ಲವ್ ಮಾಕ್ಟೇಲ್ 3 
ಸ್ಯಾಂಡಲ್‌ವುಡ್

Love Mocktail 3 - ಡೇರಿಂಗ್​ ಡಾರ್ಲಿಂಗ್​ - ಹ್ಯಾಟ್ರಿಕ್​ ಗೆಲುವಿನ ಸಂಭ್ರಮದಲ್ಲಿ ಕೃಷ್ಣ

Love Mocktail 3 -
ಡಾರ್ಲಿಂಗ್​ ಕೃಷ್ಣ ನಟಿಸಿ, ನಿರ್ದೇಶಿಸಿರುವ "ಲವ್​ ಮಾಕ್ಟೇಲ್​ 3' ಗೆಲುವಿನ ನಗು ಬೀರಿದೆ. ಒಂದೆಡೆ ಬಾಲಿವುಡ್​ ಸಿನಿಮಾ "ಧುರಂಧರ್​ 2 - ದ ರಿವೆಂಜ್​' ಮತ್ತೊಂದೆಡೆ ತೆಲುಗಿನಲ್ಲಿ ಪವನ್​ ಕಲ್ಯಾಣ್​ ಅಭಿನಯಿಸಿದ್ದ "ಉಸ್ತಾದ್​ ಭಗತ್​ ಸಿಂಗ್​', ಮಗದೊಂದೆಡೆ ಕೃತಿಚೌರ್ಯದ ಆರೋಪದ ನಡುವೆಯೂ "ಲವ್​ ಮಾಕ್ಟೇಲ್​' ಟ್ರೀಕ್ವೆಲ್​ ಹೌಸ್​ುಲ್​ ಪ್ರದರ್ಶನ ಕಾಣುತ್ತಿದೆ. ""ಧುರಂಧರ್​', "ಉಸ್ತಾದ್​ ಭಗತ್​ ಸಿಂಗ್​' ಬಗ್ಗೆ ಗೊತ್ತಿದ್ದೇ ನಾವು ನಮ್ಮ ಸಿನಿಮಾ ರಿಲೀಸ್​ ಮಾಡಿದ್ದು. ಈ ನಿರ್ಧಾರದಿಂದ ಖುಷಿಯಾಗುತ್ತಿದೆ. ಮೊದಲ ದಿನವೇ ಸೇಫ್​ ಆಗಿದ್ದೇವೆ. "ಧುರಂಧರ್​ 2' ಇಲ್ಲದಿದ್ದರೆ ಶೋಗಳು ಹೆಚ್ಚು ಸಿಗುತ್ತಿದ್ದವು. ಆದರೂ, "ಲವ್​ ಮಾಕ್ಟೇಲ್​ 3' ಸೋಮವಾರ 50 ಶೋಗಳು ಹೌಸ್​ಫುಲ್​ ಆಗಿವೆ. ಹಬ್ಬಕ್ಕೆ ಕುಟುಂಬಗಳಿಗಾಗಿ ಮಾಡಿದ ಚಿತ್ರವಿದು. ಅವರು ಬಂದು ಸಿನಿಮಾ ನೋಡುತ್ತಿದ್ದಾರೆ, ಮೆಚ್ಚುತ್ತಿದ್ದಾರೆ. "ಧುರಂಧರ್​ 2' ನೂರಾರು ಕೋಟಿ ಕಲೆಕ್ಷನ್​ ಮಾಡಿದೆ, ನಮ್ಮ ಸಿನಿಮಾನೂ ಅಷ್ಟೇ ಗಳಿಕೆ ಮಾಡಬೇಕು ಅಂತೇನಿಲ್ಲ. ಆ ಸವಾಲಿನ ನಡುವೆಯೂ ಗೆದ್ದಿರುವ ಖುಷಿಯಿದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಹ್ಯಾಟ್ರಿಕ್​ ಸವಾಲು, ಹ್ಯಾಟ್ರಿಕ್​ ಗೆಲುವು

"ಲವ್​ ಮಾಕ್ಟೇಲ್​' ಮೊದಗ ಭಾಗ 2020ರ ಜ. 31ರಂದು ರಿಲೀಸ್​ ಆಗಿತ್ತು. ಬಾಲಿವುಡ್​ನಲ್ಲಿ ಜ.24ರಂದು ವರುಣ್​ ಧವನ್​, ಶ್ರದ್ಧಾ ಕಪೂರ್​, ಪ್ರಭುದೇವ ನಟಿಸಿದ್ದ "ಸ್ಟ್ರೀಟ್​ ಡಾನ್ಸರ್​ 3ಡಿ' ಮತ್ತು ಜ. 31ರಂದು ಸ್​ೈ ಅಲಿ ಖಾನ್​, ಟಬು ನಟಿಸಿದ್ದ "ಜವಾನಿ ಜಾನೇಮನ್​' ರಿಲೀಸ್​ ಆಗಿದ್ದವು. ತೆಲುಗಿನಲ್ಲಿ ರವಿತೇಜ, ಪಾಯಲ್​ ರಜಪುತ್​, ನಭಾ ನಟೇಶ್​ ನಟಿಸಿದ್ದ "ಡಿಸ್ಕೋ ರಾಜ', ತಮಿಳಿನಲ್ಲಿ "ಸೈಕೋ', "ದಗಾಲ್ಟಿ' ಸೇರಿ ನಾಲ್ಕೆ$ದು ಸಿನಿಮಾಗಳು, ಮಲಯಾಳಂನಲ್ಲಿ ಅರ್ಧ ಡಜನ್​ ಚಿತ್ರಗಳು ರಿಲೀಸ್​ ಆಗಿದ್ದವು. ಹಾಗೇ ಕನ್ನಡದಲ್ಲೂ "ಕಾಣದಂತೆ ಮಾಯವಾದನು', "ಡಿಂಗ', "ನಮೋ', "ರಾಮನ ಸವಾರಿ' ಸೇರಿ ಆರು ಚಿತ್ರಗಳು ಬಿಡುಗಡೆಯಾಗಿದ್ದವು. ಅದೆಲ್ಲಕ್ಕಿಂತ ಹೆಚ್ಚಾಗಿ ಕರೊನಾ ಆತಂಕದ ನಡುವೆಯೂ "ಲವ್​ ಮಾಕ್ಟೇಲ್​' ಗೆಲುವಿನ ನಗು ಬೀರಿತ್ತು. ಇನ್ನು "ಲವ್​ ಮಾಕ್ಟೇಲ್​ 2' 2022ರ ಫೆ. 11ರಂದು ರಿಲೀಸ್​ ಆಗಿತ್ತು. ಆಗ ಬಾಲಿವುಡ್​ನಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದ "ಗೆಹ್ರಾಯಿಯಾ', ರಾಜಕುಮಾರ್​ ರಾವ್​, ಭೂಮಿ ಅಭಿನಯದ "ಬಧಾಯಿ ದೋ', ತಮಿಳಿನಲ್ಲಿ ವಿಕ್ರಮ್​ ನಟಿಸಿದ್ದ "ಮಹಾನ್​', ವಿಷ್ಣು ವಿಶಾಲ್​ ಅಭಿನಯದ "ಎಫ್​​ಐಆರ್​' ಸೇರಿ ಐದಾರು ಚಿತ್ರಗಳು, ತೆಲುಗಿನಲ್ಲಿ ರವಿತೇಜ ನಟಿಸಿದ್ದ "ಖಿಲಾಡಿ', ಸಿದ್ದು ಅಭಿನಯದ "ಡಿಜೆ ಟಿಲ್ಲು', & ಮಲಯಾಳಂನಲ್ಲಿ "ಅರ್ಚನಾ 31 ನಾಟ್​ಔಟ್​', "ಫ್ರೀಡಂ ಫೈಟ್​', ಮೋಹನ್​ ಲಾಲ್​ ನಟಿಸಿದ್ದ "ಆರಾಟ್ಟು' ರಿಲೀಸ್​ ಆಗಿದ್ದವು. ಕನ್ನಡದಲ್ಲೂ ಅರ್ಜುನ್​ ಸರ್ಜಾ ನಟಿಸಿದ್ದ "ಒಪ್ಪಂದ', "ಫೋರ್​ ವಾಲ್ಸ್​', "ರೌಡಿ ಬೇಬಿ' ಸೇರಿ ನಾಲ್ಕೈದು ಸಿನಿಮಾಗಳು ಬಿಡುಗಡೆಯಾಗಿದ್ದವು. ಅದೆಲ್ಲದರ ನಡುವೆಯೂ "ಲವ್​ ಮಾಕ್ಟೇಲ್​ 2' ಉತ್ತಮ ಕಲೆಕ್ಷನ್​ ಮಾಡಿಕೊಂಡಿತ್ತು.

ಕಾನೂನು ರೀತಿ ಉತ್ತರ

ಇನ್ನು "ಲವ್​ ಮಾಕ್ಟೇಲ್​ 3' ಚಿತ್ರಕ್ಕೂ ನಾನು ಕೆಲ ವರ್ಷಗಳ ಹಿಂದೆ ಡಾರ್ಲಿಂಗ್​ ಕೃಷ್ಣಗೆ ಹೇಳಿದ್ದ ಕಥೆಗೂ ಹೋಲಿಕೆಯಿದೆ ಎಂದು "ಮಾರಿಗೋಲ್ಡ್​' ನಿರ್ದೇಶಕ ರಾವೇಂದ್ರ ನಾಯಕ್​ ಆರೋಪಿಸಿದ್ದು, ಆ ಬಗ್ಗೆ ಕೃಷ್ಣ, ""ಲವ್​ ಮಾಕ್ಟೇಲ್​' ಒಂದು ಸರಣಿ. ಮಧ್ಯದಲ್ಲಿ ಬೇರೆಯವರ ಕಥೆ ಕದಿಯಲು ಹೇಗೆ ಸಾಧ್ಯ? ಎಲ್ಲ ಆರೋಪಗಳಿಗೂ ನಾನು ಕಾನೂನು ರೀತಿ ಮಾತನಾಡುವೆ' ಎನ್ನುತ್ತಾರೆ.