ನ್ಯೂಸ್

ಹೂಡಿಕೆ ಆ್ಯಪ್‌ನಿಂದ ₹2.68 ಕೋಟಿ ಧೋಖಾ

ಬೆಂಗಳೂರು: ಯೂಟ್ಯೂಬ್ ಚಾನಲ್‌ನಲ್ಲಿ ಸಿನಿಮಾ ವೀಕ್ಷಿಸುವಾಗ ಜಾಹೀರಾತು ನೋಡಿ ಟ್ರೇಡಿಂಗ್ ಆ್ಯಪ್‌ನಲ್ಲಿ 2.68 ಕೋಟಿ ರೂ. ಹೂಡಿಕೆ ವ್ಯಕ್ತಿಯೊಬ್ಬರು ಸೈಬರ್ ವಂಚನೆಗೆ ಒಳಗಾಗಿದ್ದಾರೆ.

ಸುಬ್ರಮಣ್ಯಪುರದ ಗುಬ್ಬಲಾಳ ಅಪಾರ್ಟ್‌ಮೆಂಟ್ ನಿವಾಸಿ ಬೇಲೂರು ನರಸಿಂಹಮೂರ್ತಿ ರವೀಂದ್ರ ಎಂಬುವರು ಈ ಕುರಿತು ದಕ್ಷಿಣ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜ. 3ರಂದು ಮನೆಯಲ್ಲಿ ನರಸಿಂಹಮೂರ್ತಿ, ಯೂಟ್ಯೂಬ್ ಚಾನಲ್‌ನಲ್ಲಿ ನೋಡುತ್ತಿದ್ದಾಗ ಅಬಾನ್ಸ್ ಸ್ಮಾರ್ಟ್ ಟ್ರೇಡರ್ಸ್‌ ಜಾಹೀರಾತು ಬಂದಿತ್ತು. ಅದರ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಶಾರ್ದುಲ್ ಜಾನಿ ಎಂಬಾತನ ಮೊಬೈಲ್ ಸಂಖ್ಯೆ ಲಭ್ಯವಾಗಿತ್ತು. ಬಳಿಕ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿಕೊಂಡಿದ್ದ. ಆ್ಯಪ್ ಇನ್‌ಸ್ಟಾಲ್ ಮಾಡಿಸಿ ಹಣ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದ. ಆರಂಭದಲ್ಲಿ ದೂರುದಾರ 1 ಲಕ್ಷ ರೂ. ಹೂಡಿಕೆ ಮಾಡಿದ್ದ. ಕೆಲವೇ ದಿನಕ್ಕೆ ಶೇ.5 ಲಾಭಾಂಶ ವಾಪಸ್ ಸಿಕ್ಕಿತ್ತು. ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಹಂತ ಹಂತವಾಗಿ 2.68 ಕೋಟಿ ರೂ. ಅನ್ನು ಹೂಡಿಕೆ ಮಾಡಿದ್ದರು. ಆದರೆ, ಕೇವಲ 50 ಸಾವಿರ ರೂ. ಕಮಿಷನ್ ನೀಡಿದ್ದರು. ಉಳಿದ ಹಣವನ್ನು ವಾಪಸ್ ಕೊಟ್ಟಿರಲಿಲ್ಲ. ಲಾಭಾಂಶವನ್ನು ವಿತ್‌ಡ್ರಾ ಮಾಡಲು ಹೋದಾಗ ಮತ್ತಷ್ಟು ಹಣ ಹೂಡಿಕೆ ಮಾಡಿದರೆ ಸಿಗಲಿದೆ ಎಂದು ಷರತ್ತು ವಿಧಿಸಿದ್ದರು.

ಅನುಮಾನ ಬಂದ ಹೂಡಿಕೆ ಹಣ ಡ್ರಾ ಮಾಡಲು ಪ್ರಯತ್ನ ಮಾಡಿದಾಗ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಸಂಪರ್ಕ ಕಡಿತ ಮಾಡಿದ್ದಾರೆ. ನೊಂದ ನರಸಿಂಹಮೂರ್ತಿ, ದಕ್ಷಿಣ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ್ಯಪ್‌ನಲ್ಲಿ ತೋರಿಸಿ ಖಾತೆಗೆ ಕನ್ನ

ಬನಶಂಕರಿ 3ನೇ ಹಂತದಲ್ಲಿರುವ ಶ್ರೀನಿವಾಸಪುರದ ಮಂಜುನಾಥ್ ಎಂಬಾತ, ವಾಟ್ಸ್‌ಆ್ಯಪ್‌ಗೆ ಬಂದ ಹೂಡಿಕೆ ಆ್ಯಪ್‌ನಲ್ಲಿ 66.51 ಲಕ್ಷ ರೂ. ಹೂಡಿಕೆ ಮಾಡಿ ಮೋಸಕ್ಕೆ ಒಳಗಾಗಿದ್ದಾರೆ. ೆ.17ರಂದು ವಾಟ್ಸ್‌ಆ್ಯಪ್‌ಗೆ ಮಿರೇ ಅಸೆಟ್ ಶೇರ್ಖಾನ್ ಸೆಕ್ಯುರಿಟೀಸ್ ಲಿ. ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಆಸೆ ಹುಟ್ಟಿಸಲಾಗಿತ್ತು. ಇದನ್ನು ನಂಬಿದ ಮಂಜುನಾಥ್, ಲಿಂಕ್ ಮೇಲೆ ಕ್ಲಿಕ್ ಮಾಡಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಹಂತ ಹಂತವಾಗಿ ಷೇರುಗಳ ಖರೀದಿ ಮತ್ತು ಮಾರಾಟದ ವ್ಯವಹಾರ ನಡೆಸಿದ್ದ. ಇದೇ ರೀತಿಯಾಗಿ 66.51 ಲಕ್ಷ ರೂ. ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದು, ಆ್ಯಪ್‌ನಲ್ಲಿ 1.08 ಕೋಟಿ ರೂ. ಲಾಭಾಂಶ ಗಳಿಸಿರುವುದಾಗಿ ತೋರಿಸುತ್ತಿದ್ದರು. ಇತ್ತೀಚೆಗೆ ಲಾಭಾಂಶ ಡ್ರಾ ಮಾಡಲು ಪ್ರಯತ್ನ ಮಾಡಿದಾಗ ಸಂಪರ್ಕ ಕಡಿತಮಾಡಿಕೊಂಡು ಆರೋಪಿಗಳು ಮೋಸ ಮಾಡಿದ್ದಾರೆ. ಈ ಕುರಿತು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹5 ಕೋಟಿ ಆಸೆ ತೋರಿಸಿ ₹40 ಲಕ್ಷ ಎಗರಿಸಿದರು

ಬನಶಂಕರಿ 3ನೇ ಹಂತದ ಐಟಿಐ ಲೇಔಟ್ ನಿವಾಸಿ ವಾದಿರಾಜ್ ರಾವ್ ಎಂಬುವರಿಗೆ ಆ್ಯಪ್‌ನಲ್ಲಿ 5.19 ಕೋಟಿ ರೂ. ಲಾಭಾಂಶ ಗಳಿಸಿರುವುದಾಗಿ ಆಸೆ ಹುಟ್ಟಿಸಿ 39.95 ಲಕ್ಷ ರೂ. ವಂಚಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ ವಾದಿರಾಜ್, ವಾಟ್ಸ್‌ಆ್ಯಪ್‌ನಲ್ಲಿ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಬಳಿಕ ಹಂತ ಹಂತವಾಗಿ ಷೇರುಗಳ ಖರೀದಿ ಮತ್ತು ಮಾರಾಟ ಮಾಡುವಲ್ಲಿ ಹಣ ಹೂಡಿಕೆ ಮಾಡಿದ್ದರು. ೆ. 24 ರಿಂದ ಏ. 2ರ ನಡುವೆ ಹಂತ ಹಂತವಾಗಿ 39.95 ಲಕ್ಷ ರೂ. ಹೂಡಿಕೆ ಮಾಡಿದ್ದರು. ಅಪ್ಲಿಕೇಷನ್‌ನಲ್ಲಿ 5.19 ಕೋಟಿ ರೂ. ಲಾಭಾಂಶ ತೋರಿಸಿದೆ ಆದರೆ, ವಿತ್ ಡ್ರಾ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಆರೋಪಿಗಳು ಸಂಪರ್ಕ ಕಡಿತ ಮಾಡಿಕೊಂಡಿದ್ದರು. ನೊಂದ ವಾದಿರಾಜ್, ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.