ಅವರು ಮೊದಲು ಕಾಲಿಟ್ಟಿದ್ದು ರಾಮೇಶ್ವರದಲ್ಲಿ. ಕಳೆದುಹೋದ ಭಾರತೀಯ ಅಸ್ಮಿತೆಯನ್ನು ಮರಳಿಗೆದ್ದು ಏಕಾಂಗಿಯಾಗಿ ವಿಜೃಂಭಿಸಿದ ಈ ಮಹಾಪುರುಷ ಶತಶತಮಾನಗಳ ಹಿಂದೆ ಸೀತೆಯನ್ನು ಮರಳಿ ತಂದು ರಾಮೇಶ್ವರದ ಮೂಲಕವೇ ಆರ್ಯಾವರ್ತವನ್ನು ಪ್ರವೇಶಿಸಿದ ಧರ್ಮಸ್ಥಾಪನಾಚಾರ್ಯ ಶ್ರೀರಾಮನನ್ನು ಹೋಲುವುದು ಎಷ್ಟು ಅದ್ಭುತ! ರಾಮ ಕೈಗೊಂಡಿದ್ದು ಯುದ್ಧ; ಶತ್ರುನಾಶ; ಸ್ವಾಮೀಜಿಯದ್ದು ಬೇರೆ ಅಲ್ಲ. ಅಲ್ಲೂ ಶತ್ರುನಾಶವೇ ಪರಿಹಾರ. ಆದರೆ ಶತ್ರು ಬೇರೆ. ಆದ್ದರಿಂದ ಅಸ್ತ್ರ ಕೂಡ ಬೇರೆಯೇ. ಯಾವುದು ಆ ಶತ್ರು?! ಯಾವುದು ಆ ಅಸ್ತ್ರ?!
ವಿವೇಕಾನಂದರ ಪ್ರಜ್ಞಾವಲಯ ಅಸೀಮ. ಅದು ತನ್ನ ಎಲ್ಲಾ ಸ್ತರಗಳನ್ನು ಪೂರ್ಣತ್ವಕ್ಕೇರಿಸಿ (ಅತೀತ ಭಾವದಿಂದ ) ಸಮಸ್ತ ವಿಶ್ವಪ್ರಜ್ಞೆಯನ್ನು, ಅದರ ಆಳ-ಅಗಲಗಳನ್ನು ತನ್ನಲ್ಲಿ ಸಮ್ಮಿಳಿಸಿಕೊಂಡ ವ್ಯಷ್ಟಿರೂಪ. ಈ ಪ್ರಜ್ಞಾಸ್ತರವು ಅವರಿಗೆ ತೋರಿಸಿತ್ತು- ‘ತಮ್ಮ ಪ್ರಾಣಪ್ರಿಯ ಮಾತೃಭೂಮಿಗೆ ಉಜ್ವಲ ಭವಿಷ್ಯವಿದೆ’ ಎಂದು. ದಕ್ಷಿಣೇಶ್ವರದ ದೇವಮಾನವನ ತಪಸ್ಸು ಮತ್ತು ಸಿದ್ಧಿಗಳು ಯುವಶಿಷ್ಯನನ್ನು ಪ್ರವೇಶಿಸಿ, ಏಳು ವರ್ಷಗಳ ಕಾಲ ಬೃಹತ್ ಭಾರತಮಾತೆಯ ದರ್ಶನವನ್ನು ಮಾಡಿಸಿ, ಕನ್ಯಾಕುಮಾರಿಯಲ್ಲಿ- ದೇವಿಯ ಪದತಲದಲ್ಲಿ - ಮುಂದಿನ ಕ್ರಿಯಾಯೋಜನೆಗೆ ಮುನ್ನುಡಿ ಬರೆದಿತ್ತು. ದೇವಮಾನವ ಶ್ರೀರಾಮಕೃಷ್ಣರು ಯುವಸನ್ಯಾಸಿಯಲ್ಲೂ, ದಕ್ಷಿಣೇಶ್ವರದ ಭವತಾರಿಣಿ ಕನ್ಯಾಕುಮಾರಿಯಲ್ಲೂ ಪ್ರವೇಶಿಸಿ ಜೈತ್ರಯಾತ್ರೆಯ ಸೂಕ್ಷ್ಮಾವಲೋಕನವನ್ನು ಮಾಡಿದಂತಿತ್ತು. ಯೋಜಿಸಿದ್ದ ಕಾರ್ಯ ಅದ್ಭುತವಾಗಿ ಕೈಗೂಡಿತ್ತು. ಯಾವ ಭಾರತೀಯನೂ ಕನಸಿನಲ್ಲೂ ಊಹಿಸಿರಲಿಲ್ಲ - ಭಾರತೀಯ ಬಡ ಸನ್ಯಾಸಿ ಸೊಕ್ಕಿದ ಪಾಶ್ಚಾತ್ಯರಾಷ್ಟ್ರಗಳ ಮುಂದೆ ತನ್ನ ಧರ್ಮ, ಸಂಸ್ಕೃತಿಗಳ ಹಿರಿಮೆಯನ್ನು ಮೆರೆದು ಅವರು ಹಣೆಮಣಿದು ಶಿಷ್ಯರಾಗುವಂತೆ ಮಾಡುತ್ತಾನೆ - ಎಂದು. ಏಕೆಂದರೆ ಅವರು ತಮ್ಮ ಧರ್ಮದ ಬಗ್ಗೆ ತಿಳಿದುಕೊಂಡಿದ್ದೇ ಬೇರೆ. ಅದರಲ್ಲಿ ಸತ್ಯವಿಲ್ಲ, ಜೀವವಿಲ್ಲ, ಅದೊಂದು ಮೂಢನಂಬಿಕೆಗಳ ಕಂತೆ ಎಂದು. ಏಕೆಂದರೆ ಅಂದಿನ ಆಳುಗರು ಮತ್ತು ಅವರ ಧರ್ಮ ಇದನ್ನು ಪ್ರತಿನಿತ್ಯವೆಂಬಂತೆ ಭಾರತೀಯರ ಮುಂದೆ ಮೊಳಗುತ್ತಿತ್ತು. ಆ ಆಳುಗರ ನಾಡಿನಲ್ಲೇ, ಅವರಿಗೆ ಸ್ವಾಮೀಜಿ ಸಾಬೀತುಪಡಿಸಿದ್ದು ಏನೆಂಬುದನ್ನು ಮಷಿನ್ಗನ್ ಸಂಶೋಧಕ ಪ್ರಖ್ಯಾತವಿಜ್ಞಾನಿ ಹಿರಂ ಮ್ಯಾಕ್ಸಿಂಯ Li Hung Chang's scrap bookನ ಮುನ್ನುಡಿಯಿಂದ ಉದ್ಧರಿಸಿದರೆ ಸೂಕ್ತವಾದೀತು- ‘ಅಮೆರಿಕದ ಎಲ್ಲ ಪಾದ್ರಿಗಳೂ ಪ್ರಚಾರಕರೂ ಒಟ್ಟಾರೆ ತಿಳಿದುದಕ್ಕಿಂತ ಹೆಚ್ಚಿನ ಧರ್ಮವನ್ನು, ತತ್ವಜ್ಞಾನವನ್ನು ಈತ ಬಲ್ಲವನಾಗಿದ್ದ. ಜನರಿಗೆ ನಿಜಕ್ಕೂ ಒಪ್ಪಿಗೆಯಾಗುವಂತಹ ರೀತಿಯಲ್ಲಿ ಪ್ರಥಮಬಾರಿಗೆ ಈತ ಧರ್ಮವನ್ನು ಬೋಧಿಸಿದ. ಅಮೆರಿಕನ್ನರು ಚಿಂತಿಸಲಾರಂಭಿಸಿದರು- ‘ಇವನಿಗೆ ಹೋಲಿಸಿದರೆ ಧರ್ಮವನ್ನು ಏನೇನೂ ಅರಿಯದ ನಮ್ಮ ಮಿಷನರಿಗಳನ್ನು ಇವನ ದೇಶಕ್ಕೆ ಕಳಿಸಿ ಹಣವನ್ನು ಪೋಲು ಮಾಡೋಣವೇ? ಎಂದಿಗೂ ಇಲ್ಲ.’ ತತ್ಪರಿಣಾಮವಾಗಿ ಮಿಷನರಿಗಳ ಆದಾಯ ವರ್ಷಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಡಾಲರ್ಗಳಷ್ಟು ಕಡಿಮೆಯಾಯಿತು’.
ಇಲ್ಲಿ ವಿವೇಕಾನಂದರು ಮಣಿಸಿದ ಶತ್ರು ಯಾರು? ಅವರು ಬಳಸಿದ ಅಸ್ತ್ರ ಏನು? ಭಾರತೀಯ ಪ್ರಣೀತ ‘ಧರ್ಮ’ದ ನಿಜಸ್ವರೂಪದ ಬಗ್ಗೆ ಪಾಶ್ಚಾತ್ಯರಲ್ಲಿದ್ದ ಅಜ್ಞಾನ! ತಮ್ಮ ಧರ್ಮದ ‘ಸತ್ವ’ ಸಾಮರ್ಥ್ಯಗಳ ಬಗ್ಗೆ ಭಾರತೀಯರಲ್ಲಿದ್ದ ಅಜ್ಞಾನ! ಇದೇ ಆ ಶತ್ರು. ಅಸ್ತ್ರವಾದರೋ ವಿಜ್ಞಾನಿ ಹಿರಂ ಮ್ಯಾಕ್ಸಿಂ ಹೇಳಿದಂತೆ- ‘ಜನರು ಎಂದೂ ಊಹಿಸದಿದ್ದಷ್ಟು ಸತ್ವ ಭಾರತೀಯರ ಧರ್ಮದಲ್ಲಿದೆ ಎಂದು ತೋರಿಸಿದ್ದು.’
ಭಾರತೀಯ ಧರ್ಮದಲ್ಲಿ ವಿಜ್ಞಾನವಿದೆ, ವೈಶಾಲ್ಯವಿದೆ, ಪೂರ್ಣಸತ್ಯದ ಸಂಪೂರ್ಣ ವಿವರವೇ ಅಲ್ಲಿರುವಾಗ ಕೇವಲ ವಿಜ್ಞಾನವೇಕೆ, ಮಾನವ ಔನ್ನತ್ಯಕ್ಕೆ ಪ್ರಸ್ತುತವಿರುವ ಎಲ್ಲಾ ಆಯಾಮಗಳೂ, ಅವುಗಳ ಎಲ್ಲಾ ಮಜಲುಗಳೂ ಸಮರ್ಪಕವಾಗಿ ಅಲ್ಲಿ ವಿಶ್ಲೇಷಿಸಲ್ಪಟ್ಟಿವೆ. ಧರ್ಮ ಎಂದರೆ ಇದು ಎಂಬ ಕಲ್ಪನೆಯೇ ಪಾಶ್ಚಾತ್ಯರಲ್ಲಿರಲಿಲ್ಲ. ಇಡೀ ದೇಶವೇ ಅವರ ಉಪನ್ಯಾಸಗಳಿಗೆ ಮುಗಿಬೀಳುತ್ತಿದ್ದುದು ಈ ಕಾರಣಕ್ಕೆ. ಅಂದಿನ ಪ್ರಖ್ಯಾತ ವಿಜ್ಞಾನಿ ನಿಕೋಲಾ ಟೆಸ್ಲಾ, ಸುಪ್ರಸಿದ್ಧ ಹಾರ್ವರ್ಡ್ ಚಿಂತಕರಾದ ವಿಲಿಯಂ ಜೇಮ್ಸ್, ಜೋಷೈಯಾ ರಾಯ್ಸ್ ಇತ್ಯಾದಿಗಳಲ್ಲದೆ ಜೂಲಿಯಾ ವಾರ್ಡ್ ಹೋವೆ, ಚಾರ್ಲ್ಸ್ ಹಿಗ್ಗಿನ್ಸ್, ಅಂದಿನ ಪ್ರಪಂಚದ ಅತ್ಯಂತ ಶ್ರೀಮಂತ ರಾಕ್ ಫೆಲ್ಲರ್ ಇವರೆಲ್ಲ ವಿವೇಕಾನಂದರನ್ನು ತಮ್ಮ ‘ಗುರು’ ಎಂದೇ ಸ್ವೀಕರಿಸಿದರು ಎಂದರೆ ಉತ್ಪ್ರೇಕ್ಷೆಯಲ್ಲ.
ಭಾರತೀಯ ಧರ್ಮಪ್ರಜ್ಞೆ ಮತ್ತು ವಿಶ್ವಪ್ರಜ್ಞೆ ಬೇರೆ ಬೇರೆ ಅಲ್ಲ. ವಿವೇಕಾನಂದರು ವೇದಾಂತದ ಬೆಳಕಿನಲ್ಲಿ ಭಾರತೀಯ ಧರ್ಮದ ವಿಶ್ಲೇಷಣೆ ಮಾಡಿದಾಗ ತಮಗೇ ಅರಿವಿಲ್ಲದಂತೆ ಅಮೆರಿಕನ್ನರು ವಿಶಾಲ ಹಾಗೂ ಅಸೀಮ ಮಾನವತೆಯ ಸೌರಭವನ್ನು ಅದರಲ್ಲಿ ಕಂಡುಕೊಂಡಿದ್ದರು. ವ್ಯಷ್ಟಿಪ್ರಜ್ಞೆ ಮತ್ತು ಸಮಷ್ಟಿ ಪ್ರಜ್ಞೆ ಬೇರೆ ಬೇರೆ ಅಲ್ಲ. ಅರ್ಥಾತ್ ವೈಯಕ್ತಿಕತೆ ಮತ್ತು ಸಾರ್ವತ್ರಿಕತೆ ಬೇರೆ ಬೇರೆ ಅಲ್ಲ; ಎನ್ನುವುದೇ ‘ತತ್ವಮಸಿ’ ಮತ್ತು ‘ಅಹಂ ಬ್ರಹ್ಮಾಸಿ’ ಇತ್ಯಾದಿ ವೇದಾಂತವಾಕ್ಯಗಳ ಅರ್ಥ. ವೈಯಕ್ತಿಕತೆ ಎಂಬುದೇ ಮಿಥ್ಯ, ‘ಜೀವೋ ಬ್ರಹ್ಮೈವ ನಾಪರಃ ’ ಎನ್ನುವುದೇ ಸತ್ಯ ‘Absolute individuality is a myth’ ಎನ್ನುವುದು ಆಧುನಿಕ ವಿಜ್ಞಾನ ಕಂಡುಕೊಂಡ ಒಂದು ಸತ್ಯವೂ ಸಹ. ಇದು ವಿಶ್ವವಿಖ್ಯಾತ Bell theoremನ್ನು ಪ್ರಸ್ತುತಪಡಿಸಿದ ಬ್ರಿಟಿಷ್ ವಿಜ್ಞಾನಿ ಡೇವಿಡ್ ಬ್ಹಾಮ್ ಮಾತುಗಳಿಂದ ಸಮರ್ಥನೆಗೊಂಡಿದೆ.
ಇಷ್ಟು ವೈಜ್ಞಾನಿಕತೆ ಮತ್ತು ವೈಶಾಲ್ಯಗಳನ್ನು ಧರ್ಮವೊಂದರಲ್ಲಿ ಪಾಶ್ಚಾತ್ಯರು ಎಂದೂ ಊಹಿಸಿರಲಿಲ್ಲ. ಅವರ ಪ್ರತಿಸ್ಪಂದನವೂ ಅಷ್ಟೇ ರಭಸ ಹಾಗೂ instantaneous ಆಗಿತ್ತು ಕೂಡ. ವಿಲ್ ಡ್ಯೂರಂಟ್, ಎಚ್.ಜಿ.ವೇಲ್ಸ್, ಅರ್ನಾಲ್ಡ್ ಟಾಯ್ನಬಿ, ಲಿಯೊ ಟಾಲ್ಸ್ಟಾಯ್, ರೊಮೈ ರೊಲಾ ಇತ್ಯಾದಿ ಪಾಶ್ಚಾತ್ಯ ಚಿಂತಕರು ಭಾರತದ ಬಗ್ಗೆ ಕೊಟ್ಟ ಅನಿಸಿಕೆಗಳಲ್ಲೂ ಅಷ್ಟೇ ಏಕೆ, ವಿಜ್ಞಾನ ಪ್ರಪಂಚದ ಧ್ರುವತಾರೆಗಳಾದ ಐನ್ಸ್ಟೀನ್, ರಾಬರ್ಟ್ ಓಪನೀಮರ್, ಷ್ರೋಡಿಂಜರ್, ಫ್ರೆಡ್ರಿಕ್ ಮ್ಯಾಕ್ಸ್ ಮುಲ್ಲರ್, ಮಾರ್ಕ್ ಟ್ವೇನ್, ಬರ್ನಾರ್ಡ್ ಷಾ ಇವರೆಲ್ಲ ಭಾರತವನ್ನು ಜಗತ್ತಿನ ಮಾರ್ಗದರ್ಶಕನಂತೆ, ಹಿರಿಯಣ್ಣನಂತೆ, ಗುರುವಿನಂತೆ ಕಂಡರು. ಐನ್ಸ್ಟೀನ್ರಂತೂ ‘ನಾವು ಭಾರತೀಯರಿಗೆ ಬಹಳಷ್ಟು ಋಣಿಗಳಾಗಿದ್ದೇವೆ’ ಎಂದು ಉದ್ಗರಿಸಿದರು. ಅಗ್ರಪಂಕ್ತಿಯ ಇತಿಹಾಸಕಾರ ವಿಲ್ ಡ್ಯೂರೆಂಟ್ ಅವರು ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಕೆಂದು ಇಂಗ್ಲೆಂಡಿನ ಮೇಲೆ ಅಂತಾರಾಷ್ಟ್ರೀಯ ಒತ್ತಡ ತರಲು ಇಂಗ್ಲೆಂಡ್ ಎಷ್ಟರಮಟ್ಟಿಗೆ ಭಾರತದ ರಕ್ತವನ್ನೇ ಹೀರುತ್ತಿದೆ ಎನ್ನುವ ಅಂಕಿ ಅಂಶಗಳನ್ನು ಒಳಗೊಂಡ ‘"The case for India' ’ ಎಂಬ ಹೊತ್ತಿಗೆಯನ್ನೇ ರಚಿಸಿದರು.
ಇಷ್ಟೆಲ್ಲಾ ಸಾಧನೆಯಾಗಿದ್ದು- ಪಾಶ್ಚಾತ್ಯರಿಗೆ ‘ಭಾರತ ಏನು’ ಎಂಬ ಅರಿವು ಮೂಡಿದ ಮೇಲೆ. ಆ ಅರಿವಿನ ಮೂಲ ಭಾರತದ ಧರ್ಮ (ಧಾರ್ವಿುಕ ಪ್ರಜ್ಞೆ ) ಮತ್ತು ಅದನ್ನು ಮೂಡಿಸಿದ್ದು ಒಬ್ಬ ಸನ್ಯಾಸಿ ಅರ್ಥಾತ್ ಒಬ್ಬ ಧಾರ್ವಿುಕ ಮುಖಂಡ. ಭಾರತ, ಭಾರತೀಯ ಧಾರ್ವಿುಕ ಪ್ರಜ್ಞೆ ಮತ್ತು ವಿಶ್ವಪ್ರಜ್ಞೆಗೆ ವ್ಯತ್ಯಾಸವೇ ಕಾಣಲಿಲ್ಲ -ಮೇಲೆ ಹೆಸರಿಸಿದ ಯಾವುದೇ ಮುತ್ಸದ್ದಿಗಳಿಗೆ. ಏಕೆಂದರೆ ಅದು ಇರುವುದು ಹಾಗೆಯೇ.
ಪಶ್ಚಿಮದಲ್ಲಿ ವಿವೇಕಾನಂದ ಪ್ರಣೀತ ಈ ಭಾವೋತ್ಕರ್ಷದಿಂದ ಹೊರಹೊಮ್ಮುತ್ತಿದ್ದ ಬೌದ್ಧಿಕ ಮತ್ತು ಆಧ್ಯಾತ್ಮಿಕ ಬಿರುಗಾಳಿ ಬೃಹತ್ ಕಂಪನಗಳನ್ನು ಮೂಡಿಸುತ್ತಿದ್ದ ಪರಿ ಕಂಡು ಪತ್ರಿಕೆಗಳು ಅವರನ್ನು ಕರೆದಿದ್ದು Cyclonic Monk ಎಂದು. ಅವರ ಒಂದೊಂದು ವಾಕ್ಯವೂ ಪತ್ರಿಕೆಗಳ ಮುಖಪುಟವನ್ನು ಅಲಂಕರಿಸುತ್ತಿದ್ದರೆ ಅದರ ಪ್ರತಿಧ್ವನಿಯಾಗಿ ಭಾರತೀಯ ಪತ್ರಿಕೆಗಳು ಹೆಮ್ಮೆಯಿಂದ ಅವುಗಳನ್ನು ಮುದ್ರಿಸುತ್ತಿದ್ದವು. ಆದ್ದರಿಂದಲೇ ಅವರು ಭಾರತಕ್ಕೆ ಹಿಂದಿರುಗಿದಾಗ ಸಮಸ್ತ ಹಿಂದೂ ಜನಾಂಗ ಅವರನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತಿತ್ತು. ಏಡನ್ನಿಂದ ಬಂದಿದ್ದ ಮರಾಠಿ ಯುವಕ ರಾವೋಜಿ ರಾವ್ ಮುಂದೆ ಅವರ ಶಿಷ್ಯನಾಗಿ ಸ್ವಾಮಿ ನಿಶ್ಚಯಾನಂದ ಆದ.
1897ರ ಜನವರಿ 26 ರಂದು ರಾಮೇಶ್ವರದಲ್ಲಿ ಮೊಳಗಿದ ಪಾಂಚಜನ್ಯಕ್ಕೆ ಇಷ್ಟು ಅದ್ಭುತವಾದ ಹಿನ್ನೆಲೆ ಇದೆ. ಪಾಂಚಜನ್ಯದ ಗರ್ಜನೆ ವ್ಯರ್ಥವಾಗುವುದೆಂತು?! ದೇಶದ ಉದ್ದಗಲಕ್ಕೂ ಜನ ಭಾವಿಸಿದರು- ‘ನಾವು ಸಾಮಾನ್ಯರಲ್ಲ’. ‘ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ’ ಎಂಬ ಈ ಮೊಳಗು ಯಾವ ರೀತಿಯಲ್ಲೂ ಅರ್ಥೈಸಬಹುದಿತ್ತು. ಸುಭಾಷ್ ಚಂದ್ರ ಬೋಸರಿಗೆ ಅದು ಕ್ರಾಂತಿಯ ಕರೆ; ಗಾಂಧೀಜಿಯವರಿಗೆ ಅಸ್ಪೃ್ಯತೆಯ ನಿವಾರಣೆ ಮತ್ತು ಹರಿಜನೋದ್ಧಾರ; ಸೋದರಿ ನಿವೇದಿತೆಗೆ ಭಾರತೀಯ ಸ್ತ್ರೀಯರ ಪುನರುತ್ಥಾನ; ಮತ್ತೆ ಕೆಲವರಿಗೆ ಬ್ರಿಟೀಷರ ನೊಗ ಕಿತ್ತೊಗೆಯಲು ಬಂದ ಕರೆ! ಹೇಗಾದರೂ ಸರಿ ಭಾರತೀಯ ಅಸ್ಮಿತೆಯ ಪುನರುತ್ಥಾನ ಮತ್ತು ಪುನರ್ವಶ.
ಇದೇ ಸನಾತನ ಧರ್ಮದ ತಿರುಳು. ಯಾವ ಧರ್ಮ ‘ವಿಕಸನವೇ ಜೀವನ, ಸಂಕುಚಿತತೆಯೇ ಮರಣ’ ಎನ್ನುತ್ತೋ ಅದಕ್ಕಿಂತಲೂ ‘ವಿಶ್ವಪ್ರಜ್ಞೆಯ’ ಭದ್ರ ಬುನಾದಿಯಾದರೂ ಎಲ್ಲಿ ಸಿಗಬಲ್ಲದು? ಹಾಗೆಯೇ ‘ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ’ ಎನ್ನುವ ಸಂದೇಶದಲ್ಲಿ ದಾಸ್ಯ, ಅಸಹಾಯಕತೆ, ದೈನ್ಯತೆಗಳಿಗೆ ಸ್ಥಾನವೆಲ್ಲಿ? ವೈಯಕ್ತಿಕತೆಯೇ ಪ್ರಶ್ನಾರ್ಹ ಎನ್ನುವ ತತ್ವದಲ್ಲಿ ರಾಷ್ಟ್ರಹಿತ, ಸಾಮಾಜಿಕ ಹಿತಗಳಿಗೆ ತೊಡಕೆಲ್ಲಿ? ತತ್ವಾಧಾರಿತ ಧರ್ಮವೊಂದು ವೈಜ್ಞಾನಿಕ ವಿಶ್ಲೇಷಣೆ ಹಾಗೂ ಪರಿಶೀಲನೆಗಳಿಗೆ ಎಂದಿಗೂ ಹೆದರುವುದಿಲ್ಲ ಅರ್ಥಾತ್ ಅದೊಂದು ಅದ್ಭುತ ವೈಜ್ಞಾನಿಕ ಧರ್ಮ. ಆಧುನಿಕ ಯುಗ ಮತ್ತು ತಲೆಮಾರುಗಳು ಇಂಥ ಧರ್ಮವನ್ನೇ ಬಯಸುವುದು. ಏಕೆಂದರೆ ಅದು ಮಾತ್ರವೇ ವಿಶ್ವಧರ್ಮ, ಮಾನವಧರ್ಮ. ಬೇರೆಲ್ಲವೂ ಮತಗಳಾಗಬಹುದು ಇಲ್ಲವೇ ಪಂಥಗಳಾಗಬಹುದು. ಇವೆಲ್ಲವೂ ತಿಳಿಯಬೇಕಾದರೆ ಸತ್ಯನಿಷ್ಠೆ ಮತ್ತು ಪೂರ್ವಾಗ್ರಹರಾಹಿತ್ಯ ಬಹಳ ಮುಖ್ಯ.
(ಲೇಖಕರು ಖ್ಯಾತ ಪ್ರವಚನಕಾರರು)