* ಕಾಶ್ಮೀರ, ಬಾಂಗ್ಲಾದೇಶದ ನರಮೇಧ ಮರೆತು, ದೂರದ ಪ್ಯಾಲೆಸ್ತೈನ್ಗೆ ಮರುಗಿದ ನಟ
* ಪ್ರಕಾಶ್ ಹೇಳಿಕೆಗೆ ಧ್ವನಿಗೂಡಿಸಿದ ಕಾಂಗ್ರೆಸ್, ಬಿಜೆಪಿ ತೀವ್ರ ವಿರೋಧ
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫ್ಸ್) 17ನೇ ಆವೃತ್ತಿಯ ಉದ್ಘಾಟನೆಯ ಸಮಯದಲ್ಲಿ ಸಿನಿಮೋತ್ಸವದ ರಾಯಭಾರಿಯಾಗಿದ್ದ ನಟ ಪ್ರಕಾಶ್ ರಾಜ್ ಹೇಳಿಕೆಯು ಇದೀಗ ವಿವಾದಕ್ಕೀಡಾಗಿದೆ. ಕೆಲವರು ಬಿಫ್ಸ್ನಲ್ಲಿ ಪ್ಯಾಲೆಸ್ತೈನ್ ಚಿತ್ರಗಳ ಪ್ರದರ್ಶನಕ್ಕೆ ರ್ನಿಬಂಧ ಹೇರಿರುವುದು ತಪ್ಪೆಂದು ನಟನ ಪರ ಧ್ವನಿಗೂಡಿಸಿದ್ದರೆ, ಹಲವರು ಭಾರತ ವಿರೋಧಿ ನಿಲುವಿರುವ ಪ್ಯಾಲೆಸೆನ್ ಸಿನಿಮಾಗಳನ್ನು ಇಲ್ಲಿ ಪ್ರದರ್ಶಿಸದಿರುವುದು ಉತ್ತಮ ನಡೆ ಎಂದು ನಟನ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಸಿನಿಮಾಗಳ ಹಬ್ಬವಾಗಬೇಕಿದ್ದ ಬಿಫ್ಸ್ ಉದ್ಘಾಟನಾ ದಿನ ಅದರ ರಾಯಭಾರಿಯೇ ರಾಜಕೀಯ ಕೆಸರೆರಚಾಟಕ್ಕೆ ನಾಂದಿ ಹಾಡಿದ್ದಾರೆ.
ಪ್ರಕಾಶ್ ರಾಜ್ ಹೇಳಿದ್ದೇನು?
ವಿಧಾನಸೌಂಧದ ಮುಂಭಾಗ ಗುರುವಾರ (ಜ. 29) ಆಯೋಜಿಸಲಾಗಿದ್ದ 17ನೇ ಬಿಫ್ಸ್ ಉದ್ಘಾಟನಾ ಸಮಾರಂಭದಲ್ಲಿ ನಟ ಪ್ರಕಾಶ್ ರಾಜ್, "ಬೆಂಗಳೂರು ಚಲನಚಿತ್ರೋತ್ಸವಕ್ಕೆ ರಾಜಕೀಯ ಪ್ರವೇಶಿಸಿದೆ. ಅದ್ಭುತವಾಗಿ ನಡೆಯುತ್ತಿದ್ದ ಚಿತ್ರೋತ್ಸವದಲ್ಲಿ ಈ ವರ್ಷ ಕೇಂದ್ರ ಸರ್ಕಾರ ಪ್ಯಾಲೆಸ್ತೈನ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡುತ್ತಿಲ್ಲ. ಇದನ್ನು ಹೇಗೆ ಪ್ರತಿರೋಧಿಸಬೇಕು ಎಂಬುದರ ಬಗ್ಗೆ ರಾಜ್ಯ ಸರ್ಕಾರ, ಸಿಎಂ ನಿಲುವು ತೆಗೆದುಕೊಳ್ಳಬೇಕು. ನಮ್ಮ ನಾಡು, ನಮ್ಮ ಮಣ್ಣಿನ, ಸಂತಸ, ಕಣ್ಣೀರಿನ ಕಥೆಯಾದ "ಹೃದಯದ ಹಣತೆ' ಬೇರೆ ಭಾಷೆಗೆ ತರ್ಜುಮೆಯಾಗಿ ಬೂಕರ್ ಪ್ರಶಸ್ತಿ ಬಂದಾಗ ಸಂಭ್ರಮಿಸುವ ನಾವು, ನಮ್ಮ ನೆಲಕ್ಕೆ ಇನ್ನೊಬ್ಬರ ಕಥೆಗಳನ್ನು ತರಲು ಆಗುವುದಿಲ್ಲ ಎಂಬುದನ್ನು ಹೇಗೆ ಒಪ್ಪುವುದು? ಕೇರಳ ಚಲನಚಿತ್ರೋತ್ಸವದಲ್ಲೂ ಹೀಗೆ ಆಗಿತ್ತು. ಆದರೆ, ಅಲ್ಲಿನ ಸರ್ಕಾರ ಅದನ್ನು ವಿರೋಧಿಸಿ, ಸಿನಿಮಾ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿತು. ಅಂತಹ ಪ್ರತಿರೋಧ ಇಲ್ಲೂ ಆಗಬೇಕಿದೆ. ಬೆಂಗಳೂರು ಸಿನಿಮೋತ್ಸವದಲ್ಲಿ ನಿಮ್ಮ ರಾಜಕೀಯ ಹುನ್ನಾರ ನಡೆಯುವುದಿಲ್ಲ ಅಂತ ಇಲ್ಲಿನ ಸರ್ಕಾರವಾಗಲಿ ಅಥವಾ ಅಕಾಡೆಮಿಯಾಗಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ರಾಯಭಾರಿಯಾಗಿ ನಾನು ಒತ್ತಾಯಿಸುತ್ತಿದ್ದೇನೆ. ನಮ್ಮ ಕಷ್ಟಗಳಿಗೆ, ನಮ್ಮ ನೋವುಗಳಿಗೆ ನಾವು ಸುರಿಸುವ ಕಣ್ಣೀರಿನ ಪರಿಚಯ ನಮ್ಮ ಕೆನ್ನೆಗಿದ್ದರೆ ಸಾಲದು, ಇನ್ನೊಬ್ಬರ ನೋವಿಗೂ ಅಳುವ ಮೂಲಕ ನಮ್ಮ ಕಣ್ಣೀರಿನ ಪರಿಚಯ ಮಾಡಿದರೆ ಮಾತ್ರ ನಾವು ಮನುಷ್ಯರಾಗುವುದು. ನೀವು ಪ್ಯಾಲೆಸ್ತೈನ್ ಸಿನಿಮಾಗಳನ್ನು ಇಲ್ಲಿ ಪ್ರದರ್ಶಿಸಲು ಬಿಡದಿದ್ದರೆ, ಈ ವೇದಿಕೆಯಲ್ಲಿ ನಾನು ಅಲ್ಲಿನ ನೋವಿನ ಪದ್ಯವನ್ನು ಇಲ್ಲಿ ಓದುತ್ತೇನೆ' ಎಂದು ಪ್ಯಾಲೆಸ್ತೈನ್ ಪದ್ಯವನ್ನು ವೇದಿಕೆಯಲ್ಲಿ ಓದಿದರು.
ಪ್ರಕಾಶ್ ರಾಜ್ ಹೇಳಿಕೆಯನ್ನು ವಿರೋಧಿಸಿದ ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ, "ಪ್ರಕಾಶ್ ರಾಜ್ ಹೇಗೆ ಎಂದು ಗೊತ್ತು. ಯಾವಾಗಲೂ ಗೊಂದಲದಲ್ಲಿರುತ್ತಾರೆ. ಒಮ್ಮೆ ತುಕ್ಡೇ ಗ್ಯಾಂಗ್ ಪರ, ದೇಶದ ವಿರುದ್ಧ ಹೀಗೆ ಏನು ಬೇಕಾದರೂ ಮಾತನಾಡಿಬಿಡುತ್ತಾರೆ. ಕೇಂದ್ರ ಸರ್ಕಾರವನ್ನಲ್ಲ, ದೇಶವನ್ನೇ ಟಾರ್ಗೆಟ್ ಮಾಡಿಕೊಂಡುಬಿಡುತ್ತಾರೆ. ಏನು ಮಾತನಾಡಬೇಕು ಅಂತ ಗೊತ್ತಿರಲ್ಲ. ಜವಾಬ್ದಾರಿಯಿಂದ ಮಾತನಾಡುವುದಿಲ್ಲ. ಸಂವಿಧಾನಕ್ಕೆ, ಈ ನೆಲಕ್ಕೆ ಗೌರವ ನೀಡುವುದಿಲ್ಲ. ಅವರ ವಿರುದ್ಧ ರಾಜ್ಯ ಸರ್ಕಾರ ಪ್ರಕರಣ ದಾಖಲಿಸಬೇಕು' ಎಂದು ಆಗ್ರಹಿಸಿದ್ದಾರೆ. ಶಾಸಕ ಮಹೇಶ್ ಟೆಂಗಿನಕಾಯಿ, "ಪ್ಯಾಲೆಸ್ತೈನ್ ಚಿತ್ರಗಳನ್ನು ಬ್ಯಾನ್ ಮಾಡಿದ್ದನ್ನು ವಿರೋಧಿಸುತ್ತಿರುವವರು ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ನಡೆಯಿತಲ್ಲ ಅದರ ಬಗ್ಗೆ ಸಿನಿಮಾಗಳನ್ನು ಪ್ರದರ್ಶಿಸಲಿ ನೋಡೋಣ. ಈ ಎಡಪಂಥೀಯರು ಯಾವಾಗಲೂ ಇದೇ ರೀತಿಯ ಪ್ರಯತ್ನ ಮಾಡುತ್ತಿರುತ್ತಾರೆ. ಚಿತ್ರೋತ್ಸವದಲ್ಲಿ ಪ್ಯಾಲೆಸ್ತೈನ್ಚಿತ್ರಗಳನ್ನು ಬ್ಯಾನ್ ಮಾಡಿರುವುದು ಸರಿ ಇದೆ' ಎಂದರು. ಶಾಸಕ ಭರತ್ ಶೆಟ್ಟಿ, "ಭಾರತ ಪ್ರಗತಿಪರ ದೇಶ. ಇಲ್ಲಿ ಎಲ್ಲ ರೀತಿಯ ಕಲೆಗಳಿಗೂ ಅವಕಾಶಗಳಿವೆ. ಆದರೆ, ಪ್ಯಾಲೆಸ್ತೈನ್ ಸಿನಿಮಾಗಳ ಹಿಂದೆ ಹಿಡನ್ ಅಜೆಂಡಾ ಇರುತ್ತದೆ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಪ್ರೊಪಗಂಡಾ ಇರುತ್ತದೆ. ಹೀಗಾಗಿ ಕರ್ನಾಟಕದಲ್ಲಿ ಅಂತಹ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬಾರದು. ಪ್ರಕಾಶ್ ರಾಜ್ರದು ನಮ್ಮ ದೇಶದ ಕಲ್ಪನೆಯ ವಿರುದ್ಧದ ಮನಸ್ಥಿತಿ. ಸಿಎಂ ಮುಂದೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಕ್ಕಿದೆ ಅಂತ ಹೀಗೆ ಮಾತನಾಡಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ಪರ ಕಾಂಗ್ರೆಸ್ ಬ್ಯಾಟಿಂಗ್
ಪ್ರಕಾಶ್ ರಾಜ್ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, "ಪ್ರಕಾಶ್ ರಾಜ್ ಹೇಳಿರುವುದು ಸರಿಯಿದೆ. ಸಾಹಿತ್ಯ ಮತ್ತು ಸಿನಿಮಾ ಕಾರ್ಯಕ್ರಮಗಳಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು. ಮಾನವೀಯ ಸಂಬಂಧಗಳ ದೃಷ್ಟಿಯಿಂದ ಇಂತಹ ಸಿನಿಮಾಗಳ ಪ್ರದರ್ಶನ ಅಗತ್ಯ' ಎಂದಿದ್ದಾರೆ. ಹಾಗೇ ಶಾಸಕ ರಿಜ್ವಾನ್ ಅರ್ಷದ್, "ಪ್ಯಾಲೆಸ್ತೈನ್ ಚಿತ್ರಗಳನ್ನು ಬಿಫ್ಸ್ನಲ್ಲಿ ಯಾಕೆ ಪ್ರದರ್ಶಿಸಬಾರದು? ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶ್ವದ ಹಲವಾರು ದೇಶಗಳು 200 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಆದರೆ, ಪ್ಯಾಲೆಸ್ತೈನ್ಚಿತ್ರಗಳನ್ನು ಮಾತ್ರ ಪ್ರದರ್ಶಿಸಬಾರದು ಎನ್ನುತ್ತಿರುವುದು ಸರಿಯಲ್ಲ. ಭಾರತ ಮತ್ತು ಪ್ಯಾಲೆಸ್ತೈನ್ ಮೊದಲಿನಿಂದಲೂ ಸೌಹಾರ್ದಯುತ ಸಂಬಂಧ ಹೊಂದಿವೆ. ಇಸ್ರೇಲ್ನವರು 50 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಕೊಂದಿದ್ದಾರೆ. ಆ ದೇಶದ ಪರ ಮಾತನಾಡಬಾರದಾ? ಭಾರತ ದೇಶದ ನೈತಿಕ ಬಲವೇನು? ಪ್ಯಾಲೆಸ್ತೈನ್ ಚಿತ್ರಗಳ ಪ್ರದರ್ಶನ ಆಗಬೇಕು. ಈ ಬಗ್ಗೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಪ್ಯಾಲೆಸ್ತೈನ್ ಚಿತ್ರಗಳಾವುವು?
ಕಳೆದ ನವೆಂಬರ್ನಲ್ಲಿ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಕೇರಳದಲ್ಲಿ ಪ್ರದರ್ಶನಗೊಳ್ಳಬೇಕಿದ್ದ 19 ವಿದೇಶಿ ಸಿನಿಮಾಗಳಿಗೆ ಸಿಬಿಎಫ್ಸಿ (ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ) ನಿರ್ಬಂಧ ಹೇರಿತ್ತು. ಅವುಗಳಲ್ಲಿ ಪ್ಯಾಲೆಸ್ತೈನ್ನ "ಪ್ಯಾಲೆಸ್ತೈನ್ 36', "ಒನ್ಸ್ ಅಪಾನ್ ಎ ಟೈಮ್ ಇನ್ ಗಾಜಾ', "ಆಲ್ ದಟ್ಸ್ ಲೆಫ್ಟ್ ಆಫ್ ಯೂ' ಜತೆಗೆ ಈಜಿಪ್ಟ್ನ "ಈಗಲ್ಸ್ ಆಫ್ ರಿಪಬ್ಲಿಕ್', ಇರಾನ್ನ "ವಿತೌಟ್ ಪರ್ಮಿಷನ್', ಸ್ಪೇನ್ನ "ಬೀಫ್ ಚಿತ್ರಗಳೂ ಸೇರಿದ್ದವು. ಆದರೆ, ಕೇಂದ್ರ ಸರ್ಕಾರ ರ್ನಿಬಂಧ ಹೇರುವ ಮುನ್ನವೇ ಕೆಲ ಚಿತ್ರಗಳು ಪ್ರದರ್ಶನಗೊಂಡಿದ್ದವು. ಕೇಂದ್ರದ ನಡೆಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ವಿರೋಧಿಸಿದ್ದರು. ಇದೀಗ ಬಿಫ್ಸ್ನಲ್ಲೂ ಪ್ಯಾಲೆಸ್ತೈನ್ನ ಮೂರು ಚಿತ್ರಗಳು ಪ್ರದರ್ಶನಕ್ಕೆ ಬಂದಿದ್ದವು. ಆದರೆ, ಸಿಬಿಎಫ್ಸಿ ಅನುಮತಿ ನೀಡದ ಕಾರಣ ಅಂತಿಮ ಹಂತದಲ್ಲಿ ಕೈಬಿಡಲಾಯಿತು.
ಎಡವಟ್ಟು ಮಾಡಿಕೊಂಡಿದ್ದ ಪ್ರಕಾಶ್ ರಾಜ್
2024ನೇ ಸಾಲಿನ 55ನೇ ಕೇರಳ ರಾಜ್ಯ ಪ್ರಶಸ್ತಿಗೆ ಸಿನಿಮಾಗಳನ್ನು ಆಯ್ಕೆ ಮಾಡಲು ಪ್ರಕಾಶ್ ರಾಜ್ ನೇತೃತ್ವದಲ್ಲಿ ರಂಜನ್ ಪ್ರಮೋದ್, ಜಿಬು ಜೇಕಬ್, ಭಾಗ್ಯಲಕ್ಷ್ಮೀ, ಗಾಯತ್ರಿ ಅಶೋಕನ್, ನಿತಿನ್ ಲುಕೋಸ್, ಸಂತೋಷ್ ಎಚಿಕ್ಕನಮ್ ಸೇರಿದ ಏಳು ಜನ ತೀರ್ಪುಗಾರರ ಸಮಿತಿ ರಚಿಸಲಾಗಿತ್ತು. ಪ್ರಶಸ್ತಿ ಸಮಾರಂಭದಲ್ಲೂ ನಟ ಪ್ರಕಾಶ್ ಕೇಂದ್ರ ಸರ್ಕಾರದಿಂದ ನೀಡಲಾಗುವ ರಾಷ್ಟ್ರ ಪ್ರಶಸ್ತಿಗೆ ಸಿನಿಮಾಗಳ ಆಯ್ಕೆ ಸಂಬಂಧ ವಿರೋಧ ವ್ಯಕ್ತಪಡಿಸಿದ್ದರು. ಅದರ ನಡುವೆಯೇ ಕೇರಳ ರಾಜ್ಯ ಪ್ರಶಸ್ತಿಯಲ್ಲಿ ಮಕ್ಕಳ ಸಿನಿಮಾ ಮತ್ತು ಬಾಲ ಕಲಾವಿದರನ್ನು ಕಡೆಗಣಿಸಲಾಗಿದೆ ಎಂದು ಮಲಯಾಳಂ ಸಿನಿಮಾ "ಮಲ್ಲಿಕಾಪುರಂ'ನಲ್ಲಿ ನಟಿಸಿದ್ದ ಬಾಲನಟಿ ದೇವ ನಂದ, ಪ್ರಕಾಶ್ ರಾಜ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಕೇರಳ ರಾಜ್ಯಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಬಗ್ಗೆ ಮಲಯಾಳಂ ಚಿತ್ರರಂಗದಲ್ಲೇ ವಿರೋಧ ವ್ಯಕ್ತವಾಗಿತ್ತು.