ನ್ಯೂಸ್

ಹೊಂದಾಣಿಕೆಯಿದ್ದರೆ ಸುಖ ಸಂಸಾರ

ಗಂಡು ಮತ್ತು ಹೆಣ್ಣಿನ ನಡುವೆ ಹೊಂದಾಣಿಕೆ ಬದುಕು ಮುಖ್ಯ. ಆಗ ಮಾತ್ರ ಆನಂದಮಯ ಸಂಸಾರ ನಡೆಸಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಡಾ.ಶಶಿಕಲಾ ವಸ್ತ್ರದ ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕ, ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಶಿಕ್ಷಣ ಸಂಸ್ಥೆಗಳ ವಸತಿ ನಿಲಯದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನದ ಕಾರ್ಯಕ್ರಮದಲ್ಲಿ ‘ಹೆಣ್ಣು ಮಕ್ಕಳು ಮತ್ತು ಆತ್ಮವಿಕಾಸ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಮಹಿಳೆಯರು ಪುರುಷರಷ್ಟೇ ಸರಿಸಮಾನವಾಗಿ ಕಾರ್ಯ ನಿರ್ವಹಿಸುವ ಮೂಲಕ ಹೆಣ್ಣು ಅಬಲೆ ಅಲ್ಲ; ಸಬಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಪುರುಷರಷ್ಟೇ ಹೆಣ್ಣು ಕೂಡ ಶಕ್ತಿವಂತಳಾಗಿದ್ದಾಳೆ. ಎಲ್ಲವನ್ನು ನಿಭಾಯಿಸುವ ಸಾಮರ್ಥ್ಯ ಇದೆ. ಹಾಗಾಗಿ ಯಾವುದೇ ಗಂಡಸು ತನ್ನ ಪತ್ನಿಯ ಕೆಲಸಗಳಿಗೆ ವಿರೋಧ ವ್ಯಕ್ತ ಪಡಿಸಬಾರದು. ಆಕೆಯ ವಿರುದ್ಧ ದರ್ಪವನ್ನೂ ತೋರಬಾರದು. ಇಬ್ಬರ ನಡುವೆ ಏನೇ ಆದರೂ ಮಾತುಕತೆ ಮೂಲಕವೇ ಬಗೆಹರಿಸಕೊಳ್ಳಬೇಕು. ಆ ಮೂಲಕ ಹೊಂದಾಣಿಕೆ ಜೀವನ ನಡೆಸಬೇಕು. ಆಗ ಜೀವದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ದೊರೆಯುತ್ತದೆ ಎಂದರು.

ಹೆಣ್ಣು ಮಕ್ಕಳು ಹರಟೆಯನ್ನು ಬಿಟ್ಟು ಹೆಚ್ಚು ಹೆಚ್ಚು ಓದಬೇಕು. ಹೆಚ್ಚು ಓದಿದರೆ ವೈಚಾರಿಕತೆ ಬೆಳೆಯುತ್ತದೆ. ತಪ್ಪು ಮಾಡಿದಾಗ ಪುರುಷರನ್ನು ಪ್ರಶ್ನಿಸುವ ಗುಣವೂ ಬರುತ್ತದೆ ಎಂದರು.

ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಮೊದಲ ಬಾರಿಗೆ ಸ್ತ್ರೀವಾದ ಪ್ರತಿಪಾದಿಸಲಾಗಿದೆ. ಆದರೆ ಕೆಲವರು ಇದು ಪಾಶ್ಚಿಮಾತ್ಯರ ಅನುಕರಣೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.

ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಶಾರದಾ ಶಿವಲಿಂಗಸ್ವಾಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸರಸ್ವತಿ ಬೇಗಂ, ನಿಲಯ ಪಾಲಕಿ ಮಮತಾ ಸುರೇಶ್ ಇತರರಿದ್ದರು.