ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ೭೫ ವರ್ಷ ಪೂರೈಕೆ ಆಗಿರುವ ಹಿನ್ನಲೆಯಲ್ಲಿ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಲು ಸುಮಾರು ೪೦ ಕೋಟಿ ರೂ.ಗಳನ್ನು ಸರ್ಕಾರದಿಂದ ಮಂಜೂರಾತಿಗೆ ತಾತ್ಕಿಕವಾಗಿ ಒಪ್ಪಿಗೆ ಸಿಕ್ಕಿದ್ದು, ಕೆಲವೇ ದಿನಗಳಲ್ಲಿ ಈ ಸಾಲಿನಲ್ಲಿ ೨೦ ಕೋಟಿ ಮೊತ್ತಕ್ಕೆ ಮಂತ್ರಿ ಮಂಡಲದಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಎಂ.ಎಲ್.ಸಿ.ಅನಿಲ್‌ಕುಮಾರ್ ತಿಳಿಸಿದರು.
ಪ್ರಥಮ ದರ್ಜೆ ಕಾಲೆಜಿನಲ್ಲಿ ಶನಿವಾರ ಜಾನಪದ ಉತ್ಸವ ಮತ್ತು ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಾಲೇಜು ಅಭಿವೃದ್ಧಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ರವರೊಂದಿಗೆ ಶಾಸಕ ಕೊತ್ತೂರು ಮಂಜುನಾಥ್ ಹಲವು ಬಾರಿಯ ಮಾತುಕತೆಯ ಫಲವಾಗಿ ಸಚಿವರು ಒಪ್ಪಿಗೆ ನೀಡಿದ್ದು, ಈ ವರ್ಷದಿಂದಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಮುಂದಿನ ಹಂತವಾಗಿ ಉಳಿದ ೨೦ ಕೋಟಿ ರೂ.ಗಳನ್ನು ಮುಂದಿನ ವರ್ಷ ಬಿಡುಗಡೆ ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಸಜ್ಜಿತ ಕಾಲೇಜನ್ನು ನಿರ್ಮಿಸುವುದಾಗಿ ತಿಳಿಸಿದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕೋಲಾರದ ಮಣ್ಣಿನ ಗುಣದಿಂದಲೇ ಅನೇಕ ಬುದ್ಧಿವಂತರು ಎಲ್ಲಾ ಕ್ಷೇತ್ರಗಳನ್ನು ಪ್ರವೇಶ ಮಾಡಲು ಸಾಧ್ಯವಾಗಿದೆ. ರಾಜ್ಯದ ಮೊದಲ ಮುಖ್ಯಮಂತ್ರಿ, ಕೆ.ಎ.ಎಸ್.ಐ.ಎ.ಎಸ್.ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುತ್ತಿರುವುದು, ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧಕರು ಹುಟ್ಟಿಕೊಂಡಿರುವುದು ಈ ಎಲ್ಲವೂ ಕೂಡ ಕೋಲಾರದ ಮಣ್ಣಿನ ಗುಣದಿಂದಲೇ ಸಾಧ್ಯ ಎಂದರು.
ವಿದ್ಯಾರ್ಥಿನಿಯರ ಆಗಿಯೇ ವಿದ್ಯಾರ್ಥಿಗಳು ಸಹ ಹೆಚ್ಚು ಆಸಕ್ತಿಯಿಂದ ಅಧ್ಯಯನ ನಡೆಸಿ, ತಮ್ಮ ಮುಂದಿನ ಬದುಕನ್ನು ಹಸನುಗೊಳಿಸಿಕೊಳ್ಳಬೇಕು ಎಂದರು. ಈ ಕಾಲೇಜಿನಲ್ಲಿ ಓದಿದ ಬಹುತೇಕರು ಈ ಜಿಲ್ಲೆಯ ನಾಯಕರಾಗಿ ಎಲ್ಲ ಕಡೆ ಕಾಣಿಸಿಕೊಳ್ಳುವಂತಾಗಿದೆ. ಈ ಪರಂಪರೆ ಮುಂದುವರೆಯಬೇಕು ಎಂದು ಆಶಿಸಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಕಾಶ್ ಮಾತನಾಡಿ, ನಾವು ಈ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾಗ ಶಿಕ್ಷಕರಿಂದ ನಮಗೆ ಸಿಕ್ಕ ಬೆಂಬಲದಿAದಲೇ ನಾವು ಕಲಾವಿದರಾಗಿ, ಹೋರಾಟಗಾರರಾಗಿ ರೂಪಗೊಂಡಿದ್ದೇವೆ. ಅತ್ಯುತ್ತಮ ಪ್ರಾಧ್ಯಾಪಕರು ಈ ಕಾಲೇಜಿನಲ್ಲಿ ಅನೇಕ ನಾಯಕರನ್ನು ರೂಪಿಸಿದ್ದಾರೆ ಎಂದು ತಿಳಿಸಿದರು.
ಕಲಾವಿದರಾದ ಚಿಕ್ಕರೆಡ್ಡಪ್ಪ ಮತ್ತು ತಂಡದಿAದ ಡೊಳ್ಳು ಕುಣಿತ, ಗಾರಡಿ ಬೊಂಬೆಗಳ ಪ್ರದರ್ಶನ, ಪಟದ ಕುಣಿತ, ವೀರಗಾಸೆ ಮುಂತಾದ ಜಾನಪದ ಪ್ರದರ್ಶನಗಳು ನಡೆದವು.
ಇದಕ್ಕೂ ಮೊದಲು ಎತ್ತಿನಗಾಡಿ ಮೆರವಣಿಗೆಯಲ್ಲಿ ಜನಪ್ರತಿನಿಧಿಗಳು, ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು, ಕಲಾತಂಡಗಳೊAದಿಗೆ ಭಾಗವಹಿಸಿದರು. ಶಾಸಕ ಕೊತ್ತೂರು ಮಂಜುನಾಥ್ ಎತ್ತಿನಗಾಡಿ ಓಡಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ಸಿರಿಧಾನ್ಯಗಳ ಮತ್ತು ಕೃಷಿ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪಿಚ್ಚಹಳ್ಳಿ ಶ್ರೀನಿವಾಸ್, ಪದ್ಮಶ್ರೀ ವಿಜೇತರಾದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಕಾಲೇಜಿನ ಪ್ರಾಂಶುಪಾಲ ಮುನಿಶಾಮಪ್ಪ, ಹಿರಿಯ ಮುಖಂಡರಾದ ಉತ್ತನೂರು ಶ್ರೀನಿವಾಸ್, ಸರ್ಕಾರದ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ವೈ.ಶಿವಕುಮಾರ್, ಪ್ರಾಧ್ಯಾಪಕರಾದ ಡಾ.ಮುರಳೀಧರ್, ಡಾ.ಅರಿವು ಶಿವಪ್ಪ, ಡಾ.ಪ್ರಸನ್ನಕುಮಾರಿ, ಡಾ.ಚಲುವರಾಜು, ಮೈಲಾಂಡಹಳ್ಳಿ ಮುರಳಿ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ ೨೬ ಕೆ.ಎಲ್.ಆರ್. ೧೦ : ಪ್ರಥಮದರ್ಜೆ ಕಾಲೇಜಿನ ಜಾನಪದ ಉತ್ಸವ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಎತ್ತಿನಗಾಡಿ ಓಡಿಸಿದ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂ.ಎಲ್.ಸಿ.ಅನಿಲ್‌ಕುಮಾರ್.
ಚಿತ್ರ ೨೬ ಕೆ.ಎಲ್.ಆರ್. ೧೦ಎ : ಕಾಲೇಜಿನ ವಾರ್ಷಿಕೋತ್ಸವ ಮತ್ತು ಜಾನಪದ ಉತ್ಸವದ ಅಂಗವಾಗಿ ಕೃಷಿ ಪರಿಕರಣಗಳು ಮತ್ತು ಸಿರಿಧಾನ್ಯ ಮೇಳ ಆಯೋಜನೆ ಮಾಡಿರುವುದು.