ಪಿರಿಯಾಪಟ್ಟಣದ ಚೈತನ್ಯ ಚಾರಿಟಬಲ್ ಟ್ರಸ್ಟ್‌ನ ಅಮಲ್ ಜ್ಯೋತಿ ಬಾಲಕಿಯರ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಮುಲ್ ಅಧ್ಯಕ್ಷ ಪಿಎಂ ಪ್ರಸನ್ನ ಮಾತನಾಡಿದರು. ಎಚ್.ಡಿ.ರಾಜೇಂದ್ರ, ಸಿಸ್ಟರ್ ಅಲ್ ಪಾನ್ಸೋ, ಡಾ.ಸತೀಶ್, ನಿಶ್ಚಿತ್, ತುಳಸಿ ಕುಮಾರ್, ನಂದಿನಿ, ಜಯಂತ್, ಆಕಾಶ್, ಶ್ರೀಕಾಂತ್ ಇದ್ದರು. 
ನ್ಯೂಸ್

ಹೈನುಗಾರಿಕೆಯಿಂದ ಜೀವನ ನಡೆಸುತ್ತಿರುವ ಶತಕೋಟಿ ಜನ

ಪಿರಿಯಾಪಟ್ಟಣ: ವಿಶ್ವದಲ್ಲಿ ಒಂದು ಶತಕೋಟಿಗೂ ಹೆಚ್ಚು ಜನರು ಹೈನುಗಾರಿಕೆಯಿಂದ ಜೀವನೋಪಾಯ ಕಂಡುಕೊಂಡಿದ್ದಾರೆ ಎಂದು ಮನ್ಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಅಭಿಪ್ರಾಯಪಟ್ಟರು.

ವಿಶ್ವ ಹಾಲು ದಿನಾಚರಣೆ ಅಂಗವಾಗಿ ಮೈಮುಲ್ ವತಿಯಿಂದ ಪಟ್ಟಣದ ಚೈತನ್ಯ ಚಾರಿಟಬಲ್ ಟ್ರಸ್ಟ್‌ನ ಅಮಲ್ ಜ್ಯೋತಿ ಬಾಲಕಿಯರ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾಲಿನಿಂದ ಶರೀರದ ಬೆಳವಣಿಗೆ ಬೇಕಾಗುವ ಪೋಷಕಾಂಶ ಸಿಗಲಿದೆ. ಹಾಲು ಸಮತೋಲನ ಆಹಾರವಾಗಿದ್ದು, ಇದರಲ್ಲಿ ಕೊಬ್ಬು, ಪ್ರೋಟೀನ್, ಸಕ್ಕರೆ ಅಂಶ, ವಿವಿಧ ಖನಿಜಾಂಶಗಳು ಹಾಗೂ ಹಲವಾರು ವಿಟಮಿನ್‌ಗಳಿವೆ. ಇದರಿಂದ ಮಾನವನ ದೇಹಕ್ಕೆ ಬೇಕಾಗುವ ಎಲ್ಲ ರೀತಿಯ ಪೋಷಕಾಂಶಗಳು ಸಿಗಲಿವೆ ಎಂದರು.

ಮೈಸೂರು ಹಾಲು ಒಕ್ಕೂಟ ನಿತ್ಯ 7.47 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ಇದರಲ್ಲಿ 2.86 ಲಕ್ಷ ಲೀಟರ್ ಹಾಲನ್ನು ಪ್ಯಾಕೆಟ್ ರೂಪದಲ್ಲಿ ಹಾಗೂ 78 ಸಾವಿರ ಕೆಜಿ ಮೊಸರನ್ನು ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಗ್ರಾಹಕರು ನಂದಿನಿ ಉತ್ಪನ್ನಗಳನ್ನೇ ಬಳಸುವ ಮೂಲಕ ಹೈನೋದ್ಯಮಕ್ಕೆ ಸಹಕಾರ ನೀಡಬೇಕು. ಹಾಲನ್ನು ಕರೆದ ನಂತರ ಸಂಸ್ಕರಿಸದೆ ಇದ್ದಲ್ಲಿ ಹಾಲಿನಲ್ಲಿರುವ ಬ್ಯಾಕ್ಟಿರಿಯಾಗಳು ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಎಲ್ಲ ಡೇರಿಗಳಲ್ಲಿ ಹಾಲನ್ನು ಸಂಸ್ಕರಿಸಿ ಪಾಶ್ಚರೀಕರಣಗೊಳಿಸುವ ಮೂಲಕ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ ಎಂದರು.

ಹಾಲು ಉತ್ಪಾದಕರಿಗೆ ವ್ಯವಸ್ಥಿತವಾದ ಮಾರುಕಟ್ಟೆ ವ್ಯವಸ್ಥೆ ಒದಗಿಸಲಾಗಿದ್ದು, ಗುಣಮಟ್ಟದ ಆಧಾರದಲ್ಲಿ ಸರಬರಾಜು ಮಾಡುವ ಹಾಲಿಗೆ ಪ್ರತಿ ವಾರ ದರ ಪಾವತಿಸಲಾಗುತ್ತಿದೆ ಎಂದರು.

ಮೈಮುಲ್ ನಿರ್ದೇಶಕ ಎಚ್.ಡಿ.ರಾಜೇಂದ್ರ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಆಹಾರವಾಗಿ ಹಾಲಿನ ಮಹತ್ವ ಗುರುತಿಸಲು ಹಾಗೂ ಡೇರಿ ಕ್ಷೇತ್ರವನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ 2001ರಲ್ಲಿ ಪ್ರತಿ ವರ್ಷ ಜೂನ್ 1ಅನ್ನು ವಿಶ್ವ ಹಾಲು ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಟ್ರಸ್ಟ್‌ನ ಸಿಸ್ಟರ್ ಅಲ್ ಪಾನ್ಸೋ, ಸಿಸ್ಟರ್ ಲೈಸಾ, ಸಿಸ್ಟರ್ ಆಲೀಸ್, ಮೈಮುಲ್‌ನ ಪಶು ವೈದ್ಯ ಡಾ.ಸತೀಶ್, ಕ್ಷೇತ್ರ ವಿಸ್ತರಣಾಧಿಕಾರಿಗಳಾದ ನಿಶ್ಚಿತ್, ತುಳಸಿ ಕುಮಾರ್, ನಂದಿನಿ, ಜಯಂತ್, ಆಕಾಶ್, ಶ್ರೀಕಾಂತ್, ಮುಖಂಡರಾದ ಅಪೂರ್ವ ಮೋಹನ್, ಸಿಂಧು ಗೌಡ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.