- ಚೌಕಿದಾರ್ ಚಿತ್ರದಲ್ಲಿ ಧನ್ಯಾ ರಾಮ್‌ಕುಮಾರ್ ಹೊಸ ಅವತಾರ
- ಕಾಲಾಪತ್ಥರ್ ಬಳಿಕ ಮತ್ತೊಮ್ಮೆ ಹಳ್ಳಿಹುಡುಗಿಯಾಗಿ ಕಾಣಿಸಿಕೊಂಡ ನಟಿ
- ಚೈತ್ರಾ ಪಾತ್ರ ತುಂಬಾ ಸವಾಲಾಗಿತ್ತು ಎಂದ ನಟಿ
ಬೆಂಗಳೂರು : ಸಾಮಾನ್ಯವಾಗಿ ನಟಿಯರು ಸಿನಿಮಾಗಳಲ್ಲಿ ಹೆಚ್ಚು ಗ್ಲಾಮರಸ್ ಹಾಗೂ ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಹೀಗಾಗಿಯೇ ಕರಿಯರ್ ಪ್ರಾರಂಭದಲ್ಲಿಯೇ ಡಿ-ಗ್ಲಾಮ್ ರೋಲ್ ಮಾಡುವವರು ವಿರಳ. ಆದರೆ, ‘ನಿನ್ನ ಸನಿಹಕೆ’, ‘ಕಾಲಾಪತ್ಥರ್’, ‘ಪೌಡರ್’ ಸೇರಿ ಐದು ಚಿತ್ರಗಳಲ್ಲಿ ನಟಿಸಿರುವ ‘ದೊಡ್ಮನೆ’ ಕುಡಿ ಧನ್ಯಾ ರಾಮ್‌ಕುಮಾರ್ ಹಾಗಲ್ಲ. ಈಗಾಗಲೇ ‘ಕಾಲಾಪತ್ಥರ್’ ಚಿತ್ರದಲ್ಲಿ ಸಾಮಾನ್ಯ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಅವರು, ಇದೀಗ ‘ಚೌಕಿದಾರ್’ನಲ್ಲೂ ಸಂಪೂರ್ಣ ಡಿ-ಗ್ಲಾಮರ್ ಲುಕ್‌ನಲ್ಲಿ ಮಿಂಚಿದ್ದಾರೆ. ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಈ ಚಿತ್ರಕ್ಕೆ ಪೃಥ್ವಿ ಅಂಬಾರ್ ನಾಯಕನಾಗಿದ್ದು, ಅವರಿಗೆ ಧನ್ಯಾ ಜೋಡಿಯಾಗಿದ್ದಾರೆ. ಇಂದು (ಜ.30) ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾತ್ರದ ಕುರಿತು ‘ವಿಜಯವಾಣಿ’ ಜತೆ ಧನ್ಯಾ, ‘‘ಕಾಲಾಪತ್ಥರ್’ ಶೂಟಿಂಗ್ ಸಮಯದಲ್ಲಿ ಈ ಚಿತ್ರಕ್ಕೆ ಸಹಿ ಮಾಡಿದ್ದೆ. ‘ಕಾಲಾಪತ್ಥರ್’ನಲ್ಲಿ ಸಾಮಾನ್ಯ ಹಳ್ಳಿ ಹುಡುಗಿಯಾಗಿದ್ದೆ. ‘ಚೌಕಿದಾರ್’ನಲ್ಲಿ ಖಡಕ್, ರ್ ಆ್ಯಂಡ್ ಟ್ ಅನಿಸುವ ಚೈತ್ರಾ ಎಂಬ ಪಾತ್ರದಲ್ಲಿದ್ದೇನೆ. ತಂದೆ ಕೂಡ ಅವಳನ್ನು ಹಾಗೆಯೇ ಬೆಳೆಸಿರುತ್ತಾರೆ. ಆಕೆಯ ರಗಡ್ ಮ್ಯಾನರಿಸಂ ಕೆಲವು ದೃಶ್ಯಗಳಿಗೆ ಸೀಮಿತವಾಗದೆ ಇಡೀ ಕಥೆಯಲ್ಲಿ ಸಾಗುತ್ತದೆ. ಈವರೆಗೆ ನಾನು ಮಾಡಿದ ಚಿತ್ರಗಳಲ್ಲಿ ಹೆಚ್ಚು ಇಷ್ಟವಾದ ಹಾಗೂ ಸವಾಲಿನ ಪಾತ್ರವಿದು. ಚೈತ್ರಾಳ ಬದುಕು ಮತ್ತು ನನ್ನ ವೈಯಕ್ತಿಕ ಜೀವನ ಶೈಲಿಗೆ ಅಜಗಜಾಂತರ ವ್ಯತ್ಯಾಸವಿದೆ. ಅವಳ ಬದುಕಿನಲ್ಲಿ ನಡೆಯುವ ಒಂದು ಘಟನೆಯೂ ನನ್ನ ಬದುಕಿನಲ್ಲಿ ನಡೆದಿಲ್ಲ. ಹೀಗಾಗಿ, ಅವಳಾಗಿ ಜೀವಿಸುವುದು ಕಷ್ಟವಾಗಿತ್ತು. ಅನುಭವಕ್ಕೆ ದಕ್ಕದ ಭಾವನೆಗಳನ್ನು ವ್ಯಕ್ತಪಡಿಸುವುದು ಸವಾಲೇ ಸರಿ. ತುಂಬಾ ತಯಾರಿ ನಡೆಸಿ ಬಂದರೆ ನಾಟಕೀಯವಾಗಿ ಬಿಡುತ್ತದೆ ಎಂಬ ಕಾರಣಕ್ಕೆ ಸಾಧ್ಯವಾದಷ್ಟು ಸಹಜವಾಗಿ ನಟಿಸಿದ್ದೇನೆ. ಇಡೀ ತಂಡ ಬೆಂಬಲವಾಗಿತ್ತು’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.
ಮಾಮನ ಮಾತು ಉಳಿಸಿಕೊಳ್ಳುವೆ
‘ಚೌಕಿದಾರ್’ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಧನ್ಯಾ ಬಗ್ಗೆ ನಟ ಶಿವರಾಜಕುಮಾರ್ ಮೆಚ್ಚುಗೆ ಮಾತುಗಳನ್ನಾಡಿ, ‘ಅದ್ಭುತ ಕಲಾವಿದೆ’ ಎಂದಿದ್ದರು. ಈ ಬಗ್ಗೆ ಧನ್ಯಾ, ‘ಶಿವು ಮಾಮ ಆಡಿದ ಮೆಚ್ಚುಗೆ ಮಾತುಗಳು ನನ್ನ ಜವಾಬ್ದಾರಿ ಹೆಚ್ಚಿಸಿವೆ. ವಿಭಿನ್ನ, ಅಚ್ಚರಿ ಅನಿಸುವ ಪಾತ್ರಗಳಲ್ಲಿ ಕಾಣಿಸಿಕೊಂಡು, ಚೆನ್ನಾಗಿ ಕೆಲಸ ಮಾಡಿ, ಅವರ ಮಾತು ಉಳಿಸಿಕೊಳ್ಳುವೆ. ವಿಜ್ಞಾನ ಕ್ಷೇತ್ರದಲ್ಲಿ ಹೊಸ ಅನ್ವೇಷಣೆಗಳಾಗುವಂತೆ, ಕಲಾವಿದರು ಕೂಡ ಹೊಸ ಪ್ರಯೋಗಗಳಿಗೆ ಮುಂದಾಗಬೇಕು. ಸದ್ಯ ಎರಡು-ಮೂರು ಕಥೆಗಳನ್ನು ಕೇಳಿದ್ದೇನೆ. ಒಳ್ಳೆಯ ಕಥೆ ಬಂದರೆ ಸಹೋದರ ಧಿರೇನ್, ತಂದೆ ರಾಮಕುಮಾರ್ ಜತೆ ಸಿನಿಮಾ ಮಾಡುತ್ತೇನೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.