ನ್ಯೂಸ್

ಹೋರಾಟಗಳು ದಾರಿ ತಪ್ಪುವ ಮುನ್ನ ಸ್ಪಂದಿಸಿ : ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ

ರಾಮನಗರ :  ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧಾರ್ಮಿಕ ಸಂಸ್ಥೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣ ತಾಲೂಕು ಗೌಡಗೆರೆಯಲ್ಲಿ ಭಾನುವಾರ ಹಮ್ಮಿ

ಕೊಂಡಿದ್ದ ಮಹಾ ಗಣಪತಿ ದೇವಾ ಲಯ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ಇಂದು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧಾರ್ಮಿಕ ಸಂಸ್ಥೆಗಳ ನೇತೃತ್ವದಲ್ಲಿ ಹೋರಾಟಗಳು ನಡೆಯುತ್ತಿವೆ. ಹೋರಾಟಗಳು ದಾರಿ ತಪ್ಪುವ ಮುನ್ನ ಸರ್ಕಾರವೇ ಸ್ವಾಮೀಜಿಗಳ ಭಾವನೆಗಳಿಗೆ ಸ್ಪಂದಿಸಿ, ವಾಸ್ತವಿಕ ನೆಲಗಟ್ಟಿನಲ್ಲಿ ಅವರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡುವುದು ಸೂಕ್ತ ಎಂದರು.

ಬಿಜೆಪಿಯೊಂದಿಗೆ ವಿಧಾನ ಪರಿಷತ್ ಸಭಾಪತಿ ಸ್ಥಾನದ ಚುನಾವಣೆ ಸಂಬಂಧ ಮೈತ್ರಿ ಮಾಡಿಕೊಳ್ಳಲಾಗಿದೆಯೇ ಹೊರತು, ಆ ಪಕ್ಷದ ಎಲ್ಲ ನಿಲುವನ್ನು ಬೆಂಬಲಿಸುತ್ತೇವೆ ಎಂದಲ್ಲ. ರಾಜ್ಯದ ಅಭಿವೃದ್ಧಿಗೆ ಹಾಗೂ ವಿಷಯಾಧಾರಿತ ಬೆಂಬಲ ನೀಡುತ್ತೇವೆಯೇ ಹೊರತು ಜನವಿರೋಧಿ ನೀತಿ ಅನುಸರಿಸಿದಾಗ ಅದನ್ನು ಖಂಡಿಸುವ ಕೆಲಸವನ್ನೂ ಜೆಡಿಎಸ್ ಮಾಡಲಿದೆ ಎಂದು ಎಚ್‌ಡಿಕೆ ಎಚ್ಚರಿಕೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಈ ಹೊತ್ತಿಗಾಗಲೇ ರೈತ ಮುಖಂಡರೊಂದಿಗೆ ಖುದ್ದು ಸಭೆ ನಡೆಸಿ ರೈತರ ವಿರೋಧಕ್ಕೆ ಕಾರಣವಾಗಿರುವ ಕೃಷಿ ಮಸೂದೆಗಳ ಸಾಧಕ-ಬಾಧಕಗಳ ಬಗ್ಗೆ ತಿಳಿವಳಿಕೆ ನೀಡಬೇಕಿತ್ತು. ಆ ಮೂಲಕ ಹೋರಾಟಗಾರರ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿತ್ತು ಎಂದರು.

ಹೋರಾಟಕ್ಕೆ ಜಯ ಸಿಗದಿದ್ದರೆ ಮುಂದಿನ ಅ.2ವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ರೈತ ಮುಖಂಡರು ಹೇಳಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ, ಈ ಹಿನ್ನೆಲೆಯಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಖುದ್ದು ಅಖಾಡಕ್ಕೆ ಇಳಿದು ರೈತರು ಮತ್ತು ದೇಶದ ಹಿತದೃಷ್ಟಿಯಿಂದ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.