ಬೆಂಗಳೂರು : ಹೊಸ ವರ್ಷದ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಸಜ್ಜಾಗಿದ್ದ ಅಂತಾರಾಜ್ಯದ ನಾಲ್ವರು ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 1 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಜಪ್ತಿ ಮಾಡಿದ್ದಾರೆ.
ಹೆಬ್ಬಾಳ ಕೆಂಪಾಪುರದ ಎಂ. ತಿರುಪಾಲ್ ರೆಡ್ಡಿ, ತಮಿಳುನಾಡಿನ ಕೃಷ್ಣಗಿರಿಯ ಕಮಲೇಶನ್, ಸತೀಶ್ ಕುಮಾರ್ ಹಾಗೂ ಆರ್.ಟಿ. ನಗರದ ಏಜಾಜ್ ಪಾಷ ಬಂಧಿತರು. 5.6 ಕೆಜಿ ಹ್ಯಾಶಿಶ್, 3.3 ಕೆಜಿ ಗಾಂಜಾ, 1 ಕಾರು, 1 ಬೈಕ್ ಹಾಗೂ ನಗದು ಸೇರಿದಂತೆ 1.15 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆಂಧ್ರ ಮೂಲದ ಪೆಡ್ಲರ್ ತಿರುಪಾಲ್ ರೆಡ್ಡಿ, 6 ವರ್ಷಗಳಲ್ಲಿ ಮಾದಕ ವಸ್ತು ಮಾರಾಟ ಜಾಲದಲ್ಲಿ ಸಕ್ರಿಯವಾಗಿದ್ದ. ಕೆಲ ತಿಂಗಳ ಹಿಂದೆ ಆಂಧ್ರಪ್ರದೇಶದ ಪೊಲೀಸರು ಡ್ರಗ್ಸ್ ಕೇಸಿನಲ್ಲಿ ಬಂಧಿಸಿದ್ದರು. ಜೈಲಿನಲ್ಲಿ ರೆಡ್ಡಿಗೆ ಗೋವಾ ಮೂಲದ ಪೆಡ್ಲರ್‌ಗಳಾದ ಅನಿಲ್ ಮತ್ತು ಸುರೇಶ್ ಪರಿಚಯವಾಗಿತ್ತು. ಆನಂತರ ಪೆಡ್ಲರ್‌ಗಳು, ರೆಡ್ಡಿಗೆ ತಮಿಳುನಾಡಿನ ಕಮಲೇಶನ್ ಮತ್ತು ಆತನ ಸೋದರ ಕಾನಿಷ್ಕನ್ ಪರಿಚಯವಾಗಿದೆ. ಡ್ರಗ್ಸ್ ಜಾಲದ ಸಂಪರ್ಕ ಬೆಳೆದ ಬಳಿಕ ರೆಡ್ಡಿ, ಆಂಧ್ರದ ಪ್ರಕರಣದಲ್ಲಿ ಜಾಮೀನು ಪಡೆದು ಬೆಂಗಳೂರಿಗೆ ಆಗಮಿಸಿ ಮತ್ತೆ ದಂಧೆ ಶುರು ಮಾಡಿದ್ದ.
ವರ್ಷಾಚರಣೆ ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮೇಲೆ ಸಿಸಿಬಿ ಪೊಲೀಸರು ನಿಗಾವಹಿಸಿದ್ದರು. ಕೆಲ ದಿನಗಳ ಹಿಂದೆ ಬಾತ್ಮೀದಾರರ ಮೂಲಕ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಡ್ರಗ್ಸ್ ತಂದು ತಿರುಪಾಲ ರೆಡ್ಡಿ ಸಂಗ್ರಹಿಸಿರುವ ಮಾಹಿತಿ ಲಭಿಸಿತ್ತು.
ಕೆಂಪಾಪುರದ ವೆಂಕಟೇಗೌಡ ಲೇಔಟ್‌ನಲ್ಲಿ ರೆಡ್ಡಿ ಮನೆ ಮೇಲೆ ದಾಳಿ ನಡೆಸಿ ಡ್ರಗ್ಸ್ ಜಪ್ತಿಯಾಗಿದೆ. ನಂತರ ರೆಡ್ಡಿ ನೀಡಿದ ಮಾಹಿತಿ ಮೇರೆಗೆ ಇನ್ನುಳಿದ ಆರೋಪಿಗಳ ಬಂಧನವಾಗಿದೆ. ತಪ್ಪಿಸಿಕೊಂಡ ಪೆಡ್ಲರ್ ಕಾನಿಷ್ಕನ್ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಟೆಕ್, ಎಂಟೆಕ್ ಪದವೀಧರರು :
ಬಂಧಿತ ನಾಲ್ವರ ಪೈಕಿ ಕಮಲೇಶನ್ ಬಿಟೆಕ್ ಮತ್ತು ಸತೀಶ್ ಎಂಟೆಕ್ ಪದವೀಧರರಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಸುಲಭವಾಗಿ ಹಣ ಸಂಪಾದನೆ ದುರಾಸೆಗೆ ಬಿದ್ದು ಡ್ರಗ್ಸ್ ದಂಧೆ ಶುರು ಮಾಡಿದ್ದರು.