- ನೋವಾ ಮೂಲಕ ತಮಿಳಿಗೂ ಡೆಬ್ಯೂ ಜೈ ಚಿತ್ರದ ನಟಿ
- ತುಳುವಿನ ದೇವ್ ದಾಸ್ ಲೀಲಾ ಚಿತ್ರ ರಿಲೀಸ್ ಗೆ ಸಿದ್ಧ
- ಹೊಸ ವರ್ಷದ ಸಮಯದಲ್ಲಿ ಶುಭ ಸುದ್ದಿ ನೀಡಿದ ಕರಾವಳಿ ನಟಿ
ಬೆಂಗಳೂರು : ಕರಾವಳಿ ಮೂಲದ ನಟಿ ಅದ್ವಿತಿ ಶೆಟ್ಟಿ ಬದುಕಿನಲ್ಲಿ ಈ ಹೊಸ ವರ್ಷ ಡಬಲ್ ಸಂಭ್ರಮ ತಂದುಕೊಟ್ಟಿದೆ. ಕಳೆದ ನವೆಂಬರ್‌ನಲ್ಲಿ ರಿಲೀಸ್ ಆಗಿದ್ದ ತುಳು-ಕನ್ನಡ ಸಿನಿಮಾ ‘ಜೈ’ 50 ದಿನಗಳನ್ನು ಪೂರೈಸಿರುವುದು ಒಂದೆಡೆಯಾದರೆ, ಮತ್ತೊಂದೆಡೆ ತುಳುವಿನ ‘ದೇವ್ ದಾಸ್ ಲೀಲಾ’ ಮತ್ತು ತಮಿಳಿನ ‘ನೋವಾ’ ಚಿತ್ರವನ್ನು ಘೋಷಿಸಿ, ಸಂಭ್ರಮಿಸಿದ್ದಾರೆ. ಇದೇ ಖುಷಿಯಲ್ಲಿ ಅದ್ವಿತಿ, ‘‘ಜೈ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನನ್ನ ಪಾತ್ರವನ್ನೂ ತುಂಬ ಜನ ಇಷ್ಟಪಟ್ಟಿದ್ದಾರೆ. ‘ಜೈ’ ಬಳಿಕ ನನ್ನ ಬದುಕೇ ಬದಲಾಗಿದೆ. ಹಲವು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಸದ್ಯ ತುಳುವಿನಲ್ಲಿ ‘ದೇವ್ ದಾಸ್ ಲೀಲಾ’ ಚಿತ್ರದ ಶೂಟಿಂಗ್ ಮುಗಿಸಿದ್ದೇನೆ. ಆ ಸಿನಿಮಾ ಇದೇ ಏ.24ಕ್ಕೆ ರಿಲೀಸ್ ಆಗಲಿದೆ. ಮಾಧುರಿ ದೀಕ್ಷಿತ್, ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅವರ ಚಿತ್ರಗಳಲ್ಲಿ ಕೊರಿಯೋಗ್ರಾರ್ ಆಗಿ ಕೆಲಸ ಮಾಡಿರುವ ತೇಜೇಶ್ ಪೂಜಾರಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇಲ್ಲಿ ನನ್ನದು ಲೀಲಾ ಎನ್ನುವ ಹೋಮ್ಲಿ ಪಾತ್ರವಾಗಿದ್ದರೂ ಪ್ರತಿಭೆ ಅನಾವರಣಕ್ಕೆ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವಿದೆ. ಚಿತ್ರದಲ್ಲಿ ಮೂರು ಮುಖ್ಯ ಪಾತ್ರಗಳಿದ್ದು, ಅದರಲ್ಲಿ ಎರಡು ಪುರುಷ ಹಾಗೂ ಒಂದು ಮಹಿಳಾ ಪಾತ್ರ. ಆ ಇಬ್ಬರ ನಡುವೆಯೂ ನನ್ನ ಪಾತ್ರ ಕಳೆದುಹೋಗದಂತೆ ಕಥೆಯಲ್ಲಿ ಆದ್ಯತೆ ನೀಡಲಾಗಿದೆ. ನನ್ನ ಪಾತ್ರಕ್ಕೆ ಬೇರೆಯದೆ ಟ್ರ್ಯಾಕ್ ನೀಡಲಾಗಿದೆ. ಇಂದಿನ ಜನರೇಷನ್‌ಗೆ ಹತ್ತಿರವಾಗುವ ಕಥೆಯಿದು’ ಎಂದು ಮಾಹಿತಿ ಹಂಚಿಕೊಂಡರು.
ಕನ್ನಡ, ತುಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಅದ್ವಿತಿ ಶೆಟ್ಟಿ ಇದೀಗ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ತಮಿಳಿನ ಸೈನ್ಸ್ ಫಿಕ್ಷನ್ ‘ನೋವಾ’ ಚಿತ್ರದಲ್ಲಿ ಆರ್ಮಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಟಿಯ ಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು, ಆರ್ಮಿ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ‘ತಮಿಳಿನ ಹೊಸ ತಂಡದ ಭಾಗವಾಗಿರುವುದು ಖುಷಿ ನೀಡಿದೆ. ‘ನೋವಾ’ ಕೂಡ ಇದೇ ವರ್ಷ ರಿಲೀಸ್ ಆಗಲಿದೆ’ ಎಂದು ಅದ್ವಿತಿ ಶೆಟ್ಟಿ ಭರವಸೆ ವ್ಯಕ್ತಪಡಿಸುತ್ತಾರೆ. ಹಾಗಂತ ಅವರು ತುಳು ಮತ್ತು ತಮಿಳಿಗೆ ಸೀಮಿತವಾಗದೇ ಕನ್ನಡದಲ್ಲೂ ಕಥೆಗಳನ್ನು ಕೇಳುತ್ತಿದ್ದು, ಎರಡು-ಮೂರು ಕಥೆಗಳು ಮಾತುಕತೆ ಹಂತದಲ್ಲಿವೆಯಂತೆ.