ಜನ್ನಾಪುರದಲ್ಲಿ ಹೋಬಳಿ ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ತಾಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಉದ್ಘಾಟಿಸಿದರು. ಎಂ.ಎಸ್.ನಾಗರಾಜ್, ನವೀನ್ ಆನೆದ್ದಿಬ್ಬ, ಭಾಗ್ಯಾ ಲಕ್ಷ್ಮಣ್, ಸ್ವಾತಿಶ್ರೀ, ಲಕ್ಷ್ಮೀ, ಜಿ.ಎಸ್.ದಿನೇಶ್, ಬಿ.ಆರ್.ನವೀನ್, ವಿ.ಪಿ.ನಾರಾಯಣ, ಸುಪ್ರೀತಾ, ಸಿ.ಎನ್.ರಾಧಾ ಇತರರಿದ್ದರು. 
ನ್ಯೂಸ್

ಹೊರಗಿನಿಂದ ಬಂದವರು ಕನ್ನಡ ಕಲಿಯಲಿ

ಮೂಡಿಗೆರೆ: ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಪ್ರತಿ ಮನೆಯಲ್ಲೂ ಕುಟುಂಬ ಸದಸ್ಯರು ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡಬೇಕು. ಆಧುನಿಕತೆಗೆ ತಕ್ಕಂತೆ ಇಂಗ್ಲಿಷ್ ಬಳಸಿದರೆ ಕನ್ನಡ ಭಾಷೆಗೆ ದ್ರೋಹ ಬಗೆದಂತಾಗುತ್ತದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ ಗೌಡ ಹೇಳಿದರು.

ಜನ್ನಾಪುರದಲ್ಲಿ ಸೋಮವಾರ ಗೋಣಿಬೀಡು ಹೋಬಳಿ ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂಗ್ಲಿಷ್ ವ್ಯಾಮೋಹದಿಂದ ಪ್ರತಿಯೊಬ್ಬರೂ ಹೊರಬಂದು ಕನ್ನಡವನ್ನು ನಿತ್ಯ ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕಿದೆ. ವಲಸೆ ಬಂದಿರುವ ಉತ್ತರ ಭಾರತೀಯರೊಂದಿಗೆ ನಾವು ಕನ್ನಡದಲ್ಲಿ ಮಾತನಾಡುವುದನ್ನು ಬಿಟ್ಟು ಅವರ ಭಾಷೆಯಲ್ಲಿ ವ್ಯವಹರಿಸುತ್ತಿರುವುದು ಸರಿಯಲ್ಲ ಎಂದರು.

ಕನ್ನಡ ನೆಲದಲ್ಲಿ ಅನ್ನ, ನೀರು ಬೇಕಾದವರು ಕನ್ನಡವನ್ನು ಒಪ್ಪಿಕೊಳ್ಳಬೇಕು. ಹೊರಗಿನಿಂದ ಬಂದವರು ಕನ್ನಡವನ್ನು ಕಲಿಯಬೇಕು. ಕಾಫಿ ತೋಟದ ಕಾರ್ಮಿಕರ ಸಮಸ್ಯೆಗೆ ಹೊರ ರಾಜ್ಯದವರು ಅನಿವಾರ್ಯವಾಗಬೇಕೇ ಹೊರತು ಅಗತ್ಯವೆನಿಸಿಕೊಳ್ಳಬಾರದು. ಕನ್ನಡ ಶಾಲೆಗಳು ಕೂಡ ಕಾಲ ಸರಿದಂತೆ ಇಂಗ್ಲಿಷ್‌ಮಯವಾಗುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂದು ತಿಳಿಸಿದರು.

ಸಾಹಿತಿ ಎಂ.ಎಸ್.ನಾಗರಾಜ್ ಮಾತನಾಡಿ, ಕನ್ನಡಿಗರ ಮೇಲೆ ಪ್ರತಿನಿತ್ಯ ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಗಡಿ, ನೆಲ, ಜಲ ಸಮಸ್ಯೆಗೆ ಮುಕ್ತಿ ದೊರಕಿಸಬೇಕು. ಕನ್ನಡಪರ ಸಂಘಟನೆಗಳು ಗಟ್ಟಿಯಾಗಿರುವುದರಿಂದ ಹೋರಾಟ ನಡೆಸಿ ಕನ್ನಡವನ್ನು ಕಾಪಾಡಲಾಗುತ್ತಿದೆ. ಕನ್ನಡಿಗರ ಮೇಲೆ ದೌರ್ಜನ್ಯ ನಡೆದಾಗ ಕನ್ನಡಪರ ಹೋರಾಟಗಾರರನ್ನು ಸರ್ಕಾರ ಬಂಧಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಕನ್ನಡಿಗರ ಪರ ನಿಲ್ಲಬೇಕು. ಕನ್ನಡಿಗರಿಗೆ ಧೈರ್ಯ ತುಂಬಬೇಕು. ಹಾಗಾದರೆ ಮಾತ್ರ ಕನ್ನಡ ನಾಡು ಮತ್ತು ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ಕಸಾಪ ಜಿಲ್ಲಾ ಸಂಚಾಲಕ ಎಚ್.ಎಂ.ಶಾಂತಕುಮಾರ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನೂತನ ಅಧ್ಯಕ್ಷ ನವೀನ್ ಆನೆದಿಬ್ಬ, ನಿಕಟಪೂರ್ವ ಅಧ್ಯಕ್ಷೆ ಭಾಗ್ಯಾ ಲಕ್ಷ್ಮಣ್, ವಿ.ಪಿ.ನಾರಾಯಣ್, ಬಕ್ಕಿಮಂಜು, ಚಂದ್ರು ಒಡೆಯರ್, ಅನಿತಾ ಜಗದೀಪ್, ಕಿರುಗುಂದ ಗ್ರಾಪಂ ಅಧ್ಯಕ್ಷೆ ಸ್ವಾತಿಶ್ರೀ, ಚಿನ್ನಿಗ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಆರ್.ನವೀನ್, ಗೋಣಿಬೀಡು ಗ್ರಾಪಂ ಮಾಜಿ ಅಧ್ಯಕ್ಷ ಜಿ.ಎಸ್.ದಿನೇಶ್, ಹಸೈನಾರ್ ಬಿಳಗುಳ, ಕ್ಯಾಂಟೀನ್ ರಾಜಣ್ಣ, ಸುಂದ್ರೇಶ್,

ಪೂವಪ್ಪ, ಅಂಬಿಕಾ, ಸುಪ್ರೀತಾ, ನೇತ್ರಾ, ಪೂರ್ಣೇಶ್, ಚಂದನ್, ಇಂದ್ರೇಶ್, ಮಂಜು, ಲೋಕೇಶ್, ಪ್ರಕಾಶ್, ಜಗತ್, ಆಶಾ, ಸರೋಜಾ, ಸುನೀತಾ, ಸಿ.ಎನ್.ರಾಧಾ, ಇಂಪಾ ಇತರರಿದ್ದರು.