ಸೋನಿಯಾ ಭೇಟಿ ಬಳಿಕ ಗುಲಾಂ ನಬಿ ಆಜಾದ್  
ನ್ಯೂಸ್

ಹೈಕಮಾಂಡ್ ಬಗ್ಗೆ ತಕರಾರಿಲ್ಲ ಎಂದ ಗುಲಾಂ ನಬಿ ಆಜಾದ್

ನವದೆಹಲಿ: ಕಾಂಗ್ರೆಸ್ ನಾಯಕತ್ವದ ವಿರುದ್ಧ ಬಂಡಾಯ ಎದ್ದ ಜಿ-23 ನಾಯಕರ ಪೈಕಿ ಗುಲಾಂ ನಬಿ ಆಜಾದ್ ಶುಕ್ರವಾರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಒಂದೇ ಪಕ್ಷ. ಅದರಲ್ಲಿ ಬಣಗಳಿಲ್ಲ. ನಾಯಕತ್ವದ ಬಗ್ಗೆ ನಮ್ಮ ತಕರಾರಿಲ್ಲ. ಸಾಮೂಹಿಕ ಹೊಣೆಗಾರಿಕೆಯೊಂದಿಗೆ ಪಕ್ಷವನ್ನು ಮುನ್ನಡೆಸಬೇಕಾದ್ದು ಇಂದಿನ ತುರ್ತು ಅಗತ್ಯ. ಇದನ್ನು ಪಕ್ಷದ ಹೈಕಮಾಂಡ್​ಗೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಪಂಚರಾಜ್ಯ ಚುನಾವಣಾ ಸೋಲಿನ ಬಳಿನ ನಡೆದ ಸಭೆಯಲ್ಲೂ ಕೆಲ ನಾಯಕರು ನಾಯಕತ್ವ ವಿಚಾರ ಪ್ರಸ್ತಾಪಿಸಿದ್ದರು. ಈ ಬೆನ್ನಲ್ಲೇ ಜಿ-23 ನಾಯಕರು ಎರಡು ಬಾರಿ ಸಭೆ ನಡೆಸಿದ್ದು ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿತ್ತು. ಈ ಸಭೆಯಲ್ಲಿ ಶಶಿ ತರೂರ್ ಕೂಡ ಭಾಗಿಯಾಗಿದ್ದುದು ಅಚ್ಚರಿಕೆ ಕಾರಣವಾಗಿತ್ತು. ಕಾಂಗ್ರೆಸ್​ನಲ್ಲಿ ಭಿನ್ನಮತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಹೈಕಮಾಂಡ್, ಈಗ ಅತೃಪ್ತರ ಮನವೊಲಿಕೆಗೆ ಯತ್ನ ನಡೆಸಿದೆ. ಮೊದಲ ಯತ್ನವಾಗಿ ಗುಲಾಂ ನಬಿ ಆಜಾದ್ ಜತೆ ಮಾತುಕತೆ ನಡೆಸಿದೆ ಎನ್ನಲಾಗಿದೆ.

25ಕ್ಕೆ ಯೋಗಿ ಸರ್ಕಾರ ರಚನೆ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರು ಮಾರ್ಚ್ 25ರಂದು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಲಖನೌನ 50,000 ಆಸನ ಸಾಮರ್ಥ್ಯದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ 200 ವಿವಿಐಪಿಗಳು ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಷಾ ಮತ್ತು ಬಿಜೆಪಿ ಆಳ್ವಿಕೆಯ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಪಂಜಾಬ್ ಸಂಪುಟ ರಚನೆ ಇಂದು: ಪಂಜಾಬ್​ನಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ)ಯ ಸರ್ಕಾರ ರಚನೆ ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಮುಖ್ಯಮಂತ್ರಿಯಾಗಿ ಭಗವಂತ್ ಮನ್ ಮಾ.16ರಂದೇ ಪ್ರಮಾಣ ವಚನ ಸ್ವೀಕರಿಸಿದ್ದರು. ಶನಿವಾರ 10 ಸಚಿವರು ಸಂಪುಟ ಸೇರುತ್ತಿದ್ದು, ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೊದಲ ಸಚಿವ ಸಂಪುಟ ಸಮಿತಿ ಸಭೆ ಮಧ್ಯಾಹ್ನ 12.30ಕ್ಕೆ ನಡೆಯಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಯಾವುದೇ ಮೈತ್ರಿಯಲ್ಲಿ ಕಿರಿಯ ಪಕ್ಷವಾಗಿ ಸೇರಿಕೊಳ್ಳಲು ಕಾಂಗ್ರೆಸ್ ಸಿದ್ಧವಿದೆ. ಬಿಜೆಪಿ ವಿರುದ್ಧ ಹೋರಾಟ ನಮಗೆ ಮುಖ್ಯ. ಅದಕ್ಕಾಗಿ ಹೊಂದಾಣಿಕೆ ಮಾಡಿಕೊಂಡು ರಾಜಕೀಯ ನಡೆಸಲು ಪಕ್ಷ ಸಿದ್ಧವಾಗಿದೆ. | ಪಿ.ಚಿದಂಬರಂ ಕಾಂಗ್ರೆಸ್ ನಾಯಕ

ಜಿ-23 ನಾಯಕರ ಬೇಡಿಕೆ ಏನು?

ಗುಲಾಂ ನಬಿ ಆಜಾದ್ ಮತ್ತು ಭೂಪಿಂದರ್ ಸಿಂಗ್ ಹೂಡಾ ಅವರ ನೇತೃತ್ವದಲ್ಲಿ ಈ ವಾರ ಪೂರ್ತಿ ಸರಣಿ ಸಭೆ ನಡೆಸಿದ್ದ ಜಿ-23 ನಾಯಕರು ಪಕ್ಷದ ವರಿಷ್ಠರಿಗೆ ಕೆಲವೊಂದು ಬೇಡಿಕೆಗಳನ್ನು ಸಲ್ಲಿಸಿದ್ದಾರೆ.

  • ಪಕ್ಷ ಸಂಘಟನೆ ಬಲಪಡಿಸುವುದಕ್ಕೆ ಎಲ್ಲ ಹಂತಗಳಲ್ಲೂ ದೃಢ ಪ್ರಸ್ತಾವನೆ ಮತ್ತು ಸಾಮೂಹಿಕ ನಾಯಕತ್ವದ ಅಗತ್ಯವಿದೆ.
  • ಬಿಜೆಪಿಯನ್ನು ಎದುರಿಸುವುದಕ್ಕಾಗಿ ಪಕ್ಷವನ್ನು ಬಲಪಡಿಸಬೇಕಾದ ಅಗತ್ಯವಿದೆ. 2024ರ ಲೋಕಸಭೆ ಚುನಾವಣೆಗೆ ಮೊದಲೇ ಸಮಾನ ಮನಸ್ಕ ಪಕ್ಷಗಳ ಜತೆಗೆ ಸಂಪರ್ಕ ಸಾಧಿಸಿ ಬಿಜೆಪಿ ವಿರುದ್ಧ ಪರ್ಯಾಯ ಸಂಘಟನೆ ರೂಪಿಸಬೇಕು.
  • ಸಂಘಟನೆಯ ಮರುವಿನ್ಯಾಸವನ್ನು ಆದಷ್ಟು ಬೇಗ ಆದ್ಯತೆ ಮೇರೆಗೆ ನಡೆಸಬೇಕು. ಪಕ್ಷ ಬಲಪಡಿಸುವ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಲೇ ಬಾರದು.