ಸರಳವಾಗಿರುತ್ತದೆ. ವರಮಹಾಲಕ್ಷ್ಮೀ ಹಬ್ಬ, ಗಣೇಶ ಚೌತಿಯಲ್ಲಿ ನಾವು ವ್ರತಗಳನ್ನು ಕೈಗೊಳ್ಳುವುದರಿಂದ ನವರಾತ್ರಿಗೆ ಮನೆಯಲ್ಲಿ ಕೇವಲ ಪೂಜೆಯಷ್ಟೇ ಮಾಡುವುದು. ಬೆಳಗ್ಗೆ ಅತ್ತೆ ಅಥವಾ ನಾನು ದೇವಿಯ ಪೂಜೆ ಮಾಡಿ, ಬಳಿಕ ದೇವಸ್ಥಾನಗಳಿಗೆ ತೆರಳುತ್ತಿದ್ದೇವೆ. ಹಬ್ಬದ ಸಮಯದಲ್ಲಿಯೇ ಕಾಮಾಕ್ಯ ಕ್ಷೇತ್ರಕ್ಕೆ ಹೋಗಿ ದೇವಿಯ ದರ್ಶನ ಪಡೆದು ಬಂದಿರುವುದು ವಿಶೇಷ. ಇನ್ನು ಬೆಂಗಳೂರಿನಲ್ಲಿಯೇ ಇದ್ದರೂ ರಾಜರಾಜೇಶ್ವರಿನಗರದ ದೇವಸ್ಥಾನಕ್ಕೆ ಹೋಗಲು ಆಗಿರಲಿಲ್ಲ. ಇತ್ತೀಚೆಗಷ್ಟೇ ಅಲ್ಲಿಗೆ ಹೋಗಿ ದೇವಿಯ ದರ್ಶನ ಪಡೆದುಬಂದೆ. ಇನ್ನು ಸ್ನೇಹಿತರು, ಬಂಧುಗಳ ಕರೆ ಮೇರೆಗೆ ಅವರ ಮನೆಗೆ ಹೋಗಿ ಗೊಂಬೆಗಳನ್ನು ಕೂರಿಸಿರುವುದನ್ನು ನೋಡಿ, ಪ್ರಸಾದ ಸ್ವೀಕರಿಸಿ ಬರುತ್ತಿದ್ದೇವೆ. ದೇವರಲ್ಲಿ ವಿಶೇಷ ಪ್ರಾರ್ಥನೆ ಕೇಳುವುದಕ್ಕಿಂತ ದೇವಿಗೆ ಮೊದಲು ನಾನು ಧನ್ಯವಾದ ಹೇಳಲೇಬೇಕು. ನನ್ನೆಲ್ಲ ಪರಿಶ್ರಮದ ಕೆಲಸಗಳ ಹಿಂದೆ ದೇವಿಯ ಆಶೀರ್ವಾದ ಇದ್ದೇ ಇದೆ. ಪ್ರತಿ ದಸರಾದಲ್ಲೂ ನಾನು ಸಿನಿಮಾಗಳ ಶೂಟಿಂಗ್ ಅಥವಾ ಪ್ರಚಾರದಲ್ಲಿ ಬಿಜಿ ಇರುತ್ತೇನೆ. ಇದು ತಾಯಿ ದುರ್ಗಾಮಾತೆ ನನಗೆ ನೀಡಿದ ಆಶೀರ್ವಾದ ಎಂದೇ ಭಾವಿಸುವೆ. ಇನ್ನು ನವರಾತ್ರಿ ಎಂದರೆ ನಮ್ಮೊಳಗೆ ಸಕರಾತ್ಮಕ ಅಂಶವನ್ನು ಬಿತ್ತುವ ದಿನಗಳ ಹಬ್ಬದ ಜತೆಗೆ ದೇವಿಯನ್ನು ವಿವಿಧ ಅವತಾರಗಳಲ್ಲಿ ಕಾಣಬಹುದಾಗಿದೆ’ ಎಂದು ನಟಿ ಹೇಳಿಕೊಳ್ಳುತ್ತಾರೆ.
ನವರಾತ್ರಿ ದಿನಗಳಲ್ಲಿಯೇ ನಟಿ ಖುಷಿ ರವಿಗೆ ಎರಡು ಸಿನಿಮಾಗಳ ಮಹತ್ವದ ಅಪ್ಡೇಟ್ ದೊರತಿದೆ. ನಟಿ ಮುಖ್ಯಭೂಮಿಕೆಯಲ್ಲಿರುವ ‘ಅಯ್ಯನಮನೆ 2’ ವೆಬ್ ಸರಣಿಯು ದಸರಾ ಹಬ್ಬದ ಮರುದಿನ ಅಂದರೆ, ಇದೇ ಅ. 23ಕ್ಕೆ ಬಿಡುಗಡೆಯಾಗುತ್ತಿದೆ. ಹಾಗೆಯೇ, ನವರಾತ್ರಿ ಆರಂಭದ ಮೊದಲ ದಿನವೇ ನಟಿಯ ‘ನಾಕುತಂತಿ’ ಟೀಸರ್ ಅನಾವರಣಗೊಂಡಿತ್ತು. ಈ ಎರಡು ಸಿನಿಮಾಗಳ ಟೀಸರ್, ಟ್ರೇಲರ್ಗಳಿಗೆ ಉತ್ತಮ ಪ್ರತಿಕ್ರಿಯೆವ್ಯಕ್ತವಾಗುತ್ತಿದೆ. ‘ಈ ಎರಡು ಪ್ರಾಜೆಕ್ಟ್ಗಳು ನನ್ನ ವೃತ್ತಿಜೀವನದಲ್ಲಿ ಮೈಲಿಗಲ್ಲಾಗಲಿವೆ. ಈ ಹಿಂದೆ ನನ್ನ ‘ದಿಯಾ’ ಮೂಲಕ ಗುರುತಿಸುತ್ತಿದ್ದ ಪ್ರೇಕ್ಷಕರು ಇದೀಗ ‘ಅಯ್ಯನ ಮನೆ’ ಬಳಿಕ ‘ಜಾಜಿ’ ಎಂದೇ ಕರೆಯುತ್ತಿದ್ದಾರೆ’ ಎಂದು ಖುಷಿ ರವಿ ಹೇಳಿಕೊಳ್ಳುತ್ತಾರೆ.