ನಟರಾದ ಯಶ್ ಹಾಗೂ ಗುಲ್ಶನ್ ದೇವಯ್ಯ
- ಕಾಂತಾರ ಚಾಪ್ಟರ್ 1 ಸಿನಿಮಾದ ಬಳಿಕ ಕರ್ನಾಟಕದಲ್ಲಿ ಮನೆ ಮಾತಾದ ಕನ್ನಡಿಗ ಗುಲ್ಶನ್ ದೇವಯ್ಯ
- ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದಲ್ಲೂ ಗುಲ್ಶನ್ ನಟಿಸಬೇಕಿತ್ತು
- ಶೂಟಿಂಗ್ ಮಧ್ಯದಲ್ಲೇ ಟಾಕ್ಸಿಕ್ ಸಿನಿಮಾದಿಂದ ಹೊರಬಂದಿದ್ದೇಕೆ ಎಂಬುದಕ್ಕೆ ಕಾರಣ ಬಿಚ್ಚಿಟ್ಟ ಗುಲ್ಶನ್
ಮುಂಬೈ: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಖಳನಾಯಕನಾಗಿ ತಮ್ಮ ಅದ್ಭುತ ಅಭಿನಯದ ಮೂಲಕ ಕನ್ನಡಿಗ ಗುಲ್ಶನ್ ದೇವಯ್ಯ ( Gulshan Devaiah ) ಕರ್ನಾಟಕದಲ್ಲಿ ಮನೆ ಮಾತಾತಾಗಿದ್ದಾರೆ. ಎಲ್ಲವು ಅಂದುಕೊಂಡಂತೆ ನಡೆದಿದ್ದರೆ, ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದಲ್ಲೂ ಗುಲ್ಶನ್ ನಟಿಸಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಏನೆಂಬುದನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ.
ವಿಜಯವಾಣಿ ಜತೆ ಮಾತನಾಡಿದ ಗುಲ್ಶನ್ ದೇವಯ್ಯ, ಡೇಟ್ಸ್ ಹೊಂದಾಣಿಕೆ ಕಾರಣದಿಂದ ನಾನು ಟಾಕ್ಸಿಕ್ ಸಿನಿಮಾದಲ್ಲಿ ನಟಿಸಲು ಆಗಲಿಲ್ಲ. ಯಶ್ ಅವರು ನನ್ನನ್ನು ಸಂಪರ್ಕ ಮಾಡಲಿಲ್ಲ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ನನ್ನನ್ನು ಸಂಪರ್ಕಿಸಿ, ಒಂದು ಪಾತ್ರ ಇದೆ ಮಾಡ್ತೀರಾ ಅಂತ ಕೇಳಿದರು. ಆದರೆ, ನನಗೆ ಡೇಟ್ಸ್ ಇಲ್ಲದ ಕಾರಣ ನಟಿಸಲು ಆಗುವುದಿಲ್ಲ ಎಂದು ಹೇಳಿದೆ ಎಂದು ತಿಳಿಸಿದರು.
ಸುಳ್ಳು ಸುದ್ದಿ
ಟಾಕ್ಸಿಕ್ ಸಿನಿಮಾ ತಂಡ ದುಡ್ಡು ಕೊಡಲಿಲ್ಲ ಮತ್ತು ಮ್ಯಾನೇಜರ್ ಜತೆ ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಟಾಕ್ಸಿಕ್ ಸಿನಿಮಾದಿಂದ ಗುಲ್ಶನ್ ದೇವಯ್ಯ ಅವರು ಹೊರಬಂದರು ಅಂತಾ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ರಾಷ್ಟ್ರೀಯ ಇಂಗ್ಲಿಷ್ ವಾಹಿನಿಯೊಂದು ಸುದ್ದಿ ಮಾಡಿದ ಬಳಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಈ ವಿಚಾರವಾಗಿ ವಿಜಯವಾಣಿ ಜತೆ ಮಾತನಾಡಿದ ಗುಲ್ಶನ್ ಅವರು ಅದೆಲ್ಲ ಸುಳ್ಳು ಸುದ್ದಿ, ಡೇಟ್ ಹೊಂದಾಣಿಕೆ ಸಮಸ್ಯೆಯಿಂದ ಟಾಕ್ಸಿಕ್ನಲ್ಲಿ ನಟಿಸಲು ಆಗಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ, ಟಾಕ್ಸಿಕ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಕೆಜಿಎಫ್: ಚಾಪ್ಟರ್ 2 ಯಶಸ್ಸಿನ ಬಳಿಕ ಯಶ್ ಅವರ ಬಹುನಿರೀಕ್ಷಿತ ಸಿನಿಮಾ ಇದಾಗಿದೆ. ಸುಮಾರು 3 ವರ್ಷಗಳ ಬಳಿಕ ಯಶ್ ಅವರು ಮತ್ತೆ ದೊಡ್ಡ ಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ತಯಾರಾಗುತ್ತಿದ್ದು, ಹಲವಾರು ಭಾರತೀಯ ಭಾಷೆಗಳಲ್ಲೂ ಡಬ್ ಆಗಿ ಬಿಡುಗಡೆಯಾಗಲಿದೆ.
ಇನ್ನು ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯಶ್ ಮತ್ತು ಗೀತು ಮೋಹನ್ದಾಸ್ ಬರೆದಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸಿದ್ದಾರೆ.
ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ 2026, ಮಾರ್ಚ್ 19 ರಂದು ಈದ್, ಯುಗಾದಿ ಹಬ್ಬದ ವಾರಾಂತ್ಯದೊಂದಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ, (ಏಜೆನ್ಸೀಸ್).