ನಿಶ್ಚಿತಾರ್ಥ ಆಯ್ತು ಆದ್ರೆ ಹೋಗ್ಲಿಲ್ಲ, ಮದ್ವೆಗೆ ಕರೀರಿ ಮರಿಬೇಡಿ: ಎಂಗೇಜ್ಮೆಂಟ್ ವದಂತಿಗೆ ಅನುಪಮಾ ಗೌಡ ಟಾಂಗ್! Anupama Gowda 
ಸ್ಯಾಂಡಲ್‌ವುಡ್

ನಿಶ್ಚಿತಾರ್ಥ ಆಯ್ತು ಆದ್ರೆ ಹೋಗ್ಲಿಲ್ಲ, ಮದ್ವೆಗೆ ಕರೀರಿ ಮರಿಬೇಡಿ: ಎಂಗೇಜ್ಮೆಂಟ್ ವದಂತಿಗೆ ಅನುಪಮಾ ಗೌಡ ಟಾಂಗ್! Anupama Gowda

ಪ್ರಮುಖ ಮುಖ್ಯಾಂಶಗಳು

  • ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ಕೊಟ್ಟ ಅನುಪಮಾ ಗೌಡ
  • ಲೈಕ್ಸ್​, ಕಾಮೆಂಟ್ಸ್​​ಗಾಗಿ ಇಷ್ಟೆಲ್ಲ ಗಮನ ಕೊಡೋ ನೀವು ಮದುವೆನೂ ಮಾಡಿ ನಮ್ಮನ್ನು ಕರೆದು ಬಿಡಿ
  • ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ಗಳ ವಿರುದ್ಧ ಕಿಡಿಕಾರಿದ ಅನುಪಮಾ ಗೌಡ
Anupama Gowda : ಗಿಚ್ಚಿಗಿಲಿಯಲ್ಲಿ ನಿರೂಪಕಿಯಾಗಿಯೂ ಮಿಂಚುತ್ತಿರುವ ಅನುಪಮಾ ಗೌಡ ನಟಿಯೂ ಹೌದು. ಅಕ್ಕ ಸೀರಿಯಲ್ ಮೂಲಕ ಹೆಚ್ಚಾಗಿ ಕಿರುತರೆಯಲ್ಲಿ ಚಿರಪರಿಚಿತರೆನಿಸಿಕೊಂಡರು. ಇತ್ತೀಚೆಗೆ ತಮ್ಮ 35ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಅಂದು ಅವರ ಸ್ನೇಹಿತ ರಾಘವ್, ಆತ್ಮೀಯ ಫೋಟೋಗಳನ್ನು ಹಂಚಿಕೊಂಡು ವಿಶ್ ಮಾಡಿದ್ದರು. ಇದೇ ಫೋಟೋಗಳನ್ನು ಬಳಸಿ ಇಬ್ಬರಿಗೂ ನಿಶ್ಚಿತಾರ್ಥವಾಗಿದೆ ಎಂದು ಗುಲ್ಲೆಬ್ಬಿಸಲಾಗಿತ್ತು. ವದಂತಿಗಳನ್ನು ಕಂಡು ಅನುಪಮಾ ಅವರು ಖಡಕ್​ ಆಗಿ ತಿರುಗೇಟು ಕೊಡುವ ಮೂಲಕ ಊಹಾಪೋಹಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ. 
ಸಿನಿಮಾ ರಂಗ ಹಾಗೂ ಕ್ರಿಕೆಟ್​ ತಾರೆಯರ ಖಾಸಗಿ ವಿಚಾರಗಳು ಲೀಕ್​ ಆಗೋದು ಅಥವಾ ಊಹೆಗಳು ಹಬ್ಬೋದು ಹೊಸದೇನಲ್ಲ. ಕೆಲವೊಂದು ನಿಜವಾದ್ರೆ ಇನ್ನು ಕೆಲವು ಸುಳ್ಳು. ಅನುಶ್ರೀ ಅವರು ನಟ ಚಿಕ್ಕಣ್ಣನನ್ನು ಮದುವೆಯಾದ್ರು ಎಂದೆಲ್ಲ ಟ್ರೋಲ್​ಗಳು ಕೇಳಿ ಬಂದಿದ್ದವು. ಸದ್ಯ ಅದೇ ಸಾಲಿನಲ್ಲಿ ಅನುಪಮಾಗೌಡ ಅವರ ವಿಚಾರವೂ ಕೇಳಿ ಬಂದಿದೆ. ನಿಶ್ಚಿತಾರ್ಥವಾಗಿಲ್ಲ ಎನ್ನುವುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.
ಇನ್​​ಸ್ಟಾಗ್ರಾಮ್​ನಲ್ಲಿ ಅವರು ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಹೀಗಿತ್ತು, `ನಾನು ಸಾಮಾನ್ಯವಾಗಿ ಯಾವ ವಿಚಾರದ ಬಗ್ಗೆಯೂ ಮಾತನಾಡೋಕೆ ಹೋಗೋದೆ ಇಲ್ಲ. ಆದರೆ, ಇವತ್ತು ಒಂದು ಸೀಕ್ರೇಟ್ ಹೇಳಲೇ ಬೇಕು ಎಂದು ಬಂದಿದ್ದೇನೆ. ನಾನು ಶೂಟ್​ಗೆ ತೆರಳಿದಾಗ ಸೆಟ್​ನಲ್ಲಿ ಎಲ್ಲರೂ ನನಗೆ ಅಭಿನಂದನೆ ಸಲ್ಲಿಸುತ್ತಿದ್ದರು. ಏಕೆ ಹೀಗೆ ಎಂದು ನನಗೆ ಆಶ್ಚರ್ಯ ಆಯ್ತು. ನಾನು ಮೊಬೈಲ್​ ಗಮನಿಸಿದಾಗ ಎಷ್ಟೊಂದು ಸಂದೇಶಗಳು ಬಂದಿದ್ದವು. ಅದು ನನ್ನ ಆತ್ಮೀಯ ಗೆಳೆಯ ರಾಘವ್​ ಜೊತೆಗೆ ಎಂಗೇಜ್​ಮೆಂಟ್ ಆಗಿದೆ ಎಂದು ಪುಕಾರು ಎದ್ದಿತ್ತು. ಹೌದು, ನಿಶ್ಚಿತಾರ್ಥ ಆಯ್ತು. ಆದರೆ, ನಾವು ಹೋಗಲಿಕ್ಕೆ ಸಾಧ್ಯನೇ ಆಗಲಿಲ್ಲ ಎಂದು ಲೇವಡಿ ಮಾಡಿದ್ದಾರೆ.
`ನನಗೆ ಬೇಜಾರಾಗಿದ್ದು ಏನು ಎಂದರೆ, ಎಐ ಬಂದಿದೆ ಅದನ್ನು ಬಳಸಿಕೊಂಡು ಉಂಗುರ ಹಾಕಿಸಿ, ಒಳ್ಳೆ ಔಟ್ ಫಿಟ್​ ಇಟ್ಟು ನಿಶ್ಚಿತಾರ್ಥ ಮಾಡಬೇಕಿತ್ತು. ಇನ್ನು ಸಮಯ ಇದೆ ಹಾಗಾಗಿ ಎಂಗೇಜ್​ಮೆಂಟ್ ಮಾಡುವಾಗ ಸರಿಯಾಗಿ ಎಐ ಇಮೇಜ್ ಕ್ರಿಯೇಟ್ ಮಾಡಿ ಎಂದು ತಮ್ಮದೇ ರೀತಿಯಲ್ಲಿ ಕಂಟೆಂಟ್ ಕ್ರಿಯೇಟರ್ಸ್​​ಗೆ ಚಳಿ ಬಿಡಿಸಿದ್ದಾರೆ.

ಮದುವೆ ಬೇಗ ಮಾಡ್ಬೇಡಿ ಟೈಂ ತಗೊಳ್ಳಿ

ಮುಂದುವರೆದು, `ನಿಶ್ಚಿತಾರ್ಥ ಆಯ್ತಲ್ಲ. ಬೇಗ ಮದುವೆ ಮಾಡಿ ಮುಗಿಸಬೇಡಿ. ಒಂದೆರಡು ತಿಂಗಳು ಕಾದು ಆನಂತರ ಮದುವೆ ಮಾಡಿಸಿ. ಮದುವೆ ಮಾಡಿಸುವಾಗ ನನಗೆ ಒಳ್ಳೆ ಟ್ರೆಡಿಷನಲ್​ ಔಟ್​ಫಿಟ್ ಹಾಕಿಸಿ. ನನ್ನನ್ನು ಮತ್ತು ಗೆಳೆಯ ರಾಘವ್​ನನ್ನು ಕರೆಯುವುದು ಮರೆಯಬೇಡಿ. ನಿಮ್ಮ ಪೋಸ್ಟ್​ಗೆ ಲೈಕ್, ಶೇರ್​ ಎಲ್ಲವೂ ಬರುತ್ತೆ. ಅದಕ್ಕಾಗಿಯೇ ಅಲ್ಲವೇ ನೀವು ನಮ್ಮ ಬಗ್ಗೆ ಇಷ್ಟೊಂದು ಗಮನ ಹರಿಸುತ್ತಿರೋದು ಎಂದು ಟಾಂಗ್​ ಕೊಟ್ಟಿದ್ದಾರೆ.

ರಾಘವ್ ಪೋಸ್ಟ್​ನಲ್ಲಿ ಏನಿತ್ತು?

ನನ್ನ ಜೀವನದಲ್ಲಿ ನಾನು ಕಂಡ ಅದ್ಭುತ ಹುಡುಗಿ ಅನುಪಮಾ ಗೌಡ. ಆಕೆಗೆ ಹುಟ್ಟು ಹಬ್ಬದ ಶುಭಾಷಯ. ನೀನೊಬ್ಬಳೇ ನನ್ನ ಜೀವನದ ಏಳು-ಬೀಳುಗಳನ್ನು ಕಂಡವಳು. ನನ್ನನ್ನು ಸಹಿಸಿಕೊಂಡ ನಿನಗೆ ಧನ್ಯವಾದ. ಮುಂದೆಯೂ ನನ್ನನ್ನು ಸಹಿಸಿಕೊಳ್ಳಲು ನಿಮ್ಮನ್ನು ನೀವು ಸಿದ್ದಪಡಿಸಿಕೊಳ್ಳಿ. ನಿನ್ನ ಜೀವನದಲ್ಲಿ ಸಂತೋಷ, ಶಾಂತಿ, ಪ್ರೀತಿ ಸಿಗಲಿ ಎಂದು ರಾಘವ್​ ಹರಸಿದ್ದಾರೆ. ಇದರಲ್ಲಿ ಅವರಿಬ್ಬರೂ ಆತ್ಮೀಯವಾಗಿದ್ದ ಪಟಗಳನ್ನು ಹಂಚಿಕೊಂಡಿದ್ದಾರೆ.