ವಿಜಯವಾಣಿ ಸುದ್ದಿಜಾಲ ಕೋಲಾರ
ಮಲೇರಿಯಾ ಮುಕ್ತ ಕರ್ನಾಟಕಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಸಂಕಲ್ಪ ಮಾಡಿ ಕಾರ್ಯಪ್ರವೃತ್ತರಾಗಿದ್ದು, ರಾಜ್ಯವನ್ನು ೨೦೩೦ ರೊಳಗಾಗಿ ಮಲೇರಿಯಾ ಮುಕ್ತವಾಗಿಸುವ ಗುರಿ ಹೊಂದಿದೆ. ಎಲ್ಲಾ ಇಲಾಖೆಗಳ ಸಹಭಾಗಿತ್ವ ಮತ್ತು ಸಹಕಾರದೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಶ್ರೀನಿವಾಸ್ ತಿಳಿಸಿದರು.
ಕೋಲಾರ ಜಿಲ್ಲೆಯ ಎಸ್‌ಎನ್‌ಆರ್ ಆಸ್ಪತ್ರೆ ಆವರಣದಲ್ಲಿ ವಿಶ್ವ ಮಲೇರಿಯ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ವಿಶ್ವ ಮಲೇರಿಯಾ ದಿನವನ್ನು `ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ, ಮರು ಹೂಡಿಕೆ ಮಾಡಿ, ಮರು ಕಲ್ಪನೆ ಮಾಡಿ, ಮರು ಉತ್ತೇಜನ ಮಾಡೋಣ' ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಮಲೇರಿಯಾ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರೆ, ಈ ರೋಗವನ್ನು ಪೂರ್ಣ ತಡೆಗಟ್ಟಬಹುದು. ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿಗಳ ಸಹಕಾರ ಸಿಗುವಂತೆ ಕ್ರಮವಹಿಸಲು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಮಲೇರಿಯಾ ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಜೀವಿಯಿಂದ ಉಂಟಾಗುತ್ತದೆ. ಇದು ಸೋಂಕಿತ ಅನಾಫಲೀಸ್ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರುಡುವಂತಾದ್ದಾಗಿದ್ದು, ರೋಗದ ಲಕ್ಷಣಗಳೆಂದರೆ ವಿಪರೀತ ಚಳಿ, ಬಿಟ್ಟು ಬಿಟ್ಟು ಜ್ವರ ಮೈಕೈನೋವು, ತಲೆನೋವು, ವಾಕರಿಕೆ ಮುಖ್ಯವಾದುವು ಎಂದು ತಿಳಿಸಿದರು.
ಜಿಲ್ಲಾಶಸ್ತçಚಿಕಿತ್ಸಕರಾದ ಡಾ.ಜಗದೀಶ್ ಮಾತನಾಡಿ, ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿದ್ದು, ಯಾವೂದೇ ಜ್ವರ ಇರಲಿ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರಕ್ತ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ರವಿಕುಮಾರ್ ಮಾತನಾಡಿ, ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು, ಇತರೆ ಸೊಳ್ಳೆ ನಿರೋಧಕಗಳನ್ನು ಬಳಸುವುದು. ಕೆರೆ, ಕುಂಟೆ, ಬಾವಿಗಳಿಗೆ ಲಾರ್ವಹಾರಿ ಮೀನುಗಳನ್ನು ಬಿಟ್ಟು ವೃದ್ದಿಮಾಡುವುದು. ಆರೋಗ್ಯ ಇಲಾಖೆ ಕೈಗೊಳ್ಳುವ ಕೀಟನಾಶಕ ಸಿಂಪಡಣೆ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದು. ಸೊಳ್ಳೆ ನಿಯಂತ್ರಣಕ್ಕಾಗಿ ಪರಿಸರ ಸ್ನೇಹ ವಿಧಾನ ಜೈವಿಕ ನಿಯಂತ್ರಣದಡಿಯಲ್ಲಿ ಬೇವಿನ ಸೊಪ್ಪು ಹೊಗೆ ಹಾಕುವುದು ಒಳ್ಳೆಯದು ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನಿಗಧಿತ ಕ್ಷೇತ್ರದಲ್ಲಿ ಮನೆ ಮನೆ ಭೇಟಿ ವೇಳೆಯಲ್ಲಿ ಕಂಡು ಬರುವ ಎಲ್ಲಾ ಜ್ವರದ ಪ್ರಕರಣಗಳಿಗೆ ರಕ್ತ ಲೇಪನಗಳನ್ನು ಸಂಗ್ರಹಿಸಿ ಮಲೇರಿಯಾ ಪರೀಕ್ಷೆಗೊಳಪಡಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬರಂತೆ ಕಾರ್ಯನಿರ್ವಹಿಸುತ್ತಿದ್ದು ಜನತೆ ಅವರಿಗೆ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ರೇಣುಕಾದೇವಿ, ಗೀತಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಹೇಶ್, ಲೋಕೇಶ್, ರಘುಪತಿ ಸೇರಿದಂತೆ ಜಿಲ್ಲಾಸ್ಪತ್ರೆಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು,ಪ್ಯಾರಾ ಮೆಡಿಕಲ್ ತರಬೇತಿ ವಿದ್ಯಾರ್ಥಿಗಳು ಜಿಲ್ಲಾ ಎಸ್‌ಎನ್ ಆರ್ ಆಸ್ಪತ್ರೆ ಆವರಣದಿಂದ ಜಾಥಾ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮುಂಜಾಗ್ರತ ಕರಪತ್ರಗಳನ್ನು ವಿತರಿಸಿ, ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲಾಯಿತು ಮತ್ತ ನಗರದ ಬಾಲಕಾರ ಕಾಲೇಜು ಸಮೀಪ ಸರ್ವಜ್ಞ ಪಾರ್ಕ್ ಮುಂಭಾಗ ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರಿವು ಮೂಡಿಸಲಾಯಿತು.
ಚಿತ್ರ ೦೫ ಕೆ.ಎಲ್.ಆರ್. ೦೯ : ಕೋಲಾರ ಜಿಲ್ಲೆಯ ಎಸ್‌ಎನ್‌ಆರ್ ಆಸ್ಪತ್ರೆ ಆವರಣದಲ್ಲಿ ವಿಶ್ವ ಮಲೇರಿಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಶ್ರೀನಿವಾಸ್ ಚಾಲನೆ ನೀಡಿದರು.