ಬೆಂಗಳೂರು:
ನಿರ್ದೇಶಕ ಪ್ರಶಾಂತ್ ನೀಲ್ ಅವರ ಗರಡಿಯಲ್ಲಿ "ಉಗ್ರಂ', "ಕೆಜಿಎಫ್' ಸರಣಿಯಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಕೀರ್ತನ್ ನಾಡಗೌಡ ಇದೀಗ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ. ಹೆಸರು "418'. ಇದೊಂದು ಹಾರರ್ ಥ್ರಿಲ್ಲರ್ ಚಿತ್ರವಾಗಿದ್ದು ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ ಟ್ರೇಲರ್ ವೀಕ್ಷಕರನ್ನು ಹೆದರಿಸುವಲ್ಲಿ ಸಕ್ಸಸ್ ಆಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ್ದು, ಪ್ರಶಾಂತ್ ನೀಲ್ ಪ್ರಸ್ತುತಪಡಿಸುತ್ತಿದ್ದಾರೆ. ಚೈತ್ರಾ ಜೆ. ಆಚಾರ್, ಸೂರ್ಯ ಗಣೇಶ್, ರಮೇಶ್ ಇಂದಿರ, ಶ್ರೀಕಾಂತ್ ಗಣೇಶ್, ಚರಣ್, ಪ್ರೀತಿ, ಶಶಾಂಕ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "418' ಇದೇ 23ರಂದು ತೆರೆಗೆ ಬರಲಿದೆ. ನಿರ್ದೇಶಕ ಕೀರ್ತನ್, ""418' ಸೇರಿಸಿದರೆ 13 ಆಗುತ್ತದೆ. ಅದನ್ನು ಅನ್ಲಕ್ಕಿ ನಂಬರ್ ಎನ್ನುತ್ತಾರೆ. ಅದರ ಬಗ್ಗೆಯೂ ಚಿತ್ರದಲ್ಲಿ ಅಂಶಗಳಿರುವ ಕಾರಣ ಶೀರ್ಷಿಕೆ ಮಾಡಿಕೊಂಡೆವು. "ಕೆಜಿಎಫ್' ಸಮಯದಲ್ಲೇ ಹೊಳೆದ ಕಥೆಯಿದು. ಆದರೆ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಿದ್ದ ಕಾರಣ "ಸಲಾರ್' ಬಳಿಕ ಪೂರ್ಣಗೊಳಿಸಿ, ಪ್ರಶಾಂತ್ಗೆ ಕಥೆ ಹೇಳಿದೆ. ಅವರು ಇಷ್ಟಪಟ್ಟರು. ಕಳೆದ ನವೆಂಬರ್ನಲ್ಲಿ ಶೂಟಿಂಗ್ ಪ್ರಾರಂಭಿಸಿದೆವು. ಇದೀಗ ರಿಲೀಸ್ಗೆ ರೆಡಿಯಾಗಿದೆ. ಕಥೆ ಬರೆಯುವಾಗಲೇ ಚೈತ್ರಾ ಅವರನ್ನು ಮನಸ್ಸಿನಲ್ಲಿಟ್ಟುಕೊಂಡೇ "ದೇವಿಕಾ' ಪಾತ್ರ ಸೃಷ್ಟಿಸಿದ್ದೆ. ಅವರಿಗೂ ಇಷ್ಟವಾದ ಕಾರಣ ಒಪ್ಪಿಕೊಂಡರು. ಆಡಿಷನ್ ಮೂಲಕ ಕೆಲ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡೆವು. ಇದು ಕರಾವಳಿ ಕರ್ನಾಟಕದಲ್ಲಿ ನಡೆಯುವ ಕಥೆ' ಎಂದು ಮಾಹಿತಿ ನೀಡುತ್ತಾರೆ.
"ಕಾಮಿಡಿ ಹಾರರ್ ಚಿತ್ರಗಳು ಬಂದಿವೆ. ಆದರೆ, ಪೂರ್ಣ ಪ್ರಮಾಣದ ಸೀರಿಯಸ್ ಹಾರರ್ ಸಿನಿಮಾಗಳು ಬಂದು ತುಂಬ ವರ್ಷಗಳಾಗಿವೆ. ಹಾರರ್ ಜಾನರ್ಗೆ ಅದರದೇ ಆದ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ರಿಲೀಸ್ ಆದ "ವಿಡಿಯೋ' ವರ್ಕ್ ಆಗಿದೆ' ಎನ್ನುವ ಕೀರ್ತನ್, "ನಾನು ಹಾರರ್ ಜಾನರ್ ಅಭಿಮಾನಿ, ಒಬ್ಬ ಅಭಿಮಾನಿ ಸಿನಿಮಾ ಹೇಗಿರಬೇಕು ಅಂತ ಬಯಸುತ್ತಾನೋ, ಅದನ್ನೇ ಮನಸ್ಸಿಟ್ಟುಕೊಂಡು ಮಾಡಿರುವ ಚಿತ್ರ "418'. ಹಾರರ್ಗೆ ಭಾಷೆಯ ಗಡಿಯಿಲ್ಲ. ಭಯ ಎಂಬುದು ಎಲ್ಲ ಭಾಷೆಗಳಲ್ಲೂ ಒಂದೇ. ಹೀಗಾಗಿ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ' ಎಂದು ಹೇಳಿಕೊಳ್ಳುತ್ತಾರೆ.