ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಹೊರಟ್ಟಿಯ ಮಂಜುನಾಥ್ ಎಂಬುವರ ಕಾಫಿ ತೋಟದಲ್ಲಿ ಕಾಡಾನೆ ಹಿಂಡು ಗಿಡಗಳನ್ನು ಧ್ವಂಸಗೊಳಿಸಿರುವುದು. 
ನ್ಯೂಸ್

ಹೊರಟ್ಟಿಯಲ್ಲಿ 30 ಕಾಡಾನೆಗಳ ಸಂಚಾರ

ಮೂಡಿಗೆರೆ: ತಾಲೂಕಿನ ಮಾಕೋನಹಳ್ಳಿ ಹೊರಟ್ಟಿ ಎಂಬಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಮಂಜುನಾಥ್ ಎಂಬುವರ ಕಾಫಿ ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡಿವೆ.

ಮಂಗಳವಾರ ನಸುಕಿನಲ್ಲಿ ಏಳೆಂಟು ಮರಿಯಾನೆಗಳು ಸೇರಿ 30 ರಿಂದ 35 ಕಾಡಾನೆಗಳ ಗುಂಪು ಹೊಸಪುರ, ಗಾಡಿಚೌಕ, ಚಂದ್ರಾಪುರ ಮಾರ್ಗವಾಗಿ ಹೊರಟ್ಟಿ ಎಂಬಲ್ಲಿಗೆ ಲಗ್ಗೆಯಿಟ್ಟಿದ್ದು ಬೆಳಗ್ಗೆ 6.45ರವರೆಗೂ ಮಂಜುನಾಥ್ ಎಂಬುವರ ತೋಟದಲ್ಲಿ ಬೀಡುಬಿಟ್ಟು 2 ಎಕರೆ ಜಮೀನಿನಲ್ಲಿದ್ದ ಕಾಫಿ, ಕಾಳುಮೆಣಸು, ಬಾಳೆ, ಅಡಕೆ ಗಿಡಗಳು, ಸಿಲ್ವರ್ ಮರಗಳನ್ನು ಧ್ವಂಸಗೊಳಿಸಿವೆ. ತೋಟದ ಪಕ್ಕದಲ್ಲಿ ಗ್ರಾಮದ ಮನೆಗಳಿದ್ದು ಕಾಡಾನೆಗಳಿಗೆ ಹೆದರಿ ಜನ ಮನೆಯಿಂದ ಹೊರಬಂದಿಲ್ಲ. ಬೆಳಗ್ಗೆವರೆಗೂ ಕಾಫಿ ತೋಟದಲ್ಲಿ ಕಾಡಾನೆಗಳು ತಿರುಗಾಡಿ ಗಿಡಗಳನ್ನು ನಾಶ ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾಡಾನೆ ಹಿಂಡು ಬೇಲೂರು ಭಾಗದಿಂದ ಮಾಕೋನಹಳ್ಳಿ ಮೂಲಕ ತಾಲೂಕಿಗೆ ಎರಡು ತಿಂಗಳ ಹಿಂದೆ ಪ್ರವೇಶಿಸಿತ್ತು. ಅರಣ್ಯ ಇಲಾಖೆಯವರು ಬಂದ ದಾರಿಯಲ್ಲಿ ವಾಪಸು ಅಟ್ಟಿದ್ದರು. ಕಳೆದ ವಾರ ಮತ್ತೆ ಅದೇ ಗುಂಪು ತಾಲೂಕಿಗೆ ಪ್ರವೇಶಿಸಿದೆ. ಹೊರಟ್ಟಿ, ತುದಿಯಾಲ, ಮೂಡಸಸಿ, ಕೆಲಚಂದ್ರ ಎಸ್ಟೇಟ್, ಚಂದ್ರಾಪುರ, ಘಟ್ಟದಹಳ್ಳಿ, ಹಳಸೆ, ಕುನ್ನಳ್ಳಿ, ಬಾರದಹಳ್ಳಿ, ಜಾಗರಮನೆ, ಚಂದ್ರಾಪುರ, ಕಮ್ಮರಗೋಡು ಗ್ರಾಮಗಳಲ್ಲಿ ಈ ಕಾಡಾನೆ ಹಿಂಡು ನಿರಂತರವಾಗಿ ತಿರುಗಾಡಿಕೊಂಡಿರುವುದರಿಂದ ಗ್ರಾಮದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಕಾಡಾನೆ ಹಿಂಡು ಲಗ್ಗೆಯಿಟ್ಟಿರುವ ಗ್ರಾಮಗಳು, ಮೂಡಿಗೆರೆ-ಬೇಲೂರು ಗಡಿ ಗ್ರಾಮಗಳಾಗಿವೆ. ಬೇಲೂರು ತಾಲೂಕಿಗೆ ಕಾಡಾನೆ ಹಿಂಡು ಪ್ರವೇಶಿಸುವುದನ್ನು ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ತಡೆಗಟ್ಟುತ್ತಿರುವುದರಿಂದ ಮೂಡಿಗೆರೆ ತಾಲೂಕಿನ ಗಡಿ ಗ್ರಾಮಗಳಲ್ಲಿ ಸಂಚರಿಸುತ್ತಿದೆ. ಕಾಡಾನೆ ಹಿಂಡಿನಿಂದ ನಿರಂತರವಾಗಿ ಕಾಫಿ ತೋಟ ಮತ್ತು ಜನವಸತಿ ಪ್ರದೇಶದಲ್ಲಿ ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆಯಿಂದ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ. ಕಾಡಾನೆಗಳಿರುವ ಬಗ್ಗೆ ಪ್ರತಿ ಗಂಟೆಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡುತ್ತಿರುವ ಅರಣ್ಯ ಇಲಾಖೆ, ಕಾಡಾನೆ ಹಿಂಡಿನಿಂದ ಆಗುತ್ತಿರುವ ದಾಳಿಯ ವಾಸ್ತವಾಂಶವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಕಾಡಾನೆಗಳು ಗುಂಪಾಗಿ ತಿರುಗಾಡುತ್ತಿರುವುದರಿಂದ ಸುತ್ತಲಿನ ಪ್ರದೇಶಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಒಂದು ವಾರದಿಂದ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರು ಹೋಗುತ್ತಿಲ್ಲ. ಮನೆಯಿಂದ ಹೊರಬರಲು ಭಯ ಪಡುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಗ್ರಾಮಗಳಲ್ಲಿ ಜನ ಉಸಿರು ಬಿಗಿಹಿಡಿದು ಕುಳಿತುಕೊಳ್ಳುವಂತಾಗಿದೆ.