ದೆಹಲಿಯಲ್ಲಿ ಐಸಾ ಅಧ್ಯಕ್ಷೆ ನೇಹಾ ಬೋರಾ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಧರ್ಮೇಂದ್ರ ಪ್ರಧಾನ್ 
ರಾಜಕೀಯ

ಅರಾಜಕತೆ ಸೃಷ್ಟಿಸುವುದೇ ಇವರ ಉದ್ದೇಶ: ‘ಬಾಂಗ್ಲಾ ಮಾದರಿ’ ಹೋರಾಟದ ಹೇಳಿಕೆ; ನೇಹಾ ಬೋರಾ, ಕಾಂಗ್ರೆಸ್​ ವಿರುದ್ಧ ಧರ್ಮೇಂದ್ರ ಪ್ರಧಾನ್ ಗರಂ! Dharmendra Pradhan

ದೆಹಲಿಯಲ್ಲಿ SIR ವಿರೋಧಿ ಪ್ರತಿಭಟನೆ ವೇಳೆ ‘ಬಾಂಗ್ಲಾದೇಶ ಜೆನ್-ಝೀ’ ಮಾದರಿ ಹೋರಾಟದ ಕರೆ ನೀಡಿದ ಐಸಾ ನೇಹಾ ಬೋರಾ; ಅರಾಜಕತೆಯ ನಾಟಕ ಬಯಲಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಕಿಡಿಕಾರಿದ್ದಾರೆ.

ನವದೆಹಲಿ: ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ ಪಟ್ಟಿ (SIR) ನೀತಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ.

ಚುನಾವಣಾ ಆಯೋಗದ ಈ ನೀತಿಯನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್​, ಸಮಾಜವಾದಿ ಪಾರ್ಟಿ, ತ್ರಣಮೂಲ ಕಾಂಗ್ರೆಸ್​ ಸೇರಿದಂತೆ ಇಂಡಿ ಮೈತ್ರಿಕೂಟದ ಬಹುತೇಕ ಪಕ್ಷಗಳು ವಿರೋಧ ವ್ಯಕ್ತಪಸಿಸುತ್ತಿವೆ. ರಾಜಕೀಯ ಪಕ್ಷಗಳ ಜತೆಗೆ ಆಲ್​ ಇಂಡಿಯಾ ಸ್ಟೂಡೆಂಟ್​ ಅಸೋಸಿಯೇಷನ್​ (AISA) ಹಾಗೂ ಕಾಕ್ರೋಚ್​ ಜನತಾ ಪಾರ್ಟಿ ಕೂಡ ಈ ಎಸ್​ಐಆರ್​ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿವೆ.

ಆದರೆ, ಈ ಪ್ರತಿಭಟನೆ ಬಗ್ಗೆ ಮಾತನಾಡುತ್ತಾ AISA ಮುಖ್ಯಸ್ಥೆ ನೇಹಾ ಬೊರಾ, ನಮಗೆ ಬಾಂಗ್ಲಾದೇಶದಲ್ಲಿ ನಡೆದ ಜೆನ್​-ಜೀ ಹೋರಾಟ ಪ್ರೇರಣೆಯಾಗಿದೆ. ನಾನು ಭಾರತದಲ್ಲಿ ಆಡಳಿತ ವ್ಯವಸ್ಥೆಯನ್ನೇ ಬದಲಿಸಲು ಹೊರಟಿದ್ದೇವೆಂಬ ಹೇಳಿಕೆ ಈಗ ಭಾರೀ ವಿರೋಧಕ್ಕೆ ಕಾರಣವಾಗಿದೆ.

ಇವರ ನಾಟಕ ಬಯಲಾಗಿದೆ: ಧರ್ಮೇಂದ್ರ ಪ್ರಧಾನ್

ನೇಹಾ ಬೊರಾಳ ಬಾಂಗ್ಲದೇಶ ಹಾಗೂ ಆಡಳಿತ ಬದಲಾವಣೆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಇಷ್ಟು ದಿನ ಇವರು ದೇಶದ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಹೋರಾಟ ಮಾಡುತ್ತಿದ್ದೇವೆಂಬ ಮುಖವಾಡ ಧರಿಸಿದ್ದರು. ಆದರೆ, ಇವರ ಮೂಲ ಉದ್ದೇಶ, ಭರತದಲ್ಲಿ ಅರಾಜಕತೆ ಉಂಟುಮಾಡುವುದಾಗಿದೆ ಎನ್ನುವುದು ಈಗ ಬಯಲಾಗಿದೆ. ಇವರು ಇಲ್ಲಿತನಕ ಮಾಡುತ್ತಿದ್ದ ನಾಟಕ ಜಗಜ್ಜಾಹೀರವಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ವಿದೇಶಿ ಶಕ್ತಿಗಳ ಬೆಂಬಲದೊಂದಿಗೆ ಅಧಿಕಾರವನ್ನು ವಶಪಡಿಸಿಕೊಳ್ಳುವ ಕನಸು ಕಾಣುತ್ತಿರುವ ಇಂತಹ ರಾಷ್ಟ್ರವಿರೋಧಿ ಶಕ್ತಿಗಳು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಭಾರತದಲ್ಲಿ ಸರ್ಕಾರದ ಬದಲಾವಣೆಯು ಕೇವಲ ಪ್ರಜಾಪ್ರಜಾಪ್ರಭುತ್ವ ಪ್ರಕ್ರಿಯೆ ಮೂಲಕವೇ ನಿರ್ಧಾರವಾಗುತ್ತದೆ. ಭಾರತದ ಜನತೆ ಇಂತಹ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಪ್ರಧಾನ್​ ಎಚ್ಚರಿಕೆ ನೀಡಿದ್ದಾರೆ.

ಜನಾದೇಶಕ್ಕೆ ಮಾಡುತ್ತಿರುವ ಅವಮಾನ!

ಇನ್ನು ಈ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಕಾಂಗ್ರೆಸ್​ ಪಕ್ಷದ ಕಾಲೆಳದ ಪ್ರಧಾನ್​, ಇನ್ನೇನು ಸೋಲಿನಲ್ಲಿ ಶತಕ ಪೂರೈಸಲು ಮುಂದಾಗುತ್ತಿರುವ ಕಾಂಗ್ರೆಸ್​ ಪಕ್ಷ ಕೂಡ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದೆ. ಚುನಾವಣೆಯಲ್ಲಿ ತಮಗೆ ಬೇಕಾದ ಫಲಿತಾಂಶ ಬರಲಿಲ್ಲವೆಂದು ವ್ಯವಸ್ಥೆ ವಿರುದ್ಧ ತಿರುಗಿ ಬೀಳುವುದಲ್ಲ. ಇದು ನೀವು ದೇಶದ ಜನರು ನೀಡಿದ್ದ ತೀರ್ಪಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಪ್ರಧಾನ್​ ಜರಿದಿದ್ದಾರೆ.

ನಿಮ್ಮ ರಾಜಕೀಯ ಲಾಭದ ಸಲುವಾಗಿ ದೆಹಲಿಯ ಸಾಮಾನ್ಯ ಜನರ, ನಿತ್ಯದ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸಾರ್ವಜನಿಕರಿಗೆ ತೊಂದರೆ ಕೊಡುವುದು ಕಾಂಗ್ರೆಸ್​ ಪಕ್ಷದ ಬಳುವಳಿಯಾಗಿದೆ. ಇವರಿಗೆ ಜನರ ತೀರ್ಪು ಬೇಕಾಗಿಲ್ಲ. ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆನ್ನುವುದು ಇವರ ಗುರಿಯಾಗಿದೆ. ಆದರೆ ಅದು ಖಂಡಿತ ಸಾಧ್ಯವಾಗುವುದಿಲ್ಲವೆಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ, (ಏಜೆನ್ಸೀಸ್​).