ನ್ಯೂಸ್

ಹೊತ್ತಿನ ಊಟಕ್ಕೂ ನಿವೃತ್ತ ಸೈನಿಕನ ಪರದಾಟ

ಕಾರವಾರ: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ವ್ಯಕ್ತಿಯೊಬ್ಬ ಊಟಕ್ಕೂ ಗತಿಯಿಲ್ಲದೇ ದಯನೀಯ ಸ್ಥಿತಿಯಲ್ಲಿ ನಗರದಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ.

ಚೆಂಡಿಯಾ ಮೂಲದ ಪ್ರಭಾಕರ ಮಾರುತಿ ಚಂಡೇಕರ್ ಅವರಿಗೆ ಇರಲು ಸ್ವಂತ ಮನೆಯಿಲ್ಲ. ಊಟಕ್ಕೂ ಗತಿಯಿಲ್ಲ. ಕ್ರಿಮ್್ಸ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗಾಗಿ ಸಂಘಟನೆಗಳು ನೀಡುವ ಊಟ ಮಾಡಿ, ಅಲ್ಲಿ ಇಲ್ಲಿ ಖಾಲಿ ಕಟ್ಟಡಗಳ ಎದುರು ಮಲಗಿ ಅವರು ಜೀವನ ನಡೆಸುತ್ತಿದ್ದಾರೆ.

ನಿವೃತ್ತಿ ವೇತನವೂ ಇಲ್ಲ:

ಪ್ರಭಾಕರ ಚಂಡೇಕರ್ ಅವರು ಹೇಳುವ ಪ್ರಕಾರ ಅವರು 1965 ರಲ್ಲಿ ಬೆಳಗಾವಿಯಲ್ಲಿ ಮರಾಠಾ ಇನ್ಪೆಂಟ್ರಿ ರೆಜಿಮೆಂಟ್ ಸೇರಿದ್ದರು. ಲಡಾಕ್ ಸೇರಿ ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸಿ 1978 ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ನಂತರ ಅವರು ಗೋವಾದ ದೇವಸ್ಥಾನವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಸೇರಿಕೊಂಡಿದ್ದರು. ‘ಈಗ ವಯಸ್ಸಾದ ಕಾರಣ ಮೂಲ ಊರು ಕಾರವಾರಕ್ಕೆ ಬಂದಿದ್ದೇನೆ. ನನಗೆ ಮದುವೆಯಾಗಿಲ್ಲ. ಮಕ್ಕಳಿಲ್ಲ. ಇದರಿಂದ ಅನಾಥನಾದೆ’ ಎಂದು ಅವರು ತಮ್ಮ ಗೋಳಿನ ವೃತ್ತಾಂತ ಹೇಳಿಕೊಳ್ಳುತ್ತಾರೆ.

ಸ್ಪಷ್ಟತೆ ಇಲ್ಲ: ಪ್ರಭಾಕರ ಚಂಡೇಕರ್ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ ಬಗ್ಗೆ ಕೆಲವು ದಾಖಲೆಗಳು ಅವರ ಬಳಿ ಇವೆ. ಸೈನಿಕ ಕಲ್ಯಾಣ ಮಂಡಳಿಗೆ ನಿವೃತ್ತಿ ವೇತನಕ್ಕಾಗಿ ಬರೆದ ಅರ್ಜಿಗಳಿವೆ. ಗೋವಾ ವಿಳಾಸದ ಆಧಾರ ಕಾರ್ಡ್ ಇದೆ. ಅದನ್ನು ಹೊರತುಪಡಿಸಿ ನಿವೃತ್ತಿ ಪತ್ರ, ಅಥವಾ ಗುರುತಿನ ಚೀಟಿ ಅವರ ಬಳಿ ಇಲ್ಲ. ನಿವೃತ್ತಿ ವೇತನ ಸಿಗದ ಬಗ್ಗೆ ಅವರ ಬಳಿ ಸ್ಪಷ್ಟ ಉತ್ತರ ದೊರೆಯದು. ‘ಅಲಹಾಬಾದ್​ನಲ್ಲಿ ನನ್ನ ದಾಖಲೆ ಇದ್ದ ಕಚೇರಿ ಸುಟ್ಟು ಹೋಯಿತು. ಸೈನಿಕ ಕಲ್ಯಾಣ ಮಂಡಳಿ ನನ್ನ ಮನವಿಗೆ ಸ್ಪಂದಿಸಿಲ್ಲ ಎಂದು ಅವರು ಹೇಳುತ್ತಾರೆ.

ನಿಗದಿತ ಅವಧಿ ಮುಗಿಸದೇ ಓಡಿ ಬಂದಿದ್ದರೆ ಅಥವಾ ಸೇವೆಯಿಂದ ಕಿತ್ತು ಹಾಕಿದ್ದರೆ ನಿವೃತ್ತಿ ವೇತನ ಸೌಲಭ್ಯ ಸಿಗುವುದಿಲ್ಲ. ಅವರ ದಾಖಲೆ ಪರಿಶೀಲಿಸಬೇಕಾಗುತ್ತದೆ ಎಂಬುದು ಸೈನಿಕ ಕಲ್ಯಾಣ ಮಂಡಳಿ ಅಧಿಕಾರಿಗಳು ಹೇಳುವ ಮಾತು.

ನನಗೆ ಕುಟುಂಬವಿಲ್ಲ. ಮನೆಯೂ ಇಲ್ಲ. ಸರ್ಕಾರ ನೀಡುವ ವೃದ್ಧಾಪ್ಯ ವೇತನವನ್ನಾದರೂ ಒದಗಿಸಿಕೊಟ್ಟರೆ ನಾನು ಜೀವನ ಮಾಡುತ್ತೇನೆ. ಪ್ರಭಾಕರ ಚಂಡೇಕರ್ ಕಾರವಾರ
ಅವರ ಬಳಿ ಇದ್ದ ದಾಖಲೆಗಳನ್ನು ತೆಗೆದುಕೊಂಡು ನಮ್ಮ ಕಚೇರಿಗೆ ಬಂದರೆ ನಾವು ಖಂಡಿತ ಸಹಾಯ ಮಾಡುತ್ತೇವೆ. ಏಕೆ ನಿವೃತ್ತಿ ವೇತನ ಸಿಕ್ಕಿಲ್ಲ ಎಂದು ಪರಿಶೀಲಿಸಬೇಕಾಗುತ್ತದೆ. ಇಂದುಪ್ರಭಾ ಸೈನಿಕ ಕಲ್ಯಾಣ ಮಂಡಳಿ ಡಿಡಿ ಕಾರವಾರ