ನ್ಯೂಸ್

8000 ಕೋಟಿ ರೂ. ಶಸ್ತ್ರಾಸ್ತ್ರ ಖರೀದಿ

ನವದೆಹಲಿ: ನೆರೆಯ ಚೀನಾ ಮತ್ತು ಪಾಕಿಸ್ತಾನಗಳು ಗಡಿಯಲ್ಲಿ ಪದೇಪದೆ ಕ್ಯಾತೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳ ಬಲವನ್ನು ಸರ್ಕಾರ ಹೆಚ್ಚಿಸುತ್ತಿದೆ. ಈ ಕ್ರಮದ ಭಾಗವಾಗಿ ವಾಯುಪಡೆಗೆ (ಐಎಎಫ್) 106 ಬೇಸಿಕ್ ಟ್ರೇನರ್ ವಿಮಾನಗಳು ಸೇರಿದಂತೆ ಅಂದಾಜು -ಠಿ; 8,722.38 ಕೋಟಿ ಮೌಲ್ಯದ ರಕ್ಷಣಾ ಶಸ್ತ್ರಾಸ್ತ್ರ ಮತ್ತು ಇನ್ನಿತರ ಸಾಧನಗಳನ್ನು ಖರೀದಿಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಮಂಗಳವಾರ ಅನುಮೋದನೆ ನೀಡಿದೆ. ಇದರಲ್ಲಿ ಕೆಲ ಸಾಧನಗಳನ್ನು ಭಾರತದಲ್ಲೇ ನಿರ್ವಿುಸುವ ಮೂಲಕ ಆತ್ಮನಿರ್ಭರ ಭಾರತ ಅಭಿಯಾನಕ್ಕೂ ಉತ್ತೇಜನ ನೀಡಲಾಗುತ್ತಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್)ನಿಂದ 106 ಬೇಸಿಕ್ ಟ್ರೇನರ್ ವಿಮಾನಗಳನ್ನು (ಎಚ್​ಟಿಟಿ-40) ಖರೀದಿಸಲಾಗುತ್ತದೆ. ನೌಕಾಪಡೆಯ ಬಲವರ್ಧನೆಗೆ ಮತ್ತು ಕರವಾಳಿ ರಕ್ಷಣಾ ಪಡೆಗೆ ಯುದ್ಧನೌಕೆಗಳಲ್ಲಿ ಅಳವಡಿಸಲಾಗಿರುವ ಸೂಪರ್ ರಾಪಿಡ್ ಗನ್ ಮೌಂಟ್ (ಎಸ್​ಆರ್​ಜಿಎಂ)ನ ನವೀಕರಿಸಿದ ಆವೃತ್ತಿಯನ್ನು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬೆಲ್)ನಿಂದ ಖರೀದಿಸಲು ಡಿಎಸಿ ಅನುಮೋದನೆ ನೀಡಿದೆ. ಎಸ್​ಆರ್​ಜಿಎಂನ ನವೀಕರಿಸಿದ

ಆವೃತ್ತಿಯು ಕ್ಷಿಪಣಿಗಳು ಮತ್ತು ಫಾಸ್ಟ್ ಅಟ್ಯಾಕ್ ಕ್ರಾಫ್ಟ್​ಗಳಿಂದ ನೌಕಾಪಡೆಯ ದಾಳಿ ಸಾಮರ್ಥ್ಯ ಹೆಚ್ಚಲಿದೆ ಎನ್ನಲಾಗಿದೆ. ಭೂ ಸೈನ್ಯಕ್ಕಾಗಿ 125 ಎಂಎಂ ಎಪಿಎಫ್​ಎಸ್​ಡಿಎಸ್ (ಆರ್ಮರ್ ಫಯರಿಂಗ್ ಫಿನ್ ಸ್ಟೆಬಿಲೈಸ್ಡ ಡಿಸ್ಕಾರ್ಡಿಂಗ್ ಸಬೊಟ್) ಮದ್ದುಗುಂಡುಗಳನ್ನು ಖರೀದಿಸಲು ಒಪ್ಪಿಗೆ

ನೀಡಲಾಗಿದ್ದು, ಈ ಮದ್ದುಗುಂಡುಗಳು ಶೇಕಡ 70ರಷ್ಟು ಸ್ಥಳೀಯ ಅಂಶ ಹೊಂದಿರಲಿವೆ. ಇವುಗಳ ಜತೆಗೆ ಎಕೆ 203 ಮತ್ತು ಮಾನವರಹಿತ ವೈಮಾನಿಕ ವಾಹನಗಳ ನವೀಕರಣದ ವೇಗವನ್ನು ಹೆಚ್ಚಿಸುವ ಬಗ್ಗೆಯೂ ಡಿಎಸಿ ತಿಳಿಸಿದೆ.