ಚನ್ನರಾಯಪಟ್ಟಣ ತಾಲೂಕು ಬಾಳಗಂಚಿ ಹೊನ್ನಾದೇವಿ ಸನ್ನಿಧಿಯಲ್ಲಿ ಕಡೇ ಕಾರ್ತಿಕದ ಪ್ರಯುಕ್ತ ದೀಪೋತ್ಸವ ಜರುಗಿತು. 
ನ್ಯೂಸ್

ಹೊನ್ನಾದೇವಿ ದೇಗುಲದಲ್ಲಿ ದೀಪೋತ್ಸವ

ಚನ್ನರಾಯಪಟ್ಟಣ: ತಾಲೂಕಿನ ಬಾಳಗಂಚಿ ಗ್ರಾಮದೇವತೆ ಹೊನ್ನಾದೇವಿ ಸನ್ನಿಧಿಯಲ್ಲಿ ಕಡೇ ಕಾರ್ತಿಕ ಮಾಸ ಹಾಗೂ ಅಮಾವಾಸ್ಯೆ ಅಂಗವಾಗಿ ಬುಧವಾರ ರಾತ್ರಿ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.

ದೀಪೋತ್ಸವದ ಪ್ರಯುಕ್ತ ದೇಗುಲಕ್ಕೆ ಹಸಿರು ಚಪ್ಪರ ಹಾಕಿ, ವಿವಿಧ ಬಗೆಯ ಪುಷ್ಪ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಬೀದಿಗಳು ರಂಗೋಲಿಗಳಿಂದ ಕಂಗೊಳಿಸಿದವು. ಮಹಿಳೆಯರು ಸಂಜೆ ಸಾವಿರಾರು ದೀಪಗಳನ್ನು ಸಿದ್ಧಪಡಿಸಿದ್ದರು. ಹೊನ್ನಾದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೀಪೋತ್ಸವಕ್ಕೆ ಚಾಲನೆ ದೊರೆಯಿತು.

ಹಿರಿಯರು ಹಾಗೂ ಹೆಣ್ಣುಮಕ್ಕಳು ಸೋಬಾನೆ ಪದ ಹಾಡುತ್ತ ದೇಗುಲದ ಅಂಕಣ, ಮೆಟ್ಟಲು, ಕಿಟಕಿ ಹಾಗೂ ಕಾಂಪೌಂಡ್ ಮೇಲೆ ಸುತ್ತುವರಿದಂತೆ ಸಾವಿರಾರು ದೀಪಗಳನ್ನು ಬೆಳಗಿಸಿದರು. ದೇವಿಗೆ ಮಹಾಮಂಗಳಾರತಿ ಬೆಳಗಿಸಿದ ಬಳಿಕ ಪ್ರಸಾದ ವಿನಿಯೊಗ ನಡೆಯಿತು. ಬಾಳಗಂಚಿ, ಹೊನ್ನಶೆಟ್ಟಿಹಳ್ಳಿ, ಹೊನ್ನಾದೇವಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.