ನ್ಯೂಸ್

ಹೋರಾಟ ಹಾದಿ ತಪ್ಪದಿರಲಿ, ಅಶಾಂತಿ ಸೃಷ್ಟಿಸದಿರಲಿ

ಸಿಎಎ ವಿರೋಧಿ ಮತ್ತು ಪರವಾದ ರ‍್ಯಾಲಿ, ಪ್ರತಿಭಟನೆಗಳು ತುಂಬ ಸುದ್ದಿ ಮಾಡಿದ್ದು ಗೊತ್ತಿರುವಂಥದ್ದೇ. ದೇಶದ ಹಲವು ಭಾಗಗಳಲ್ಲಿ ಈ ಬಗೆಯ ಪ್ರತಿಭಟನೆಗಳು ನಡೆದವು. ಹಲವೆಡೆ ಹಿಂಸಾಚಾರಕ್ಕೂ ತಿರುಗಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವುಂಟಾಗಿದ್ದು ಕಳವಳ ಮತ್ತು ಭೀತಿ ಮೂಡಿಸಿತು. ಪಶ್ಚಿಮ ಬಂಗಾಳ ಮತ್ತು ದೆಹಲಿ ಸೇರಿ ಹಲವೆಡೆ ಹಿಂಸೆ ನಿಯಂತ್ರಿಸಲು ಪೊಲೀಸರು ಹರಸಾಹಸವನ್ನೇ ಮಾಡಬೇಕಾಯಿತು. ಇತ್ತೀಚಿನ ಕೆಲ ದಿನಗಳಿಂದ ಹೋರಾಟದ ಕಾವು ಕುಗ್ಗುತ್ತಿದೆ. ಸಿಎಎ ಪರವಾದ ರ್ಯಾಲಿಗಳು ಮುಂಚೆಯಿಂದಲೂ ಶಾಂತಿಯಿಂದಲೇ ನಡೆದಿವೆ. ಸಿಎಎ ವಿರೋಧಿ ಪ್ರತಿಭಟನೆಗಳು ಕೂಡ ಕೆಲ ದಿನಗಳಿಂದ ಶಾಂತಿಯುತವಾಗಿ ಸಾಗುತ್ತಿವೆ. ಆದರೆ, ದೆಹಲಿಯ ಶಾಹಿನ್​ಬಾಗ್ ಮತ್ತು ಜಾಮಿಯಾದಲ್ಲಿ ನಡೆದಿರುವ ಬೆಳವಣಿಗೆ ಆತಂಕಕಾರಿ. ಪ್ರತಿಭಟನೆ ನೆಪದಲ್ಲಿ ಯಾರೋ ಒಬ್ಬ ವ್ಯಕ್ತಿ ದಿಢೀರನೆ ಬಂದು ಗುಂಡು ಹಾರಿಸಿದ್ದು, ಒಂದಷ್ಟು ಘೋಷಣೆ ಕೂಗಿದ್ದು, ಅಲ್ಲಿದ್ದ ಜನರಿಗೂ ಏನು ನಡೆಯುತ್ತಿದೆ ಎಂಬ ಗೊಂದಲ ಸೃಷ್ಟಿಸಿತು.

ಸಮೂಹಮಟ್ಟದಲ್ಲಿ ಪ್ರತಿಭಟನೆ, ಮೆರವಣಿಗೆ ಆಯೋಜಿಸುವಾಗ ಅದಕ್ಕೊಂದು ನಾಯಕತ್ವ, ಚೌಕಟ್ಟು, ಶಿಸ್ತು, ಮೇಲ್ವಿಚಾರಣೆ ಎಲ್ಲ ಇರುತ್ತದೆ. ಆದರೆ, ಹೀಗೆ ಏಕಾಏಕಿ ವ್ಯಕ್ತಿ ನುಗ್ಗಿ ದಾಳಿ ನಡೆಸಿದರೆ? ಇದರ ಹಿಂದೆ ಯಾವುದೋ ಷಡ್ಯಂತ್ರವಿದ್ದಂತೆ ಮೇಲ್ನೋಟಕ್ಕಂತೂ ತೋರುತ್ತದೆ. ಜಾಮಿಯಾ ಬಳಿ ಗುಂಡಿನ ದಾಳಿ ನಡೆದ ಮರುದಿನವೇ ಶಾಹಿನ್​ಬಾಗ್​ನಲ್ಲಿ ಇಂಥದ್ದೇ ಘಟನೆ ಮರುಕಳಿಸಿದೆ. ಹೀಗೆ ದಾಳಿ ಮಾಡುವ ಉದ್ದೇಶ ಏನು, ಇದರ ಹಿಂದೆ ಯಾರಿದ್ದಾರೆ, ಇಂಥ ವ್ಯಕ್ತಿಗಳ ಕೈಗೆ ಶಸ್ತ್ರಾಸ್ತ್ರಗಳು ಹೇಗೆ ಬಂದವು ಈ ಎಲ್ಲ ಸಂಗತಿಗಳ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ. ಅದೇನಿದ್ದರೂ, ಹೋರಾಟ ದಿಕ್ಕು ತಪ್ಪುತ್ತಿರುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಹೋರಾಟದ ಹೆಸರಲ್ಲಿ ಯಾರೋ ತಮ್ಮ ಬೇಳೆ ಬೇಯಿಸಿಕೊಳ್ಳಲು ಅಥವಾ ಆಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರಾ ಎಂಬ ಅನುಮಾನ ಬಲಗೊಂಡಿದೆ.

ಅಮೆರಿಕದಲ್ಲಿ ಶೂಟೌಟ್ ಪ್ರಕರಣಗಳು ಎಷ್ಟೊಂದು ಪ್ರಾಣಹಾನಿ ಸೃಷ್ಟಿಸುತ್ತಿವೆ ಮತ್ತು ಸಾಮಾಜಿಕವಾಗಿ ಆತಂಕವನ್ನು ಮೂಡಿಸಿವೆ ಎಂಬುದನ್ನು ಗಮನಿಸಿದ್ದೇವೆ. ಮೊದಲೆಲ್ಲ, ಅಮೆರಿಕದ ಶೂಟೌಟ್ ಪ್ರಕರಣಗಳು ಕೇಳಿ ಗೊತ್ತಿತ್ತು. ಆ ಕೆಟ್ಟ ಸಂಸ್ಕೃತಿ ಇಲ್ಲೂ ಕಾಲಿಟ್ಟಿದೆಯೇ? ಅಂಥ ದುಷ್ಕೃತ್ಯಗಳ ಬೀಜ ಮೊಳೆಯುವ ಮುನ್ನವೇ ಹೊಸಕಿ ಹಾಕಬೇಕು. ಅಮೆರಿಕದಲ್ಲಿ ಇಂಥ ದಾಳಿಗಳು ಹೆಚ್ಚುತ್ತಿರುವ ಪರಿಣಾಮ ಬಂದೂಕು ಲೈಸೆನ್ಸ್ ನಿಯಮ ಬಿಗಿಗೊಳಿಸಲಾಗುತ್ತಿದೆ. ಅಷ್ಟಕ್ಕೂ, ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ದೇಶದಲ್ಲಿ ಪ್ರತಿಭಟನೆ ಹೆಸರಲ್ಲಿ ಇಂಥ ಹಿಂಸೆ ಸೃಷ್ಟಿಗೆ ಅವಕಾಶ ಮಾಡಿಕೊಡಬಾರದು. ಆತಂಕದ ವಾತಾವರಣ ನೆಲೆಗೊಂಡರೆ ಅದನ್ನು ತಿಳಿಗೊಳಿಸಲು ದೀರ್ಘ ಸಮಯವೇ ಬೇಕಾಗುತ್ತದೆ. ಪ್ರತಿಭಟನೆಯ ದನಿಯನ್ನು ಶಾಂತಿಯುತವಾಗಿ ತಲುಪಿಸಬೇಕು. ಪ್ರಜಾಪ್ರಭುತ್ವ ಮಾರ್ಗದಲ್ಲಿ ಅಂಥ ಹೋರಾಟಕ್ಕೆ ಅವಕಾಶವಿದೆಯೇ ಹೊರತು ಹಿಂಸೆಗಲ್ಲ. ಹೀಗೆ ಅಚಾನಕ್ ಆಗಿ ಮತ್ತು ಒಬ್ಬಂಟಿಯಾಗಿ ದಾಳಿ ನಡೆಸುತ್ತಿರುವ ಪ್ರಕರಣಗಳ ಜಾಲವನ್ನು ಭೇದಿಸಬೇಕಿದೆ. ಹೋರಾಟಗಾರರು ಕೂಡ ಈ ನಿಟ್ಟಿನಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಿದೆ.