Chethan Chandra - ಕನ್ನಡದಲ್ಲಿ "ಪಿಯುಸಿ', "ಕುಂಭರಾಶಿ', "ಪ್ರಭುತ್ವ' ಸೇರಿ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಚೇತನ್ ಚಂದ್ರ ಕಳೆದ ಒಂದು ತಿಂಗಳಿನಿಂದ ಮೈಸೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಮುಂದಿನ ಎರಡು ಚಿತ್ರಗಳಲ್ಲಿ ಕುಸ್ತಿಪಟು ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಕಾರಣ, ಚಾಮುಂಡಿ ವಿಹಾರ್ ಸ್ಟೇಡಿಯಂನಲ್ಲಿರುವ ಹನುಮಾನ್ ಅಖಾಡದಲ್ಲಿ ಕುಸ್ತಿ ಪಟ್ಟುಗಳನ್ನು ಕಲಿಯುತ್ತಿದ್ದಾರೆ. ಹಲವು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪೈಲ್ವಾನ್ಗಳಿಗೆ ತರಬೇತಿ ನೀಡಿರುವ ಪೈಲ್ವಾನ್ ಮಧು ಗರಡಿಯಲ್ಲಿ ಚೇತನ್ ಚಂದ್ರ ಪಳಗುತ್ತಿದ್ದಾರೆ.
"ತಮಿಳಿನ "ಉನ್ನತನ್' ಮತ್ತು ಕನ್ನಡದ ಇನ್ನೂ ಹೆಸರಡಿದ ಚಿತ್ರದಲ್ಲಿ ಕುಸ್ತಪಟು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಕುಸ್ತಿಪಟುವಿನಂತೆ ನಟಿಸಿದರೆ ಸಾಲದು, ಕಲಿತು ಮಾಡಿದರೆ ಉತ್ತಮ ಅಂತ ಕಳೆದ ಒಂದು ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದೇನೆ. ಮೊದಲಿನಿಂದಲೂ ಜಿಮ್ ಮಾಡುತ್ತಿದ್ದ ಕಾರಣ ನನಗೆ ಗರಡಿ ಮನೆ ವ್ಯಾಯಾಮ ಹೆಚ್ಚು ಕಷ್ಟವೆನಿಸುತ್ತಿಲ್ಲ. 150ಕ್ಕೂ ಅಧಿಕ ರಾಜ್ಯ, ರಾಷ್ಟ್ರಮಟ್ಟದ ಕುಸ್ತಿಪಟುಗಳಿಗೆ ತರಬೇತಿ ನೀಡಿರುವ ಹನುಮಾನ್ ಅಖಾಡಾದ ಪೈಲ್ವಾನ್ ಮಧು ಅವರ ಬಳಿ ಟ್ರೇನಿಂಗ್ ಪಡೆಯುತ್ತಿದ್ದೇನೆ. ಪ್ರತಿದಿನ ಬೆಳಗ್ಗೆ 5ಕ್ಕೆ ಎದ್ದು ಚಾಮುಂಡಿ ಬೆಟ್ಟ ಹತ್ತಿಳಿಯುತ್ತೇನೆ. ಬಳಿಕ ಬೇರೆ ಕೆಲಸಗಳನ್ನು ಮುಗಿಸಿಕೊಂಡು, ಸಂಜೆ 5ಕ್ಕೆ ಸರಿಯಾಗಿ ಗರಡಿಮನೆಗೆ ಹೋಗಿ, 8.30ರವರೆಗೆ ವ್ಯಾಯಾಮ ಮಾಡುತ್ತೇನೆ. ಜಿಮ್ನಲ್ಲಿ ಸುಸ್ತಾಗುವವರೆಗೆ ಎರಡು ತಾಸು ವರ್ಕೌಟ್ ಮಾಡುತ್ತೇವೆ. ಆದರೆ, ಗರಡಿಗಳಲ್ಲಿ ಎರಡು ತಾಸು ವ್ಯಾಯಾಮ ಮಾಡಿ ಸುಸ್ತಾದ ಬಳಿಕ ಸಾಧನೆ ಪ್ರಾರಂಭವಾಗುತ್ತದೆ. ಒಂದು ಸಾವಿರ, ಎರಡು ಸಾವಿರ ದಂಡ ಹೊಡೆಯಬೇಕು. ಅದರ ಬಳಿಕ ತರಬೇತಿ ಶುರು. ಜತೆಗೆ ಕಟ್ಟುನಿಟ್ಟಿನ ಡಯಟ್ ಮಾಡುತ್ತಿದ್ದೇನೆ. ಹಣ್ಣು&ತರಕಾರಿ ಹೆಚ್ಚು ಸೇವಿಸುತ್ತೇನೆ. ಅಪರೂಪಕ್ಕೊಮ್ಮೆ ಮೊಟ್ಟೆ, ಚಿಕನ್ ಕೂಡ ತಿನ್ನುತ್ತೇನೆ. ಪ್ರತಿದಿನ 50 ಬಾದಾಮಿ, ಕಲ್ಲುಸಕ್ಕರೆ, ಗಸಗಸೆ, ಸೋಂಪು, ಕುಂಬಳಕಾಯಿ, ಸೂರ್ಯಕಾಂತಿ ಮತ್ತು ಕಲ್ಲಂಗಡಿ ಬೀಜ, ಏಲಕ್ಕಿ, ಕಾಳುಮೆಣಸು ಬಳಸಿ ಮಾಡುವ ದೇಸಿ ಪ್ರೋಟಿನ್ ಥಂಡಾ ಮಿಸ್ ಮಾಡುವುದಿಲ್ಲ' ಎಂದು ಅನುಭವ ಹಂಚಿಕೊಳ್ಳುತ್ತಾರೆ ಚೇತನ್ ಚಂದ್ರ.
ಒಂದೇ ತಿಂಗಳಲ್ಲಿ ಮೈ ಹುರಿಗೊಳಿಸಿಕೊಂಡಿರುವ ಚೇತನ್ ಚಂದ್ರರನ್ನು ನೋಡಿರುವ ಬೇರೆ ಗರಡಿ ಮನೆಯವರು ಅವರನ್ನು ಕುಸ್ತಿ ಪಂದ್ಯಕ್ಕೆ ಕರೆಯುತ್ತಿದ್ದಾರಂತೆ. "ಉತ್ತಮ ಅವಕಾಶ ಸಿಕ್ಕಾಗಿ ಶಕ್ತಿಮೀರಿ ಶ್ರಮ ಹಾಕಬೇಕು. ಹೀಗಾಗಿಯೇ ವಾರದ ಏಳೂ ದಿನ ತರಬೇತಿ ಪಡೆಯುತ್ತಿದ್ದೇನೆ. ಮೊದಲಿನಿಂದಲೂ ಜಿಮ್ ಮಾಡುತ್ತಿದ್ದ ಕಾರಣ, ದೇಹವೂ ಗರಡಿಮನೆಯ ಸಾಧನೆಗೆ ಒಗ್ಗಿಕೊಂಡಿದೆ. ಹೀಗಾಗಿಯೇ ನನ್ನನ್ನು ನೋಡಿದ ಹಲವರು ಕುಸ್ತಿಪಟು ಅಂತ ಅಂದುಕೊಂಡಿದ್ದೂ ಇದೆ. ಬೇರೆ ಅಖಾಡದವರು ರಾಜಾಸ್ಥಾನದಿಂದಲೋ ಅಥವಾ ಉತ್ತರ ಭಾರತದ ಎಲ್ಲಿಂದಲೋ ಹೊಸ ಪೈಲ್ವಾನ್ ಬಂದಿದ್ದಾರೆ, ಅಂತ ನನ್ನನ್ನು ಕುಸ್ತಿಗೆ ಕರೆಯುತ್ತಿದ್ದಾರೆ' ಎಂದು ನಗುತ್ತಾರೆ ಚೇತನ್.