ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೆಎಸ್‌ಆರ್‌ಟಿಸಿ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಡಿ.೩೧ ರಿಂದ ಮುಷ್ಕರಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ ನಿವೃತ್ತ ಸಿಬ್ಬಂದಿಗೆ ನೀಡಬೇಕಾಗಿದ್ದ ಬಾಕಿ ಹಣವನ್ನು ಬಿಡುಗಡೆ ಮಾಡಿದೆ.
ನಿವೃತ್ತ ಸಿಬ್ಬಂದಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತ ೨೨೪.೦೫ ಕೋಟಿ ರೂ.ಹಣವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಿಡುಗಡೆ ಮಾಡಿದ್ದಾರೆ.
೨೦೨೦ ರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ನಿವೃತ್ತ ಸಿಬ್ಬಂದಿಗೆ ನೀಡಬೇಕಾಗಿದ್ದ ಬಾಕಿ ಹಣದ ಚೆಕ್ ಅನ್ನು ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಮೂವರು ಸಿಬ್ಬಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ನುಡಿದಂತೆ ನಡೆದಿದ್ದೇವೆ ಎಂಬುದನ್ನು ನಾವು ಮತ್ತೊಮ್ಮೆ ಸಾಬೀತುಪಡಿಸಿರುತ್ತೇವೆ. ಈ ಹಿಂದೆ ನೌಕರರ ಸಂಘಟನೆಗಳೊಂದಿಗೆ ನಡೆದ ಸಭೆಯಲ್ಲಿ ಅವರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿ, ಅವುಗಳಲ್ಲಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವುದಾಗಿ ನೀಡಿದ್ದ ಭರವಸೆಯಂತೆ, ಈ ಪೈಕಿ ನಾಲ್ಕು ಸಾರಿಗೆ ನಿಗಮಗಳ ೧೩೦೮ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಯ ಅಂತರ ನಿಗಮ ವರ್ಗಾವಣೆಯ ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ ಎಂದರು.
ಎಲ್ಲಾ ೧೧೬೯೪ ನಿವೃತ್ತ ಸಿಬ್ಬಂದಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತವನ್ನು ಅಧಿವೇಶನದ ನಂತರ ಬಿಡುಗಡೆಗೊಳಿಸುವುದಾಗಿ ನೀಡಿದ್ದ ಭರವಸೆಯಂತೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲಾಗಿತ್ತು.
ನಾಲ್ಕು ಸಾರಿಗೆ ನಿಗಮಗಳಲ್ಲಿ ೧.೦೧.೨೦೨೦ ರಿಂದ ೨೮.೦೨.೨೦೨೩ ರವರೆಗಿನ ಅವಧಿಯಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತಿ ಹೊಂದಿರುವ ಸುಮಾರು ೧೧,೬೯೪ ಸಿಬ್ಬಂದಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತ ರೂ.೨೨೪.೦೫ ಕೋಟಿಯನ್ನು ನಾಲ್ಕು ನಿಯಮಗಳಲ್ಲಿ ಪಾವತಿಸಲು ಕ್ರಮ ಜರುಗಿಸಲಾಗಿದೆ ಎಂದರು.
ಕಾಲಕಾಲಕ್ಕೆ ಸಿಬ್ಬಂದಿಗೆ ನೀಡಬೇಕಾಗಿರುವ ಆರ್ಥಿಕ ಹಾಗೂ ಇತರೆ ಸೌಲಭ್ಯಗಳನ್ನು ನೀಡದಿದ್ದರೆ, ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಈ ಬಗ್ಗೆ ಗಮನವಹಿಸಲು ಈ ಸಂದರ್ಭದಲ್ಲಿ ಸಾರಿಗೆ ಸಚಿವರು ಸೂಚನೆ ನೀಡಿದರು.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್.ರಾಮಚಂದ್ರನ್ ಸೇರಿ ಇತರರು ಉಪಸ್ಥಿತರಿದ್ದರು.
ಬಾಕ್ಸ್.... ಸಂಸ್ಥೆಗಳು- ಸಿಬ್ಬಂದಿ, ಬಿಡುಗಡೆಯಾದ ಹಣ
ಕೆಎಸ್‌ಆರ್‌ಟಿ-೪೭೧೧-ಸಿಬ್ಬಂದಿ, ೮೬.೫೫ ಕೋಟಿ ರೂ.
ಬಿಎಂಟಿಸಿ-೧೮೩೩-ಸಿಬ್ಬಂದಿ, ೫೦.೨೫ ಕೋಟಿ ರೂ.
ವಾಕರಸಾ ಸಂಸ್ಥೆ-೩೧೧೬-ಸಿಬ್ಬಂದಿ-೫೧.೫೦ ಕೋಟಿ ರೂ.
ಕಕರಸಾ ಸಂಸ್ಥೆ- ೨೦೩೪-ಸಿಬ್ಬಂದಿ, ೩೫.೭೫ ಕೋಟಿ ರೂ.
ಒಟ್ಟು ೧೧,೬೯೪ ಸಿಬ್ಬಂದಿ-೨೨೪.೦೫ ಕೋಟಿ ರೂ.