ನ್ಯೂಸ್

ಹೊಸ ಚಿಂತನೆ, ಸೃಜನಶೀಲತೆಗೆ ವೇದಿಕೆ ಕಲ್ಪಿಸಬೇಕು....

ಸಮಾಜದಲ್ಲಿ ಬದಲಾವಣೆ ತರಲು ಯುವಕರ ಸಕ್ರಿಯ ಸಹಭಾಗಿತ್ವ ಹೆಚ್ಚಬೇಕು. ಯುವಸಮೂಹದಲ್ಲಿ ಉತ್ಸಾಹ, ಇಚ್ಛಾಶಕ್ತಿಯೇನೋ ಇದೆ. ಆದರೆ, ಇದಕ್ಕೆ ಸರಿಯಾದ ದಿಕ್ಕು ಕಲ್ಪಿಸದಿದ್ದಲ್ಲಿ ಸುಧಾರಣೆ ಹೇಗೆ ಸಾಧ್ಯ? ಯುವದನಿಗೆ ಮನ್ನಣೆ ಸಿಕ್ಕಲ್ಲಿ ಹಲವು ಕ್ಷೇತ್ರಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಕಷ್ಟವೇನಲ್ಲ.
ಅದು ಬನ್ನೇರುಘಟ್ಟದ ಮಾನೆ ಫಾಮ್ರ್ ಬಳಿಯ ಪ್ರದೇಶ. ಇದೇ ಅಕ್ಟೋಬರ್ 3ರಂದು ಅಲ್ಲಿ ಅಪೂರ್ವವಾದ ದೃಶ್ಯ ಮೇಳೈಸಿತ್ತು. ನೂರಾರು ಜನರ ಬಾಯಲ್ಲಿ ದೇಶವನ್ನು ಆಳಿದ ಸಾಮ್ರಾಜ್ಯಗಳ ಹೆಸರುಗಳು ಅನುರಣಿಸುತ್ತಿದ್ದವು. ಮೌರ್ಯರು ಮುಂದೆ ಇದ್ದಾರೆ, ಕದಂಬರು ವೇಗ ಪಡೆಯುತ್ತಿದ್ದಾರೆ, ರಾಷ್ಟ್ರಕೂಟರು ಕೆಲಸ ಮುಗಿಸಿಯೇ ಬಿಟ್ಟರು... ಎಂಬ ಮಾತುಗಳು ಸಂತಸದ ದನಿಯಲ್ಲಿ ಕೇಳಿಬರುತ್ತಿದ್ದವು.

ಇವು 301ನೇ ಹಸಿರು ಭಾನುವಾರ ಕಾರ್ಯಕ್ರಮದ ವೇಳೆ ಕಂಡುಬಂದ ದೃಶ್ಯಗಳು. ನೋಂದಣಿ ಮಾಡಿಕೊಂಡ ಒಟ್ಟು 600 ಜನರಲ್ಲಿ 460 ಜನರು ಕಾಲೇಜ್ ವಿದ್ಯಾರ್ಥಿಗಳೇ ಇದ್ದರು. ಇವರೆಲ್ಲ ನೋಂದಣಿ ಶುಲ್ಕ ಪಾವತಿಸಿ, ಸ್ವಂತ ವಾಹನದಲ್ಲಿ ಬೆಂಗಳೂರಿನಿಂದ ಇಪ್ಪತ್ತು ಕಿ.ಮೀ. ದೂರದಲ್ಲಿರುವ ಬನ್ನೇರುಘಟ್ಟ ಪ್ರದೇಶಕ್ಕೆ ಬಂದು ಗಿಡಗಳನ್ನು ನೆಟ್ಟರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಗಿಡ ನೆಟ್ಟರೂ, ಅವರ ಉತ್ಸಾಹ ಒಂದಿಷ್ಟೂ ಕುಂದಿರಲಿಲ್ಲ. ಬದಲಾಗಿ, ‘ಇನ್ನೊಂದಿಷ್ಟು ಗಿಡಗಳಿದ್ದರೆ ಕೊಡಿ, ನೆಡೋಣ’ ಎನ್ನುತ್ತಿದ್ದರು. ಅಂದಹಾಗೆ, ಈ 600 ಜನರನ್ನು ಹದಿನೈದು ತಂಡಗಳನ್ನಾಗಿ ವಿಭಾಗಿಸಲಾಗಿತ್ತು. ಪ್ರತೀ ತಂಡಕ್ಕೂ ಒಂದೊಂದು ಸಾಮ್ರಾಜ್ಯದ ಹೆಸರು, ವಿವರ ಇರುವ ಫಲಕ ನೀಡಲಾಗಿತ್ತು. ಮೌರ್ಯ, ಗುಪ್ತ, ಕದಂಬ, ವರ್ಧನ, ಚಾಲುಕ್ಯ, ರಾಷ್ಟ್ರಕೂಟ, ಶಾತವಾಹನರು, ಪಾಂಡ್ಯ, ಪಲ್ಲವ, ಚೋಳ, ಹೊಯ್ಸಳ, ಗಂಗ, ವಿಜಯನಗರ, ಮರಾಠಾ... ಹೀಗೆ ಈ ತಂಡಗಳಿಗೆ ಗಿಡ ನೆಡುವ ಪ್ರದೇಶ ಮತ್ತು ಗಡಿಯನ್ನೂ ಗುರುತಿಸಲಾಗಿತ್ತು. ವಿದ್ಯಾರ್ಥಿಗಳು ಗಿಡಗಳನ್ನು ಕಾಳಜಿ, ಉತ್ಸಾಹದಿಂದ ನೆಟ್ಟರಲ್ಲದೆ, ತಾವು ಈ ಸಾಮ್ರಾಜ್ಯಗಳ ಭಾಗ ಆಗಿರುವಂತೆ ಸಂಭ್ರಮ ಪಟ್ಟರು. ಅಂದರೆ, ಪರಿಸರದ ಬಗ್ಗೆ ಮಾತ್ರವಲ್ಲ ಭಾರತದ ಇತಿಹಾಸದ ಬಗ್ಗೆಯೂ ತಿಳಿದುಕೊಳ್ಳಲು ಅವರು ಉತ್ಸುಕರಾಗಿದ್ದು ಕಂಡುಬಂತು.

ಅದಮ್ಯ ಚೇತನ ಸಂಸ್ಥೆ 2016 ಜನವರಿ 3ರಂದು ಆರಂಭಿಸಿದ ಹಸಿರು ಭಾನುವಾರ ಕಾರ್ಯಕ್ರಮ ಈಗಾಗಲೇ 300 ವಾರಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ದೀರ್ಘ ಪಯಣದಲ್ಲಿ ನಮಗೆ ಇಂಥ ಹಲವು ರೋಚಕ, ಪ್ರೇರಣಾದಾಯಿ ಅನುಭವಗಳು ಆಗಿವೆ.  ಯುವಸಮೂಹವನ್ನು ರಚನಾತ್ಮಕ ಚಟುವಟಿಕೆಯಲ್ಲಿ ಸರಿಯಾಗಿ ತೊಡಗಿಸಿದರೆ, ಅವರು ಚೆನ್ನಾಗಿ ಕಾರ್ಯನಿರ್ವಹಿಸುವುದು ಮಾತ್ರವಲ್ಲ, ‘ಚೇಂಜ್​ವೆುೕಕರ್ಸ್’ ಸಹ ಆಗಬಲ್ಲರು. ಯುವಸಮೂಹಕ್ಕೆ ಪರಿಸರ, ಸಮಾಜದ ಬಗ್ಗೆ ಕಾಳಜಿ ಇಲ್ಲ ಎಂದು ದೂರುವುದಕ್ಕಿಂತ, ಅವರ ಸೃಜನಶೀಲತೆಗೆ, ಚಿಂತನೆಗಳಿಗೆ ವೇದಿಕೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಅದಮ್ಯ ಚೇತನ ಸಂಸ್ಥೆ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಸಂಸ್ಥೆಗೆ ಭೇಟಿ ನೀಡಿ ಇಲ್ಲಿನ ಹಸಿರು ಅಡುಗೆಮನೆ, ಕಸವನ್ನು ರಸವಾಗಿಸುವ ಚಟುವಟಿಕೆಗಳು, ಹಸಿರು ಭಾನುವಾರ ಇದೆಲ್ಲವನ್ನು ನೋಡುವ ಯುವಕರು ಸಹಜವಾಗಿಯೇ ನಮ್ಮೊಂದಿಗೆ ಕೈಜೋಡಿಸುತ್ತಿದ್ದಾರೆ.

ಯುವಕರ ಸಹಭಾಗಿತ್ವ ಹೆಚ್ಚಿಸುವಲ್ಲಿ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರ ಪಾತ್ರ ಪ್ರಮುಖವಾಗಿದೆ. ಅದಮ್ಯ ಚೇತನದ ಪ್ರಮುಖ ಸೇವಾಕರ್ತರ ಸಭೆಯನ್ನು ತಿಂಗಳಿಗೊಮ್ಮೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಅನಂತಕುಮಾರ್ ಸಭಿಕರ ಸಾಲಿನಲ್ಲೇ ಕುಳಿತು ಸೇವಾಕರ್ತರ ಅನಿಸಿಕೆಗಳನ್ನು, ಅನುಭವಗಳನ್ನು ಆಲಿಸುತ್ತಿದ್ದರು. ಹೀಗೆ ಒಂದು ಸಭೆಯಲ್ಲಿ ಅವರು ‘ನಮ್ಮ ಸೇವಾಕರ್ತರ ಸರಾಸರಿ ವಯಸ್ಸು ಎಷ್ಟು?’ ಎಂದು ಪ್ರಶ್ನಿಸಿದರು. ಲೆಕ್ಕಹಾಕಿ ನೋಡಿದರೆ ಸೇವಾಕರ್ತರ ಸರಾಸರಿ ವಯಸ್ಸು 55 ಆಗಿತ್ತು. ಇದನ್ನು ತಗ್ಗಿಸಲು ಅಂದರೆ 35-40ಕ್ಕೆ ತರಲು, ಆ ನಿಟ್ಟಿನಲ್ಲಿ ಯುವಕರ ಸಹಭಾಗಿತ್ವ ಹೆಚ್ಚಿಸಲು ಅನಂತಕುಮಾರ್ ಸಲಹೆ ನೀಡಿದರು. ಮುಂದೆ, ಆ ದಿಕ್ಕಿನಲ್ಲಿ ಹಲವು ಪ್ರಯತ್ನಗಳಾದವು. ಪರಿಣಾಮ, ಯುವಕರ ಸಹಭಾಗಿತ್ವ ಗಮನಾರ್ಹವಾಗಿ ಏರಿಕೆ ಕಂಡಿದೆ. ಕಳೆದ ಮೂರು ವರ್ಷಗಳಿಂದ ‘ಯುವಚೇತನ’ ತಂಡ ಪರಿಸರ ಜಾಗೃತಿಗೆ ಸಂಬಂಧಿಸಿದ ಹಲವು ಕೆಲಸಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡಿದೆ. ಅಂದರೆ, ನಿಜವಾಗಿಯೂ ಯುವಸಮೂಹಕ್ಕೆ ಏನು ಬೇಕು, ಅವರನ್ನು ಸಕ್ರಿಯವಾಗಿ ತೊಡಗಿಸುವುದು ಹೇಗೆ ಅಂತ ಅರ್ಥಮಾಡಿಕೊಂಡು, ಆ ನಿಟ್ಟಿನಲ್ಲಿ ಕೆಲಸ ಮಾಡಿದರೆ ಒಳ್ಳೆಯ ಫಲಿತಾಂಶ ಸಿಕ್ಕೇ ಸಿಗುತ್ತದೆ. ಯುವಸಮೂಹಕ್ಕಾಗಿ ಏನೇನು ಆಗಬೇಕಿದೆ ಎಂಬುದೂ ಈಗಿನ ಜ್ವಲಂತ ಪ್ರಶ್ನೆ. ಕರ್ನಾಟಕ ಸರ್ಕಾರ ಹೊಸ ಯುವನೀತಿಯನ್ನು ರೂಪಿಸಲು ಹೊರಟಿದೆ. ಈ ಯುವನೀತಿ ಸಮಿತಿಯ ಸದಸ್ಯೆಯಾಗಿರುವ ಪುತ್ರಿ ಐಶ್ವರ್ಯಾಳೊಂದಿಗೆ ಚರ್ಚೆ ಮಾಡುವಾಗ ಹಲವು ಹೊಳಹುಗಳು ಬಂದವು. ಅವುಗಳ ಪೈಕಿ ಕೆಲವನ್ನು ಇಲ್ಲಿ ರ್ಚಚಿಸೋಣ.

ಆಹಾರ ಮತ್ತು ಆರೋಗ್ಯ: ನಮ್ಮಲ್ಲಿ ಹತ್ತನೇ ತರಗತಿಯವರೆಗೆ ಮಕ್ಕಳಿಗೆ ಬಿಸಿಯೂಟ ಒದಗಿಸಲಾಗುತ್ತದೆ. ಆ ಮುಖೇನ ಅವರಿಗೆ ಎಷ್ಟು ಪೌಷ್ಟಿಕಾಂಶ ಸಿಗಬೇಕು, ಅದಕ್ಕೆ ಪೂರಕವಾಗಿ ಯಾವೆಲ್ಲ ಆಹಾರ ನೀಡಬೇಕು ಎಂದು ಕಾಳಜಿ ವಹಿಸಲಾಗುತ್ತದೆ ಎಂಬುದು ಸರಿಯೇ. ಆದರೆ, ಕಾಲೇಜ್ ಪ್ರವೇಶಿಸಿದ ಮೇಲೆ ಅವರ ಆಹಾರದ ಬಗ್ಗೆ ಪಾಲಕರಾಗಲಿ, ಸರ್ಕಾರವಾಗಲಿ ಗಮನ ವಹಿಸುವುದಿಲ್ಲ. ಪೌಷ್ಟಿಕಾಂಶ ಆಹಾರ ತ್ಯಜಿಸಿ ಜಂಕ್​ಫುಡ್​ಗೆ ಶರಣಾಗುವ ಯುವಕರು ಬಹುಬೇಗ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಆರೋಗ್ಯಯುತ ಮತ್ತು ಪೌಷ್ಟಿಕ ಆಹಾರ ಸೇವನೆ ಬಗ್ಗೆ ಅರಿವು ಮೂಡಿಸುವ ಜತೆಗೆ ದೈಹಿಕ ವ್ಯಾಯಾಮದ ಬಗ್ಗೆಯೂ ತಿಳಿಸಿಕೊಡಬೇಕಿದೆ. ಆ ಮುಖೇನ ಆರೋಗ್ಯ ಕಾಪಾಡಿಕೊಳ್ಳುವುದು ಯುವಕರ ಆದ್ಯತೆಯಾಗಬೇಕು. ಅದಕ್ಕಾಗಿ ದಿನಚರಿ, ಒಟ್ಟಾರೆ ಜೀವನಶೈಲಿಯನ್ನು ಉತ್ತಮ ಪಡಿಸಿಕೊಳ್ಳಬೇಕು. ಯುವಕರೇ ಅನಾರೋಗ್ಯಕ್ಕೀಡಾದರೆ ಶಕ್ತಿಶಾಲಿ ಸಮಾಜದ ನಿರ್ಮಾಣ ಹೇಗೆ ಸಾಧ್ಯ?

ಸಮಾಜ-ದೇಶದ ಬಗ್ಗೆ ಸ್ಪಷ್ಟ ಅರಿವು: ದೇಶ, ಪರಿಸರದ ಕುರಿತಂತೆ ಯುವಸಮೂಹದಲ್ಲಿ ಸ್ಪಷ್ಟ ಅರಿವು ಇಲ್ಲ. ಇದಕ್ಕಾಗಿ ಅವರನ್ನು ದೂಷಿಸಿ ಪ್ರಯೋಜನವಿಲ್ಲ. ಏಕೆಂದರೆ, ಹಿರಿಯರು ಏನನ್ನು ಹೇಳಿಕೊಟ್ಟಿದ್ದಾರೋ, ನಮ್ಮ ಶಿಕ್ಷಣ ವ್ಯವಸ್ಥೆ ಎಷ್ಟು ಕಲಿಸಿಕೊಟ್ಟಿದೆಯೋ ಅಷ್ಟನ್ನೇ ಅವರು ಗ್ರಹಿಸಿದ್ದಾರೆ. ನೈಜ ಇತಿಹಾಸ ತಿಳಿಸುವ ಕೆಲಸವೂ ಆಗಿಲ್ಲ. ಇತಿಹಾಸದ ಸಂಗತಿಗಳಿಗೆ ಮಸಾಲೆ ತುಂಬಿಸಿ ತೆರೆಯಲ್ಲಿ ಅಬ್ಬರಿಸುವ ಸಿನಿಮಾಗಳು, ಪೂರ್ಣ ಮಾಹಿತಿ ಇಲ್ಲದ ಪಠ್ಯಗಳು ಇವರನ್ನು ದಾರಿತಪ್ಪಿಸುತ್ತಿವೆ. ಎಲ್ಲಿಯೂ ಈ ಸಂಗತಿಗಳು ಸಮಗ್ರವಾಗಿ ಸಿಗುವ ವ್ಯವಸ್ಥೆ ಇಲ್ಲ. ದೇಶಕ್ಕೆ ಸಂಬಂಧಿಸಿದ ಸ್ಪಷ್ಟ ಅರಿವನ್ನು ಪ್ರಾಥಮಿಕ ಶಾಲಾ ಹಂತದಿಂದಲೇ ಮೂಡಿಸುವ ಪ್ರಯತ್ನ ಆರಂಭಿಸಿದರೆ ಒಂದಿಷ್ಟು ಬದಲಾವಣೆ ಕಾಣಬಹುದೇನೋ. ಇಲ್ಲದಿದ್ದಲ್ಲಿ ಅವರು ಗ್ರಹಿಸಿದ್ದಷ್ಟೇ ಸತ್ಯ ಎಂದುಕೊಂಡು ದೇಶ/ಸಮಾಜದ ಕುರಿತಂತೆ ಸಿನಿಕತೆ ತಳೆಯುವ ಅಪಾಯವೂ ಇದೆ. ಹಿರಿಯರು ಪರಿಸರವನ್ನು ಹಾಳು ಮಾಡಿದ್ದಾರೆ, ಇದನ್ನು ನಾವು ಸರಿ ಮಾಡಬೇಕು, ಪ್ರಕೃತಿಯನ್ನು ಪೋಷಿಸಬೇಕು ಎಂಬ ಇಚ್ಛೆ ಯುವಸಮೂಹಕ್ಕಿದೆ. ಇದು ಅವರು ಸವಾಲಾಗಿ ಸ್ವೀಕರಿಸಿ ಮಾಡುತ್ತಾರೆ. ಅವರಿಗೆ ಸರಿಯಾದ ದಾರಿ ತೋರಿಸುವ ಕೆಲಸವಾಗಬೇಕಷ್ಟೇ.

ಲಿಂಗ ಗೌರವ ಮತ್ತು ಸಂವೇದನೆ: ನಮ್ಮ ದೇಶದಲ್ಲಿ ಹಳ್ಳಿಯಾಗಿರಲಿ, ನಗರವಾಗಿರಲಿ ಬಹುತೇಕ ಹೆಣ್ಣುಮಕ್ಕಳು ಒಂದಿಲ್ಲ ಒಂದು ಹಂತದಲ್ಲಿ, ಒಂದಿಲ್ಲ ಒಂದು ಬಗೆಯಲ್ಲಿ ಕಿರುಕುಳವನ್ನು ಅನುಭವಿಸಿರುತ್ತಾರೆ. ಕುಟುಂಬ ಸದಸ್ಯರಿಂದ, ಸಹಪಾಠಿಗಳಿಂದ, ಉದ್ಯೋಗದ ಸ್ಥಳದಲ್ಲಿ, ಸಹಪ್ರಯಾಣಿಕರಿಂದ ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಕಿರುಕುಳಗಳನ್ನು ಎದುರಿಸುವುದುಂಟು. ಸ್ವಭಾವತಃ ಗಟ್ಟಿಯಾಗಿರುವವರು ಇವುಗಳಿಗೆ ತಮ್ಮದೇ ಶೈಲಿಯಲ್ಲಿ ಸಮರ್ಥ ಉತ್ತರ ಕೊಡುತ್ತಾರೆ. ಬಹಳಷ್ಟು ಮಂದಿ ಕಿರುಕುಳ ಸಹಿಸಿಕೊಂಡು, ಮುಂದೆ ಸಾಗುತ್ತಾರೆ. ಈ ಅಭದ್ರತೆಯ ಭಾವನೆ ಆತ್ಮವಿಶ್ವಾಸವನ್ನೇ ಕಸಿದುಕೊಳ್ಳುತ್ತದೆ ಎಂದು ನಾವು ಯೋಚಿಸಿದ್ದೇವೆಯೇ? ಇದಕ್ಕೆಲ್ಲ ಪ್ರಮುಖ ಕಾರಣ ಲಿಂಗ ಸಂವೇದನೆಯ ಕೊರತೆ. ಈ ಬಗೆಯ ಕಿರುಕುಳಗಳನ್ನು ತಡೆಯದಿದ್ದಲ್ಲಿ ಸ್ವಸ್ಥ ಸಮಾಜದ ಕನಸು ಈಡೇರಲು ಹೇಗೆ ಸಾಧ್ಯ? ಮಹಿಳೆಯರ ಮೇಲೆ ನಡೆಯುವ ಕಿರುಕುಳಗಳನ್ನು ತಡೆಯಲು ಕಠಿಣವಾದ ನೀತಿಯೇ ಜಾರಿಗೆ ಬರಬೇಕು. ಅಲ್ಲದೆ, ಸಂತ್ರಸ್ತೆ ಧೈರ್ಯವಾಗಿ ದೂರು ನೀಡುವಂಥ ವ್ಯವಸ್ಥೆ ರೂಪುಗೊಳ್ಳಬೇಕು.

ಋತುಸ್ರಾವದ ದಿನಗಳಲ್ಲಿ ಬಾಲಕಿಯರಿಗೆ, ಮಹಿಳಾ ಉದ್ಯೋಗಿಗಳಿಗೆ ಕೆಲ ರಿಯಾಯ್ತಿ ನೀಡಬೇಕು. ಆ ಮೂರು ದಿನಗಳ ಅವಧಿಯಲ್ಲಿ ರಜೆ ಮಂಜೂರಾತಿ ಸೇರಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಋತುಸ್ರಾವದ ದಿನಗಳಲ್ಲಿ ಹೆಣ್ಣಿಗೆ ದೈಹಿಕ, ಮಾನಸಿಕ ವಿಶ್ರಾಂತಿ ಬೇಕು. ಆದರೆ, ‘ನಾವು ಎಲ್ಲದರಲ್ಲೂ ಸಮಾನರು’ ಎಂಬ ಹುಚ್ಚುಸ್ಪರ್ಧೆಯಲ್ಲಿ ಕೆಲವರು ಆರೋಗ್ಯವನ್ನು ಕಡೆಗಣಿಸಿ, ಅಪಾಯ ಆಹ್ವಾನಿಸಿಕೊಳ್ಳುತ್ತಾರೆ. ಋತುಸ್ರಾವದ ಅವಧಿಯ ಕಷ್ಟಗಳನ್ನು ಸಮಾಜ ಸಂವೇದನೆಯಿಂದ ಕಾಣಬೇಕು.

ತಾಯ್ತನ ಎಂಬುದು ಹೆಣ್ಣಿಗೆ ಖುಷಿ ನೀಡುವ ವಿಚಾರವೇ. ಅದು ದೊಡ್ಡ ಜವಾಬ್ದಾರಿಯೂ ಹೌದು. ಮಗುವಿಗೆ ಜನ್ಮ ನೀಡಿದ ಬಳಿಕ ಅದರ ಲಾಲನೆ-ಪೋಷಣೆಗೆ ಪೂರ್ತಿ ಗಮನ ನೀಡಬೇಕಾದ ತಾಯಿ ಮೊದಲ ಒಂದೆರಡು ವರ್ಷಗಳಾದರೂ ಉದ್ಯೋಗದಿಂದ ದೂರ ಇರಬೇಕಾಗುತ್ತದೆ. ಈ ಅವಧಿಯಲ್ಲಿ ಅವಳು ಅವಕಾಶದಿಂದ ವಂಚಿತಳಾಗುತ್ತಾಳೆ. ಉದ್ಯೋಗಕ್ಕೆ ಸೇರಿದ ಮೇಲೂ ಸಣ್ಣ ಮಗುವಿನ ತಾಯಿ ಎಂಬ ಕಾರಣಕ್ಕೆ ಒಳ್ಳೆಯ ಅವಕಾಶಗಳಾಗಲಿ, ಬಡ್ತಿಯಾಗಲಿ ಸಿಗುವುದಿಲ್ಲ. ಅರ್ಹತೆ, ಪ್ರತಿಭೆ, ಸೃಜನಶೀಲತೆ ಎಲ್ಲ ಇದ್ದರೂ ಮಹಿಳೆ ಅವಕಾಶದಿಂದ ಏಕೆ ವಂಚಿತವಾಗಬೇಕು? ಈ ನಿಟ್ಟಿನಲ್ಲಿ ಸರ್ಕಾರಿ ಮತ್ತು ಖಾಸಗಿ ರಂಗದ ಉದ್ಯೋಗದಾತರು ಗಮನ ಹರಿಸಬೇಕು. ಹೆರಿಗೆ ರಜೆ ಮುಗಿಸಿ ಬರುವ ಉದ್ಯೋಗಿಗೆ ಹೊಸ ಕೌಶಲ ಕಲಿಸುವ, ಸೂಕ್ತ ಮಾಹಿತಿ ನೀಡುವ ಕೆಲಸವಾಗಬೇಕು. ಮುಂಬರುವ ಯುವನೀತಿ ಈ ಅಂಶಗಳತ್ತ ಗಮನ ಹರಿಸಿದರೆ ಪ್ರಮುಖ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಸಾಗಬಹುದೇನೋ.

ಒಟ್ಟಾರೆ, ಯುವಸಮೂಹವನ್ನು ಸುಖಾಸುಮ್ಮನೇ ದೂರುವುದನ್ನು ನಿಲ್ಲಿಸಿ, ಅವರ ನೇತೃತ್ವಕ್ಕೆ ವೇದಿಕೆ ಸಜ್ಜುಗೊಳಿಸಬೇಕು. ಅವರಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸದೆ ಅನುಭವ ದಕ್ಕುವುದಾದರೂ ಹೇಗೆ? ಯುವಕರ ಬಳಿ ಪ್ರತಿಭೆ, ಹೊಸ ಚಿಂತನೆಗಳಿವೆ. ಅದನ್ನು ಅನುಷ್ಠಾನಕ್ಕೆ ತರಲು ಅನುವು ಮಾಡಿಕೊಡಬೇಕು. ಅಂದಾಗಲೇ ಯುವಶಕ್ತಿ ಎಂಬುದು ನಿಜವಾದ ಅರ್ಥದಲ್ಲಿ ರಾಷ್ಟ್ರನಿರ್ವಣದ ಶಕ್ತಿಯಾಗಬಲ್ಲದು. ಇಲ್ಲವಾದಲ್ಲಿ, ಈ ಶಕ್ತಿಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ ಎಂಬ ಎಚ್ಚರವೂ ಅವಶ್ಯ. ಆದ್ದರಿಂದ, ಯುವಶಕ್ತಿಯನ್ನು ರಚನಾತ್ಮಕ ದಿಕ್ಕಿನಲ್ಲಿ ಕರೆದುಕೊಂಡು ಹೋಗುವ ಹೊಣೆಗಾರಿಕೆ ಸಮಾಜದ ಮೇಲಿದ್ದು, ಅದಕ್ಕೆ ಪೂರಕವಾಗುವಂಥ ವಾತಾವರಣವನ್ನೂ ರೂಪಿಸಬೇಕಿದೆ.

(ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)