ಬೆಂಗಳೂರು: ಸಿನಿಮಾ, ಸಾಹಿತ್ಯ, ಕಿರುತೆರೆ ರಿಯಾಲಿಟಿ ಶೋ, ರಂಗಭೂಮಿ ಕ್ಷೇತ್ರಗಳಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡವರು ನಟಿ ಅಕ್ಷತಾ ಪಾಂಡವಪುರ. ‘ಕೋಳಿ ಎಸ್ರು’, ‘ಪಿಂಕಿ ಎಲ್ಲಿ?’ ಸೇರಿ ಹಲವು ವಿಷಯಾಧಾರಿತ ಚಿತ್ರಗಳಲ್ಲಿ ಅಭಿನಯಿಸಿರುವ ಅವರು ಸಿನಿಮಾ, ರಂಗಭೂಮಿ ಅನುಭವದೊಂದಿಗೆ ಇದೀಗ ಹೊಸ ಹೆಜ್ಜೆ ಇಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಪೂರ್ಣಪ್ರಮಾಣದ ಚಿತ್ರವೊಂದನ್ನು ನಿರ್ದೇಶಿಸಲು ಮುಂದಾಗುತ್ತಿದ್ದಾರೆ. ಇದು ಕಥೆಯಾಧಾರಿತ ಚಿತ್ರವಾಗಿದ್ದು, ಸದ್ಯ ಪ್ರಿ-ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ. ಈ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ ಅಕ್ಷತಾ, ‘ಈ ಹಿಂದೆ ರಂಗಭೂಮಿಯಲ್ಲಿ ‘ಲೀಕ್‌ಔಟ್’, ‘ಒಬ್ಬಳು’, ‘ಅಡುಗೆ ಮಾತು’ ಎಂಬ ನಾಟಕಗಳನ್ನು ನಿರ್ದೇಶಿಸಿದ್ದೆ. ರಂಗಭೂಮಿ ಜತೆಗೆ ಸಿನಿಮಾ ಅನುಭವದೊಂದಿಗೆ ಇದೀಗ ನಿರ್ದೇಶನಕ್ಕಿಳಿದಿದ್ದೇನೆ. ಇನ್ನು ಕಲಾವಿದರಾಗಿ ಕೆಲವು ವಿಚಾರಗಳನ್ನು ನಾವಂದುಕೊಂಡಂತೆ ನರೇಟ್ ಮಾಡಲು ಆಗುವುದಿಲ್ಲ. ಹಾಗಾಗಿ, ಕ್ಯಾಮರಾ ಹಿಂದೆ ನಿಂತು ನನ್ನ ವಿಚಾರಗಳನ್ನು ಅಭಿವ್ಯಕ್ತಪಡಿಸಬೇಕು ಎಂದು ಈ ನಿರ್ಧಾರಕ್ಕೆ ಬಂದಿದ್ದೇನೆ. ಸದ್ಯ ಚಿತ್ರದ ಕಥೆ ಬರೆಯುತ್ತಿದ್ದೇನೆ. ಪ್ರಿ-ಪ್ರೊಡಕ್ಷನ್ ಮುಗಿದ ಬಳಿಕ ಕಲಾವಿದರ ಆಯ್ಕೆ ನಡೆಯಲಿದೆ. ಜನವರಿವರೆಗೂ ವರ್ಕ್‌ಶಾಪ್ ನಡೆಯಲಿದೆ. ನಟನೆಗಿಂತ ನಿರ್ದೇಶನದತ್ತ ಹೆಚ್ಚು ಗಮನ ಹರಿಸುವ ಕಾರಣ ಈ ಚಿತ್ರದಲ್ಲಿ ನಾನು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿಲ್ಲ. ಸಾಧ್ಯವಾದರೆ ಸಣ್ಣ-ಪುಟ್ಟ ಪಾತ್ರ ಮಾಡುವೆ. ಲೀಡ್‌ಗೆ ಕೆಲವು ನಟಿಯರನ್ನು ಶಾರ್ಟ್‌ಲಿಸ್ಟ್ ಮಾಡಿಕೊಂಡಿದ್ದೇನೆ. ಶೀಘ್ರವೇ ಕಲಾವಿದರ ಆಯ್ಕೆ ಫೈನಲ್ ಆಗಲಿದೆ. ಕನ್ನಡದ ಮಟ್ಟಿಗೆ ಇದು ಪ್ರಯೋಗಾತ್ಮಕ ಚಿತ್ರವಾಗಲಿದೆ. ಈ ಸಿನಿಮಾ ಮುಗಿಯುವವರೆಗೂ ನಾನು ಬೇರೆ ಯಾವ ಚಿತ್ರದಲ್ಲೂ ನಟಿಸುವುದಿಲ್ಲ’ ಎಂದು ಮಾಹಿತಿ ನೀಡಿದರು.
ಸಮಾಜದ ಎಲ್ಲ ಕಥೆಗಳು ಆರಂಭವಾಗುವುದು ಮನೆಯಿಂದಲೇ. ಎಲ್ಲವನ್ನು ಅರಿತುಕೊಳ್ಳುವ ಮೂಲ ಅದು. ಹಾಗಾಗಿ, ಸಮಾಜದ ಕಥೆಯನ್ನು ಮನೆಯಿಂದಲೇ ಹೇಳಲು ಸಿದ್ಧತೆ ನಡೆಸುತ್ತಿದ್ದೇನೆ. ಇದೊಂದು ಸಾಮಾಜಿಕ ವಿಷಯಾಧಾರಿತ ಚಿತ್ರವಾಗಿದ್ದು, ಮಹಿಳೆಯ ದೃಷ್ಟಿಯಿಂದ ಮೂಡಿಬರಲಿದೆ. ಥಿಯೇಟ್ರಿಕಲ್ ಜತೆಗೆ ಫಿಲಂ ಫೆಸ್ಟಿವಲ್‌ಗಳಿಗೆ ಅನುಕೂಲವಾಗುವಂತೆ ಸಿನಿಮಾ ಮಾಡಲಿದ್ದೇವೆ.ಅಕ್ಷತಾ ಪಾಂಡವಪುರ, ನಟಿ/ ನಿರ್ದೇಶಕಿ