ನ್ಯೂಸ್

ಹೂಡಿಕೆ ನೆಪ ₹25 ಕೋಟಿ ಧೋಖಾ; ಕ್ಯಾಸಿನೋ, ಕ್ರಿಪ್ಟೋ ಕರೆನ್ಸಿಗೆ ಬಂಡವಾಳ ಪಡೆದು ತೋನ್ಸೆ ಫ್ಯಾಮಿಲಿ ವಂಚನೆ

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಕೇಸ್ ಮತ್ತು ನಟಿ ಸಂಜನಾ ಗಲ್ರಾನಿಗೆ ಚೆಕ್ ಬೌನ್ಸ್ ಕೇಸಿನ ಆರೋಪಿ ರಾಹುಲ್ ತೋನ್ಸೆ ಮತ್ತು ಕುಟುಂಬದ ವಿರುದ್ಧ ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಬಸವೇಶ್ವರನಗರದ ಉದ್ಯಮಿ ವಿವೇಕ್ ಪಿ. ಹೆಗಡೆ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಬನಶಂಕರಿ ನಿವಾಸಿ ರಾಹುಲ್, ಆತನ ತಂದೆ ರಾಮಕೃಷ್ಣ ರಾವ್, ತಾಯಿ ರಾಜೇಶ್ವರಿ ರಾವ್, ತಂಗಿ ರಕ್ಷಾ ತೋನ್ಸೆ ಮತ್ತು ಭಾವ ಡಾ. ಚೇತನ್ ನಾರಾಯಣ್ ವಿರುದ್ಧ ಬಸವೇಶ್ವರನಗರ ಠಾಣೆ ಪೊಲೀಸರು ವಂಚನೆ ಹಾಗೂ ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆಯಡಿ (ಬಡ್ಸ್) ಪ್ರಕರಣ ದಾಖಲಿಸಿದ್ದಾರೆ.

ದುಬೈ ಮತ್ತು ಶ್ರೀಲಂಕಾದಲ್ಲಿ ಅತಿಥಿ ಸತ್ಕಾರ ಉದ್ಯಮ, ಕ್ಯಾಸಿನೋ, ಬಿಟ್ ಕಾಯಿನ್ ವ್ಯವಹಾರದ ನೆಪದಲ್ಲಿ ವಿವೇಕ್ ಹೆಗಡೆ ಮತ್ತು ಅವರ ಸ್ನೇಹಿತರಿಂದ ಅಂದಾಜು 25 ಕೋಟಿ ರೂ. ಪಡೆದು ವಂಚಿಸಿದ ಆರೋಪ ಕೇಳಿಬಂದಿದೆ. ಆರೋಪಿ ರಾಮಕೃಷ್ಣ ರಾವ್​ನನ್ನು ಬಂಧಿಸಿ, 14ರವರೆಗೂ ಕಸ್ಟಡಿಗೆ ಪಡೆದು ತನಿಖೆ ನಡೆಸಲಾಗುತ್ತಿದೆ. ರಾಹುಲ್ ತೋನ್ಸೆ, ರಕ್ಷಾ ಮತ್ತು ಚೇತನ್ ನಾರಾಯಣ್ ದುಬೈನಲ್ಲಿ ತಲೆಮರೆಸಿಕೊಂಡಿದ್ದು, ಬಂಧನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2023ರ ಫೆ.7ರಂದು ವಿವೇಕ್ ಹೆಗಡೆಗೆ ಸ್ನೇಹಿತರ ಮೂಲಕ ಬಂಧಿತ ರಾಮಕೃಷ್ಣ ರಾವ್ ಪರಿಚಯವಾಗಿದ್ದ. ‘ನನ್ನ ಮಕ್ಕಳು ಮಧ್ಯಪ್ರಾಚ್ಯ ಮತ್ತು ಶ್ರೀಲಂಕಾದಲ್ಲಿ ಹೊಸ ಉದ್ಯಮ ನಡೆಸುತ್ತಿದ್ದಾರೆ. ಹೆಚ್ಚಿನ ಬಂಡವಾಳ ಬೇಕಿದೆ’ ಎಂದು ಹೇಳಿ ವಾಟ್ಸ್​ಆಪ್ ಕಾಲ್ ಮಾಡಿ ಮಕ್ಕಳ ಜತೆಗೆ ಮಾತನಾಡಿಸಿದ್ದರು. ದುಬೈನಲ್ಲಿ ಅತಿಥಿ ಸತ್ಕಾರ ಉದ್ಯಮದಲ್ಲಿ ಹೂಡಿಕೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ರಾಸ್ ಅಲ್-ಖೈಮಾ ನಗರ ಕ್ಯಾಸಿನೋ ಮತ್ತು ಮನರಂಜನಾ ಕೇಂದ್ರವಾಗಲಿದೆ. ಅದಕ್ಕಾಗಿ ಸಾಲ ಅಥವಾ ಠೇವಣಿ ರೂಪದಲ್ಲಿ ಹಣ ಬೇಕೆಂದು ಹೇಳಿದರು. ಅಲ್ಲದೆ, ಮಗಳು ಮತ್ತು ಅಳಿಯ ಶ್ರೀಲಂಕಾದ ಬೆಲ್ಲಾಜಿಯೋ ಎಂಬ ಕ್ಯಾಸಿನೋ ಟೇಬಲ್​ಗಳನ್ನು ಹೊಂದಿದ್ದು, ಅಲ್ಲಿನ ವ್ಯವಹಾರವನ್ನು ರಾಹುಲ್ ನೋಡಿಕೊಳ್ಳುತ್ತಾನೆ ಎಂದು ನಂಬಿಸಿದ್ದರು. ಮೊದಲು ವಿವೇಕ್​ನಿಂದ 30 ಲಕ್ಷ ರೂ. ಪಡೆದು ಐಷಾರಾಮಿ ಕಾರಿನ ಮೂಲ ದಾಖಲೆ ಮತ್ತು ಬ್ಯಾಂಕ್ ಚೆಕ್​ಗಳನ್ನು ಕೊಟ್ಟಿದ್ದರು.

ವಿವೇಕ್​ನನ್ನು ರಾಹುಲ್ ತೋನ್ಸೆ ಶ್ರೀಲಂಕಾಗೆ ಕರೆದೊಯ್ದು ಶಾಂಗ್ರಿಲಾ ಹೋಟೆಲ್​ನಲ್ಲಿ ಒಂದು ಮಹಡಿ ತೋರಿಸಿ, ‘ಇದನ್ನು ಖರೀದಿ ಮಾಡಿದ್ದೇನೆ’ ಎಂದು ನಂಬಿಸಿದ್ದ. ಅಲ್ಲಿಂದ ಬೆಲ್ಲಾಜಿಯೋ ಕ್ಯಾಸಿನೋಗೆ ಕರೆದೊಯ್ದು ತಂದೆ ರಾಮಕೃಷ್ಣ ರಾವ್ ಹೆಸರಿನಲ್ಲಿ ಎರಡು ಟೇಬಲ್ ಇರುವುದಾಗಿ ಹೇಳಿದ್ದ. ವಾಪಸ್ ಬೆಂಗಳೂರಿಗೆ ಬಂದಮೇಲೆ ನಾನಾ ಆಮಿಷವೊಡ್ಡಿ ಮಕ್ಕಳು ಮತ್ತು ಅಳಿಯನಿಗೆ 3 ಕೋಟಿ ರೂ. ಕೊಡಿಸಿದರು. ಶ್ರೀಲಂಕಾದಲ್ಲಿ ಅರಾಜಕತೆ ಶುರುವಾಗಿದ್ದನ್ನೇ ಬಂಡವಾಳ ಮಾಡಿಕೊಂಡ ರಾಹುಲ್, ಹೂಡಿಕೆ ನೆಪದಲ್ಲಿ ಪಡೆದಿದ್ದ 3 ಕೋಟಿ ರೂ. ಪೈಕಿ 2 ಕೋಟಿ ರೂ. ವಾಪಸ್ ನಂಬಿಕೆ ಹುಟ್ಟುವಂತೆ ಮಾಡಿದ್ದ. ಸ್ವಲ್ಪ ದಿನಕ್ಕೆ ಶ್ರೀಲಂಕಾದಲ್ಲಿ ಎಲ್ಲವೂ

ಸರಿಹೋಗಿದೆ. ನಿಮ್ಮ ಸ್ನೇಹಿತರ ಕಡೆಯಿಂದಲೂ ಹೂಡಿಕೆ ಮಾಡಿಸುವಂತೆ ಪುಸಲಾಯಿಸಿ ಹಂತ ಹಂತವಾಗಿ 25 ಕೋಟಿ ರೂಪಾಯಿ ಪಡೆದಿದ್ದರು. ರಾಹುಲ್ ಕುಟುಂಬದ ಮೇಲೆ ಅನುಮಾನ ಬಂದು ಹಣ ವಾಪಸ್ ಕೇಳಿದಾಗ, ಸಬೂಬು ಹೇಳಿ ತಪ್ಪಿಸಿಕೊಂಡು ಓಡಾಡುತ್ತಿದ್ದ. ಕೊನೆಗೊಂದು ದಿನ ರಾಹುಲ್, ರಕ್ಷಾ ಮತ್ತು ಚೇತನ್ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದಾರೆ. ರಾಮಕೃಷ್ಣ ರಾವ್ ಮತ್ತು ರಾಜೇಶ್ವರಿ ರಾವ್ ದಂಪತಿ ಸಹ ವಿದೇಶಕ್ಕೆ ಹೋಗಲು ಪ್ಲಾ್ಯನ್ ಮಾಡಿದ್ದರು. ಅಷ್ಟರಲ್ಲಿ ವಿವೇಕ್ ಹೆಗಡೆ ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

ವಜಿರೆಕ್ಸ್ ಬಿಟ್​ಕಾಯಿನ್ ಆಮಿಷ: ವಜಿರೆಕ್ಸ್ ಸಿಇಒ ನಿಶ್ಚಿಲ್ ಶೆಟ್ಟಿ ನನ್ನ ಆತ್ಮೀಯ ಸ್ನೇಹಿತ ಎಂದು ಹೇಳಿಕೊಂಡ ರಾಹುಲ್, ಬಿಟ್ ಕಾಯಿನ್​ನಲ್ಲಿ ವಿವೇಕ್ ಕಡೆಯಿಂದ ಹೂಡಿಕೆ ಮಾಡಿಸಿಕೊಂಡಿದ್ದ. ಕೆಲವೇ ದಿನಗಳಲ್ಲಿ ವಜಿರೆಕ್ಸ್ ಬಿಟ್ ಕಾಯಿನ್ ಲಾಂಚ್ ಆಗಲಿದ್ದು, ಶೇ.50 ಲಾಭ ಸಿಗಲಿದೆ ಎಂದು ಆಮಿಷವೊಡ್ಡಿದ್ದ. 2024ರ ಅಕ್ಟೋಬರ್​ನಲ್ಲಿ ಬ್ಲಾಕ್​ಚೈನ್ ಕಾರ್ಯಕ್ರಮ ಏರ್ಪಡಿಸಿ 250 ಕೋಟಿ ರೂ. ಬಿಟ್​ಕಾಯಿನ್ ಇದ್ದು, 50 ಕೋಟಿ ರೂ. ಹೂಡಿಕೆ ಜವಾಬ್ದಾರಿಯನ್ನು ನಮಗೆ ನಿಶ್ಚಿಲ್ ಶೆಟ್ಟಿ ನೀಡಿದ್ದಾರೆ ಎಂದು ವಿವೇಕ್​ಗೆ ಹೇಳಿದ್ದ. ಬೆಂಗಳೂರಿನ ಒಬೆರಾಯ್ ಹೋಟೆಲ್​ನಲ್ಲಿ ಹೂಡಿಕೆದಾರರ ಸಭೆ ನಡೆಸಿ ಶೀಘ್ರ ಲಾಭಾಂಶ ದೊರೆಯಲಿದೆ ಎಂದು ರಾಹುಲ್ ತೋನ್ಸೆ ಆಮಿಷವೊಡ್ಡಿದ್ದ.

ಶ್ರೀಲಂಕಾದಲ್ಲಿ ಸಿಟಿ ಆಫ್ ‘ಡ್ರೀಮ್ಸ್​’: ರಾಜಾಜಿನಗರದ ಸ್ವಾತಿ ಹೋಟೆಲ್​ನಲ್ಲಿ ಹೂಡಿಕೆದಾರರ ಮುಖಾಮುಖಿ ಭೇಟಿಗೆ ಸ್ಥಳ ನಿಗದಿಮಾಡುವಂತೆ ವಿವೇಕ್​ಗೆ ತಿಳಿಸಿದ ರಾಮಕೃಷ್ಣ ರಾವ್, ಶ್ರೀಲಂಕಾದಲ್ಲಿ ಸಿಟಿ ಆಫ್ ಡ್ರೀಮ್್ಸ ಹೆಸರಿನಲ್ಲಿ ಹೊಸ ಯೋಜನೆ ಬರುತ್ತಿದೆ. ಅಲ್ಲಿ ಕ್ಯಾಸಿನೋ ಫ್ಲೋರ್​ಗೆ ಹೂಡಿಕೆ ಮಾಡುವ ಅವಕಾಶ ಸಿಕ್ಕಿದೆ. ಮಗಳು, ಅಳಿಯ ದುಬೈನಲ್ಲಿ ಪ್ರಚಾರ ಮಾಡುತ್ತಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ಭವಿಷ್ಯದಲ್ಲಿ ಗೋವಾದಂತೆ ಶ್ರೀಲಂಕಾ ಪ್ರವಾಸೋದ್ಯಮ ಬೂಮಿಂಗ್ ಆಗಿ ಜಿಡಿಪಿ ಏರಲಿದೆ. ಚೀನಾ ಮತ್ತು ಯುರೋಪಿಯನ್ ಪ್ರವಾಸಿಗಳು ಭಾರತಕ್ಕಿಂತ ಶ್ರೀಲಂಕಾಗೆ ಬರಲಿದ್ದಾರೆ. ಅಲ್ಲಿ ಏಷ್ಯಾದ ಅತ್ಯಂತ ದೊಡ್ಡ ಕ್ಯಾಸಿನೋದಲ್ಲಿ 12 ಟೇಬಲ್ ಇರುವ ಮಹಡಿ ಖರೀದಿಗೆ ಅವಕಾಶ ಸಿಕ್ಕಿದೆ ಎಂದು ಭರವಸೆ ನೀಡಿದ್ದ. ಸಿಂಗಾಪುರದ ಮರೀನಾ ಬೇ ಕ್ಯಾಸಿನೋದಲ್ಲಿ ಏಜೆಂಟ್​ಗಳು ಪರಿಚಯ ಲಭ್ಯವಾಗಿದ್ದು, ಹೂಡಿಕೆ ಮಾಡಿದರೆ ಕಮಿಷನ್ ಸಿಗಲಿದೆ ಎಂದು ನಂಬಿಸಿದ್ದ.

ವಂಚಕ ಫ್ಯಾಮಿಲಿ: ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ರಾಹುಲ್ ತೋನ್ಸೆ ಆರೋಪಿಯಾಗಿದ್ದ. ಇದಾದ ಮೇಲೆ ನಟಿ ಸಂಜನಾ ಗಲ್ರಾನಿ, ಮೊದಲಿಗೆ ಸಹೋದರ ಎಂದು ಹೇಳಿಕೊಂಡಿದ್ದರು. ಮತ್ತೆ ರಾಹುಲ್ ತೋನ್ಸೆ ಮತ್ತು ರಾಮಕೃಷ್ಣ ಸೇರಿ ಇತರರ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಗೆ ಚೆಕ್​ಬೌನ್ಸ್ ಕೇಸ್ ದಾಖಲಿಸಿದ್ದರು. ಇದರಲ್ಲಿಯೂ ತಂದೆ-ಮಗ ಆರೋಪಿಗಳಾಗಿದ್ದರು.

ಧೋಖಾ ಐಡಿಯಾ

  • 9 ಕೋಟಿ ರೂ. ನೆಟ್​ಬ್ಯಾಂಕಿಂಗ್ ಮೂಲಕವೇ ಸ್ವೀಕರಿಸಿದ ಆರೋಪಿಗಳು
  • ದೇಶದಲ್ಲಿ ಮಕ್ಕಳು, ಅಳಿಯ ಜತೆಗೆ ವರ್ಚುವಲ್ ಮೀಟಿಂಗ್ ಏರ್ಪಡಿಸುತ್ತಿದ್ದ ತಂದೆ
  • ನೀನು ಹಿರಿಯ ಮಗ ಇದ್ದಂತೆ’ ಎಂದು ದೂರುದಾರರಿಗೆ ನಂಬಿಸಿ ವಂಚಿಸಿದ ರಾಮಕೃಷ್ಣ ದಂಪತಿ
  • ಭರ್ತಿ ಆಗಿರುವ ಪಾಸ್​ಪೋರ್ಟ್ ಕೊಟ್ಟು ಹೊಸ ಪಾಸ್​ಪೋರ್ಟ್​ನಲ್ಲಿ ವಿದೇಶಕ್ಕೆ ಪರಾರಿ