"ಬಿಚ್ಚುಗತ್ತಿ', "ಪ್ರಣಯಂ', "ಗಜರಾಮ', "ಹಿರಣ್ಯ' ಚಿತ್ರಗಳ ಖ್ಯಾತಿಯ ನಾಯಕ ನಟ ರಾಜವರ್ಧನ್ ಸದ್ಯ "ಜಾವಾ' ಸಿನಿಮಾದಲ್ಲಿ ಬಿಜಿಯಿದ್ದಾರೆ. ಅದರ ನಡುವೆಯೇ ಸದ್ದಿಲ್ಲದೇ ಪ್ಯಾನ್ ಏಷಿಯಾ ಚಿತ್ರಕ್ಕಾಗಿ ಸಿದ್ಧತೆ ಕೂಡ ನಡೆಸುತ್ತಿದ್ದಾರೆ. ಆ ಮೂಲಕ ಕನ್ನಡದಿಂದ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಹೊರಟಿರುವ ಯಶ್, ರಿಷಬ್ ಶೆಟ್ಟಿ, ಕಿಚ್ಚ ಸುದೀಪ್, ಧ್ರುವ ಸರ್ಜಾ ಅವರಂತಹ ನಟರ ಸಾಲಿಗೆ ಸೇರಿದ್ದಾರೆ. ಹಿರಿಯ ಹಾಸ್ಯನಟ ಡಿಂಗ್ರಿ ನಾಗರಾಜ್ ಪುತ್ರನಾಗಿದ್ದರೂ, ತಮ್ಮದೇ ಛಾಪು ಮೂಡಿಸುತ್ತಿರುವ ರಾಜವರ್ಧನ್ ಇದುವರೆಗೆ ನಟಿಸಿರುವ ನಾಲ್ಕು ಚಿತ್ರಗಳಲ್ಲೂ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ರಾದೇಶಿಕ ಪ್ರಯೋಗಗಳ ಅನುಭವ ಮತ್ತು ದೊಡ್ಡ ಸಿನಿಮಾ ಕನಸಿನ ಹುಡುಕಾಟ ಎಂಬಂತೆ ತಮ್ಮದೇ ತಂಡ ಕಟ್ಟಿಕೊಂಡು ಪ್ಯಾನ್ ಏಷಿಯಾ ಪ್ರಾಜೆಕ್ಟ್ ಒಂದಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಸೈಲೆಂಟಾಗಿ ಚಿತ್ರದ ಮುಹೂರ್ತ ನೆರವೇರಿಸಿರುವ ಚಿತ್ರತಂಡ, ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದೆ. ಕಳೆದ ಐದು ವರ್ಷಗಳಿಂದ ಈ ಚಿತ್ರಕ್ಕಾಗಿ ತಯಾರಿ ನಡೆಸಿದ್ದು, ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭಿಸುವ ಆಲೋಚನೆ ಚಿತ್ರತಂಡದ್ದು. ಅದಕ್ಕೂ ಮುನ್ನ ತಾರಾಗಣ ಮತ್ತು ತಂತ್ರಜ್ಞರ ಕುರಿತು ಮಾಹಿತಿ ನೀಡಲಿದ್ದಾರೆ. 2025ರ ಫೆ. 7ರಂದು ರಾಜವರ್ಧನ್ ನಟಿಸಿದ್ದ "ಗಜರಾಮ' ರಿಲೀಸ್ ಆಗಿತ್ತು. ಆ ಬಳಿಕ "ಜಾವಾ' ಘೋಷಣೆಯಾಗಿತ್ತು. ಆದರೆ, ಅದಕ್ಕೂ ಮುನ್ನ ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.
"ಬಿಚ್ಚುಗತ್ತಿ'ಯಿಂದ "ಗಜರಾಮ'ವರೆಗೂ ಒಂದೊಂದು ಚಿತ್ರದಿಂದ ಒಂದೊಂದು ಪಾಠ ಕಲಿತಿದ್ದೇನೆ. ಅದೇ ಅನುಭವದೊಂದಿಗೆ ಕಳೆದ ವರ್ಷ "ಕಮಲ್ ಶ್ರೀದೇವಿ' ಸಿನಿಮಾ ನಿರ್ಮಾಣದಲ್ಲಿ ಕೈಜೋಡಿಸಿದ್ದೆ. ಆ ಮೂಲಕ ಸಿನಿಮಾ ಒಳಗಿನ & ಹೊರಗಿನ ಬೇಕು& ಬೇಡ ಮತ್ತು ವ್ಯಾವಹಾರಿಕ ಜ್ಞಾನ ಕಲಿತೆ. ಈ ಅನುಭವಗಳೊಂದಿಗೆ ಇದೀಗ ನಾನು ನನ್ನ ಅಸಲಿ ಸಿನಿಮಾ ಪಯಣ ಆರಂಭಿಸಲಿದ್ದೇನೆ. ಈ ಚಿತ್ರ ನನ್ನ ಸಿನಿಮಾ ಕನಸು, ದಾರಿ, ಗುರಿಯಾಗುವ ಭರವಸೆಯಿದೆ. ಒಂದೊಳ್ಳೆ ವಿಶ್ವದರ್ಜೆಯ ಸಿನಿಮಾ ಮಾಡುವ ತಂಡ ಜತೆಗಿರುವುದು ಖುಷಿ ನೀಡಿದೆ. - ರಾಜವರ್ಧನ್, ನಾಯಕ