ಕೆ.ಎಂ.ದೊಡ್ಡಿ: ವಿದ್ಯಾರ್ಥಿಗಳು ಹೊಸ ಅವಿಷ್ಕಾರಗಳತ್ತ ಚಿತ್ತ ಹರಿಸುವ ಮೂಲಕ ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ, ಭಾರತೀ ಎಜುಕೇಷನ್ ಟ್ರಸ್ಟ್ ಚೇರ‌್ಮನ್ ಮಧು ಜಿ.ಮಾದೇಗೌಡ ತಿಳಿಸಿದರು.
ಇಲ್ಲಿನ ಜಿ.ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಿಂದ ವತಿಯಿಂದ ರಾಜ್ಯ ಮಟ್ಟದ ಯೋಜನಾ ವಸ್ತು ಪ್ರದರ್ಶನ (ಪ್ರಾಜಕ್ಟ್ ಎಕ್ಸ್‌ಫೋ) ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.
ಸತತ ಅಭ್ಯಾಸದಲ್ಲಿ ತಾಂತ್ರಿಕ ವಿದ್ಯಾರ್ಥಿಗಳು ತೊಡಗಿಕೊಂಡು ಹೊಸ ಸಂಶೋಧನೆಗಳನ್ನು ಮಾಡಲು ಮುಂದಾಗಬೇಕು. ಸಮಾಜಕ್ಕೆ ಹೊಸ ವೈಜ್ಞಾನಿಕ ಕೊಡುಗೆಗೆಳು ಅಗತ್ಯವಿದ್ದು, ಅದರಲ್ಲೂ ಕೃಷಿಗೆ ನೆರವಾಗುವಂತಹ ಸಂಶೋಧನೆಗಳ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಬೇಕು ಎಂದು ಕಿವಿಮಾತು ಹೇಳಿದರು.
ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳಿಗೆ ಇಂತಹ ವಸ್ತುಪ್ರದರ್ಶನಗಳು ಕೌಶಲಾಭಿವೃದ್ಧಿ ವರ್ಧನೆಗೆ ಪೂರಕವಾಗಿರುತ್ತವೆ. ತಾಂತ್ರಿಕ ಶಿಕ್ಷಣದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಸಹಾಯಕವಾಗಲಿದ್ದು, ಅದಕ್ಕೆ ಬೇಕಾದ ಸೌಲಭ್ಯಗಳನ್ನು ಸಂಸ್ಥೆ ನೀಡಲು ಸಿದ್ಧವಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ. ನಂಜೇಗೌಡ ಮಾತನಾಡಿ, ವಿದ್ಯಾರ್ಥಿಗಳ ಭೌದ್ಧಿಕ ಬೆಳವಣಿಗೆಗೆ ವಸ್ತು ಪ್ರದರ್ಶನಗಳು ಸಹಕಾರಿಯಾಗಲಿದ್ದು, ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಸಿದ್ಧ್ದಪಡಿಸಲು ಸಂಶೋಧನೆ ನಡೆಸಿ ರೈತರಿಗೆ ನೆರವಾಗಿ ಎಂದರು.
ಮೈಸೂರಿನ ವಿದ್ಯಾವರ್ಧಕ, ಎಟಿಎಂಇ, ವಿದ್ಯಾವಿಕಾಸ, ಚಿಕ್ಕಮಗಳೂರು ಎಐಟಿ, ಬೆಂಗಳೂರು ಆಕ್ಸ್‌ಫರ್ಡ್ ಸೇರಿದಂತೆ 35 ಕಾಲೇಜಿನ ವಿದ್ಯಾರ್ಥಿಗಳ ತಂಡ ಪಾಲ್ಗೊಂಡಿದ್ದವು. ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಪ್ರದರ್ಶನಕ್ಕೂ ಅವಕಾಶ ಮಾಡಿಕೊಡಲಾಗಿತ್ತು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಎಂಐಟಿ ಪ್ರಾಂಶುಪಾಲ ಡಾ.ವಿ.ಆರ್.ಚಂದನ್, ವಿವಿಧ ವಿಭಾಗದ ಮುಖ್ಯಸ್ಥರಾದ ಟಿ.ಸುನೀತಾ, ಡಾ.ನೂತನ್, ಉಪನ್ಯಾಸಕರಾದ ಚೇತನ್, ರವಿಕುಮಾರ್, ಸ್ವರೂಪ್ ಸೇರಿದಂತೆ ಹಲವರಿದ್ದರು.