'ಧುರಂಧರ್' (ಎಡ), 'ಸಪ್ತಸಾಗರದಾಚೆ ಎಲ್ಲೋ' (ಬಲ),
- ಇದೇ ಮಾ.19ರಂದು ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ತೆರೆಗೆ
- ಸೀಕ್ವೆಲ್ ಸಿನಿಮಾ ನೋಡಲು ಪ್ರೇಕ್ಷಕರ ಕುತೂಹಲ
- ಹೀಗೆ ಮಾಡುವುದರಿಂದ ಪ್ರೇಕ್ಷಕರಿಗೆ ಕಥೆಯ ಕನೆಕ್ಟಿವಿಟಿ ಇನ್ನಷ್ಟು ಸುಲಭ
ಬೆಂಗಳೂರು: ಇದೇ ಮಾ.19ರಂದು ಆದಿತ್ಯ ಧರ್ ನಿರ್ದೇಶನದ ಹಾಗೂ ರಣವೀರ್ ಸಿಂಗ್ ಅಭಿನಯದ ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾ 'ಧುರಂಧರ್ 2: ದಿ ರಿವೆಂಜ್' ಜಾಗತಿಕವಾಗಿ ತೆರೆಕಾಣಲು ಸಜ್ಜಾಗಿದೆ. ಈ ಚಿತ್ರದ ಸೀಕ್ವೆಲ್ ರಿಲೀಸ್ಗೆ ಸದ್ಯ ಚಿತ್ರಪ್ರೇಮಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಕಾರಣ, ಮೊದಲ ಭಾಗ ಕೆರಳಿಸಿದ ಕೌತುಕ ಮತ್ತು ಕಥೆಯನ್ನು ವಿವರಿಸಿದ ಪರಿ. ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಬ್ಲಾಕ್ಬಸ್ಟರ್ ಚಿತ್ರದ ಎರಡನೇ ಭಾಗ ಬಿಡುಗಡೆ ಆಗ್ತಿರುವುದು ಕೇವಲ 3 ತಿಂಗಳ ಅಂತರದಲ್ಲಿ ಎಂಬುದು ಇಲ್ಲಿ ಗಮನಾರ್ಹ ಸಂಗತಿ.
ಸೀಕ್ವೆಲ್ಗಳ ಕನೆಕ್ಟಿವಿಟಿ...
ಟ್ರೇಲರ್ನಲ್ಲಿ ಒಂದಷ್ಟು ಝಲಕ್ ಇಡುವ ಚಿತ್ರತಂಡ, ಬಾಕಿ ಸಿನಿಮಾ ಚಿತ್ರಮಂದಿರದಲ್ಲಿದೆ. ದಯವಿಟ್ಟು ಚಿತ್ರವನ್ನು ಥಿಯೇಟರ್ನಲ್ಲಿ ನೋಡಿ ಎನ್ನುವುದು ಸಾಮಾನ್ಯ. ಒಂದು ಭಾಗದಲ್ಲೇ ಕಥೆ ಮುಗಿಸುವಂತ ಚಿತ್ರಗಳು ಓಕೆ. ಆದರೆ, ಸೀಕ್ವೆಲ್ ಸಿನಿಮಾಗಳು ಮೂಡಿ ಬಂದಾಗ ಪ್ರೇಕ್ಷಕರಿಗೆ ಸುಲಭವಾಗಿ ಆಯಾ ಚಿತ್ರದ ಕನೆಕ್ಟಿವಿಟಿ ಸಿಗೋದು ಬಹಳ ಕಡಿಮೆ. ಕಾರಣ, ಲಾಂಗ್ ಗ್ಯಾಪ್ ರಿಲೀಸ್ಗಳು. ಇದು ಮೊದಲ ಭಾಗವನ್ನು ನೋಡಿ ಥ್ರಿಲ್ ಆದ ಸಿನಿಪ್ರಿಯರಿಗೆ, ಎರಡನೇ ಭಾಗ ನೋಡುವ ಕುತೂಹಲವನ್ನು ದುಪ್ಪಟ್ಟು ಮಾಡಿರುತ್ತದೆ. ಆದರೆ, ಒಂದಷ್ಟು ವರ್ಷಗಳ ತಡ ರಿಲೀಸ್ನಿಂದ ಆ ಕನೆಕ್ಷನ್ ಸುಲಭವಾಗಿ ಸಿಗದಿರುವ ಸಾಧ್ಯತೆಗಳು ಹೆಚ್ಚಿವೆ.
ಆದಿತ್ಯ ಧರ್ 'ಧುರಂಧರ್'
ಈ ನಿಟ್ಟಿನಲ್ಲಿ ಗಮನಿಸಿ ನೋಡುವುದಾದರೆ, ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಮೊದಲ ಭಾಗ ಸೂಪರ್ಹಿಟ್ ಆಗಿದೆ. 3 ಗಂಟೆಗಳ ಕಾಲ ಸಿನಿಪ್ರಿಯರನ್ನು ಸೀಟಿನಲ್ಲಿ ಅಲುಗಾಡದಂತೆ ಕೂರಿಸಿದ ಚಿತ್ರದ ಎರಡನೇ ಭಾಗವನ್ನು ಹೆಚ್ಚು ಕಾಲ ವಿಳಂಬ ಮಾಡದೆ, ಕೇವಲ ಮೂರು ತಿಂಗಳ ಅವಧಿಯಲ್ಲಿ ತೆರೆಗೆ ತರುತ್ತಿರುವ ನಿರ್ದೇಶಕರು, ಮತ್ತೊಂದು ಬ್ಲಾಕ್ಬಸ್ಟರ್ ನೋಡಲು ನಿರೀಕ್ಷಿಸುವುದರ ಜೊತೆಗೆ ಚಿತ್ರಪ್ರೇಮಿಗಳಿಗೆ ಕಥೆಯ ಕನೆಕ್ಟಿವಿಟಿಯನ್ನು ನೀಡುತ್ತಿರುವುದು ಮೆಚ್ಚುವಂತದ್ದು.
ಈ ಕೆಲಸ ಮೊದಲೇ ಮಾಡಿದ್ದ 'ಸಿಂಪಲ್ ಸ್ಟಾರ್'
ತಮ್ಮ ವಿಭಿನ್ನ ಕಥೆ ಹೇಳುವ ಶೈಲಿ, ಸರಳವಾಗಿ ತೋರಿಸುವ, ಅರ್ಥೈಸುವ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಅವರ ಸಿನಿಮಾಗಳು ಕನ್ನಡಿಗರಿಗೆ ಚೆನ್ನಾಗಿ ನೆನಪಿದೆ. ಜೊತೆಗೆ ಇಷ್ಟವು ಹೌದು. ನೋಡುಗರಿಗೆ ಒಂದು ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಡುವ ರಕ್ಷಿತ್, ಧುರಂಧರ್ ನಿರ್ದೇಶಕರು ಮಾಡಿದ ಕೆಲಸವನ್ನು ಈ ಮೊದಲೇ ತಮ್ಮ ಹೃದಯಸ್ಪರ್ಶಿ 'ಸಪ್ತಸಾಗರದಾಚೆ ಎಲ್ಲೋ' ಎ ಮತ್ತು ಬಿ ಸೈಡ್ ಚಿತ್ರಗಳಲ್ಲಿ ಮಾಡಿ ತೋರಿಸಿದ್ದಾರೆ.
2023ರಲ್ಲೇ 2 ಭಾಗಗಳು ರಿಲೀಸ್
ಸೆ.01, 2023ರಂದು ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮತ್ತು ಚೈತ್ರಾ ಆಚಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಸಪ್ತಸಾಗರದಾಚೆ ಎಲ್ಲೋ' ಸೈಡ್ ಎ ತೆರೆಕಂಡಿತು. ಈ ಸಿನಿಮಾ ಪ್ರೇಕ್ಷಕರ ಮೇಲೆ ಮಾಡಿದ ಮೋಡಿ 'ಸೈಡ್ ಬಿ'ಗೆ ಕಾಯುವಂತಿತ್ತು. ಅಂತೆಯೇ, ಎರಡನೇ ಭಾಗದ ಎಳೆಯನ್ನು ಮೊದಲ ಭಾಗದಲ್ಲೇ ಸಣ್ಣದಾಗಿ ಬಿಟ್ಟುಕೊಟ್ಟ ನಿರ್ದೇಶಕರು, ಅದೇ ವರ್ಷದ ನ.17ರಂದು ಸೈಡ್ ಬಿ ರಿಲೀಸ್ ಮಾಡಿದರು. ಇದು ನೋಡುಗರಿಗೆ ಎರಡು ಕಥೆಯನ್ನು ಸರಳವಾಗಿ, ಸುಲಭವಾಗಿ ಕನೆಕ್ಟ್ ಮಾಡಿತು. ಹೆಚ್ಚು ಸಮಯ ತೆಗೆದುಕೊಳ್ಳದೆ ಮುಂಚಿತವಾಗಿಯೇ ಅಂದುಕೊಂಡಂತೆ ತಮ್ಮ ಸಿನಿಮಾಗಳನ್ನು ತೆರೆಗೆ ತರುವ ಮೂಲಕ ರಕ್ಷಿತ್ ನಿರೀಕ್ಷಿಸಿದ ಯಶಸ್ಸನ್ನು ಕಂಡರು. ಈಗ ಧುರಂಧರ್ ಚಿತ್ರವು ಇದೇ ಹಾದಿಯಲ್ಲಿ ಸಾಗುತ್ತಿರುವುದು ಇತರೆ ಚಿತ್ರರಂಗಕ್ಕೆ ಮಾದರಿಯಾಗಲಿ.