ಹೊಳೆಹೊನ್ನೂರು: ಸುಮಾರು 7 ಕೋಟಿ ರೂ. ವೆಚ್ಚದಲ್ಲಿ 2007ರಲ್ಲಿ ಆರಂಭವಾದ ಏತ ನೀರಾವರಿ ಯೋಜನೆ 2010ಕ್ಕೆ ಮುಕ್ತಾಯವಾಗಬೇಕಿತ್ತು. 18 ವರ್ಷ ಕಳೆದರೂ ಕೆರೆಗಳಿಗೆ ಸಮರ್ಪಕವಾಗಿ ನೀರು ತಲುಪಿಸಲು ಸಾಧ್ಯವಾಗಿಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ತಿಳಿಸಿದರು.
ಯೋಜನೆಯ ಇಂಜಿನಿಯರ್ ತಂಡದೊಂದಿಗೆ ಶನಿವಾರ ಹೊಳಲೂರು ಏತ ನೀರಾವರಿ ಯೋಜನೆ ಸ್ಥಳಕ್ಕೆ ಭೆೇಟಿ ನೀಡಿ ಮಾತನಾಡಿದರು. ಯೋಜನೆಯ ತಾಂತ್ರಿಕ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲವಾಗುವಂತೆ ಕೆರೆಗಳಿಗೆ ನೀರು ಬಿಡಲು ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು. ಮುಂದಿನ ಮಳೆಗಾಲದೊಳಗೆ ಯೋಜನೆ ಉದ್ದೇಶದಂತೆ ಎಲ್ಲ ಕೆರೆಗಳಿಗೂ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.
ಹೊಳಲೂರು ಏತ ನೀರಾವರಿಯಲ್ಲಿ ಬಹುದೊಡ್ಡ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. 7 ಕೋಟಿ ರೂ.ನಲ್ಲಿ ನಡೆಯಬೇಕಾದ ಕಾಮಗಾರಿಯನ್ನು 21.5 ಕೋಟಿ ರೂ. ವ್ಯಯಿಸಿ 3 ಬಾರಿ ಮಾಡಿದರೂ ಯಶಸ್ವಿಯಾಗಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದರು.
ಹೊಳಲೂರಿನ ಪಂಪ್ ಹೌಸ್‌ನಲ್ಲಿನ ಮೂರು ಪಂಪ್‌ಗಳಲ್ಲಿ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಏಕ ಕಾಲದಲ್ಲಿ ಎರಡು ಮೋಟಾರ್‌ಗಳನ್ನು ಚಾಲನೆ ಮಾಡಿ ಲೈನ್‌ಗಳಲ್ಲಿ ನೀರು ತೆಗೆದುಕೊಂಡು ಹೋಗಬೇಕು. ಹರಮಘಟ್ಟದಲ್ಲಿ ಒಂದು ಮೋಟಾರ್ ನೀರು ಸಮರ್ಪಕವಾಗಿ ಕೆರೆಗಳಿಗೆ ತಲುಪದೆ ಪೋಲಾಗುತ್ತಿದೆ. ಈ ಭಾಗದ ರೈತರ ಬಹು ವರ್ಷದ ಬೇಡಿಕೆಯಂತೆ ಏತ ನೀರಾವರಿ ಮಂಜೂರಾಗಿದೆ. ಆದರೆ ಕಾಮಗಾರಿ ವೈಫಲ್ಯದಿಂದ ಫಲಪ್ರದವಾಗುತ್ತಿಲ್ಲ ಎಂದರು.
ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಆಯನೂರು ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು, ಸತೀಶ್ ಶೆಟ್ಟಿ, ಶ್ರೀನಿವಾಸ್ ಕರಿಯಣ್ಣ, ಸೋಮಿನಕೊಪ್ಪ ಕಾಂತರಾಜ್, ಎಚ್.ಎನ್. ನಾಗರಾಜ್, ರುದ್ರೇಶಪ್ಪ, ಎಂ.ಎಚ್.ಹಾಲೇಶ್, ಶರತ್, ಉಮೇಶ್ ಇತರರಿದ್ದರು.