ನ್ಯೂಸ್

ಹೊಗೆಸೊಪ್ಪು ಬೆಳೆಗಾರರಿಗೆ ಮಾರಕವಾಗುತ್ತಿರುವ ಕೇಂದ್ರದ ನಿಯಮಗಳು, ಬೆಳೆಗಾರರ ಸಂಘದ ಆಕ್ರೋಶ

ಅರಕಲಗೂಡು: ಹೊಗೆಸೊಪ್ಪು ಬೆಲೆ ಕುಸಿತದಿಂದ ಕಂಗೆಟ್ಟಿರುವ ಬೆಳೆಗಾರರ ಹಿತ ಕಾಪಾಡಲು ವಿಫಲವಾಗಿರುವ ಕೇಂದ್ರ ಸರ್ಕಾರ ಮಾರಕವಾದ ನಿಯಮಗಳನ್ನು ರೂಪಿಸಿ ಗಾಯದ ಮೇಲೆ ಬರೆ ಎಳೆಯಲು ಹೊರಟಿದೆ ಎಂದು ರಾಮನಾಥಪುರ ತಂಬಾಕು ಮಾರುಕಟ್ಟೆ ಫ್ಲಾಟ್ ಫಾರಂ ಬೆಳೆಗಾರರ ಸಂಘದ ಅಧ್ಯಕ್ಷ ಈರೇಗೌಡ ಆರೋಪಿಸಿದರು.

ಪಟ್ಟಣದ ತಾಪಂ ಆವರಣದಲ್ಲಿ ವಿಶ್ವ ತಂಬಾಕು ಬೆಳೆಗಾರರ ದಿನಾಚರಣೆ ಅಂಗವಾಗಿ ಬುಧವಾರ ನಡೆದ ಬೆಳೆಗಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಹೊಗೆಸೊಪ್ಪು ಬೆಳೆಗಾರರ ವಿಶ್ವ ದಿನಾಚರಣೆ ದಿನವಾಗಿದೆ. ಆದರೆ ಕಷ್ಟಪಟ್ಟು ಹೊಗೆಸೊಪ್ಪು ಉತ್ಪಾದಿಸಿದ ಬೆಳೆಗಾರರಿಗೆ ಮಾತ್ರ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗದೆ ನೆಮ್ಮದಿ ಇಲ್ಲವಾಗಿದೆ. ತಂಬಾಕು ಕೊಳ್ಳಲು ಕೇಂದ್ರ ಸರ್ಕಾರ ವಿದೇಶ ನೇರ ಬಂಡವಾಳ ಹೂಡಿಕೆ ನೀತಿ ಜಾರಿಗೊಳಿಸಲು ಮುಂದಾಗಿದೆ. ಇದರಿಂದಾಗಿ ಬೆಳೆಗಾರರರು ಮಾರಾಟ ಮಾಡಿದ ತಂಬಾಕಿನ ಹಣ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾವಣೆ ಆಗದೆ ವಿದೇಶಿ ಕಂಪನಿಗಳ ವಿಷವರ್ತುಲಕ್ಕೆ ಸಿಲುಕಿ ನರಳಬೇಕಾಗುತ್ತದೆ. ವರ್ತಕರಿಂದಲೇ ತಂಬಾಕು ಖರೀದಿಸಿದರೆ ರೈತರಿಗೆ ಅನುಕೂಲವಾಗಲಿದ್ದು ಸರ್ಕಾರ ಈಗಿರುವ ನೀತಿಯನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಹುಣಸೂರು ಕೇಂದ್ರೀಯ ತಂಬಾಕು ಸಂಶೋಧನಾ ಮಂಡಳಿ ಈವರೆಗೆ ತಂಬಾಕು ಬೆಳೆಗಾರರ ಹಿತ ಕಾಯುತ್ತಿದೆ. ಇದೀಗ ಸರ್ಕಾರ ಹೊಗೆಸೊಪ್ಪು ಬೆಳೆಯೊಂದಿಗೆ ಪರ್ಯಾಯ ಬೆಳೆಗಳನ್ನು ಈ ಮಂಡಳಿ ವ್ಯಾಪ್ತಿಗೆ ಒಳಪಡಿಸಲು ಮುಂದಾಗಿರುವ ಕ್ರಮ ಒಳ್ಳೆಯದಲ್ಲ. ತಂಬಾಕು ಬೆಳೆಗಾರರಿಗೆ ವಿರೋಧವಾದ ಇಂಥ ಕ್ರಮಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಜಿಪಂ ಸದಸ್ಯ ಬರಗೂರು ರವಿ ಮಾತನಾಡಿ, ಹೊಗೆಸೊಪ್ಪು ಮಾರಾಟ ಮಾಡಿದ ರೈತರಿಂದ ನೂರಾರು ಕೋಟಿ ರೂ ಸೇವಾ ಶುಲ್ಕ, ದಂಡದ ಶುಲ್ಕ ವಸೂಲಿಯಾಗಿದೆ. ಸಾಲ ಮಾಡಿ ಬೆವರು ಸುರಿಸಿ ಹೊಗೆಸೊಪ್ಪು ಉತ್ಪಾದಿಸಿದ ಬೆಳೆಗಾರರಿಗೆ ಈ ಹಣ ದಕ್ಕುತ್ತಿಲ್ಲ. ದರ ಕುಸಿತದಿಂದ ಹತಾಶರಾದ ಬೆಳೆಗಾರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ವೀರಾಜ್, ಬೆಳೆಗಾರರಾದ ಜವರೇಗೌಡ, ತುಳಸಿ ಬಾಲರಾಜ್ ಇದ್ದರು.