ನ್ಯೂಸ್

ಹೇಸರಗತ್ತೆ ಖಾತೆ ವಂಚನೆ ಸುಳಿಗೆ ಅಮಾಯಕರು

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಸೈಬರ್ ವಂಚನೆ ಇಂತಹದ್ದೇ ಎಂದು ಗುರುತಿಸುವ ವೇಳೆಗೆ ಮತ್ತೊಂದು ಜಾಲದೊಳಗೆ ಅಮಾಯಕರನ್ನು ಕೆಡವಿ ಹಣ ದೋಚುವ ದುರುಳರ ನಡೆ ಆತಂಕಕಾರಿಯಾಗಿದೆ.

ಸೈಬರ್ ಪೊಲೀಸರು ಚಾಪೆ ಕೆಳಗೆ ನುಸುಳುವ ವೇಳೆಗೆ ದುಷ್ಕರ್ಮಿಗಳು ರಂಗೋಲಿ ಕೆಳಗೆ ನುಸುಳಿ ವಂಚನೆ ಹಣ ಸಾಗಾಟಕ್ಕೆ ಹೇಸರಗತ್ತೆ ಬ್ಯಾಂಕ್ ಖಾತೆಗಳನ್ನು(ಖಿಔಉ ಅಇಇಖಿಘೆ)ಬಳಸಿ ಅಮಾಯಕ ವಿದ್ಯಾರ್ಥಿಗಳು, ಸಾರ್ವಜನಿಕರನ್ನು ಯಾಮಾರಿಸುತ್ತಿದ್ದಾರೆ.

ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆ. ಅದಕ್ಕೆ ಕಮಿಷನ್ ಕೊಡುತ್ತೇವೆ ಎಂದು ನಂಬಿಸಿ ಕ್ಷಣಮಾತ್ರದಲ್ಲಿ ವಂಚನೆ ಮೊತ್ತವನ್ನು ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸಿಕೊಂಡು ಪರಾರಿಯಾಗುತ್ತಿದ್ದಾರೆ. ಇದರ ಅರಿವಿಲ್ಲದೆ ಕಮಿಷನ್ ಆಸೆಗೆ ಬಿದ್ದ ಖಾತೆದಾರರು ಕಾನೂನು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಪೊಲೀಸರು ಖಾತೆದಾರರನ್ನೇ ವಂಚನೆ ಫಲಾನುಭವಿಗಳೆಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸುವುದು ನಡೆದಿದೆ. ದುರ್ಗದಲ್ಲೂ ಇಂಥ ವಂಚನೆ ಜಾಲಕ್ಕೆ ಸಿಲುಕಿರುವ ಪ್ರಕರಣಗಳ ತನಿಖೆ ನಡೆಯುತ್ತಿದೆ.

ತಮ್ಮ ಹೆಸರಲ್ಲಿರುವ ಬ್ಯಾಂಕ್ ಖಾತೆ, ಹೊಸದಾಗಿ ಖಾತೆ ತೆರೆದು ವಂಚಕರಿಗೆ ಕಮಿಷನ್ ಆಸೆಗೆ ಕೊಡುವಂಥ ಖಾತೆಗಳನ್ನು ಸೈಬರ್ ಪೊಲೀಸರು ಹೇಸರಗತ್ತೆ ಖಾತೆಗಳೆಂದು ಪರಿಗಣಿಸುತ್ತಾರೆ. ಅಪರಿಚಿತರಿಂದ ತಮ್ಮ ಖಾತೆಗೆ ಹಣ ಹಾಕಿಸಿ ಅವರು ಅದನ್ನು ನಗದಾಗಿ ಪ ರಿವರ್ತಿಸಿಕೊಳ್ಳಲು ಅವಕಾಶ ನೀಡಬಾರದು. ಎಟಿಎಂ ಕಾರ್ಡ್, ಒಟಿಪಿ, ಸಿವಿವಿ, ಎಕ್ಸ್‌ಪೈರಿ ಡೇಟ್ ಇತ್ಯಾದಿ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಸೈಬರ್ ಪೊಲೀಸರು ಪದೇಪದೆ ಎಚ್ಚರಿಸುತ್ತಿದ್ದರೂ ವಂಚನೆ ಸುಳಿಗೆ ಅಮಾಯಕರು ಸಿಲುಕುವುದು ನಡೆದೇ ಇದೆ. ತಮ್ಮ ಹೆಸರಲ್ಲಿ ಮೊಬೈಲ್‌ಸಿಮ್ ಕೊಡುವುದು ಕೂಡ ಅಪರಾಧವಾಗಿದೆ.

ಠೇವಣಿ ಹಣ ಡಬಲ್ ಮಾಡಿಕೊಡುವುದಾಗಿ ಹೇಳಿದ್ದ ಕಂಪನಿಯೊಂದರ ಮಾತಿಗೆ ಮರುಳಾಗಿ ಸಾವಿರಾರು ಜನರು ಕೋಟ್ಯಂತರ ರೂ.ಹಣ ಕಳೆದುಕೊಂಡಿದ್ದ ಪ್ರಕರಣ ಸೇರಿ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಈವರೆಗೆ 125 ಅಪರಾಧ ಪ್ರಕರಣಗಳು ದಾಖಲಾಗಿವೆ. ವಂಚನೆಯ 5.76 ಕೋಟಿ ರೂ. ಪೈಕಿ ಸಂತ್ರಸ್ತರಿಗೆ 1.57 ಕೋಟಿ ರೂ.ಹಿಂತಿರುಗಿಸಲಾಗಿದೆ.

ಇದೇ ಅವಧಿಯಲ್ಲಿ ಹಣ ವಂಚನೆ ಹೊರತಾಗಿ ಇತರೆ 15 ಸೈಬರ್ ಅಪರಾಧ ಪ್ರಕರಣಗಳ ತನಿಖೆ ನಡೆಯುತ್ತಿದ್ದು, 7 ರಲ್ಲಿ ಆರೋ ಪಪಟ್ಟಿ ಸಲ್ಲಿಕೆಯಾಗಿದೆ. ದಾಖಲಾದ ಪ್ರಕರಣಗಳಲ್ಲಿ ರಿವೇಂಜ್ ಪೋರ್ನ್, ಚೈಲ್ಡ್‌ಪೋರ್ನೋಗ್ರಫಿ ಪ್ರಕರಣಗಳೂ ಸೇರಿವೆ. ಪ್ರಸಕ್ತ ಸಾ ಲಿನಲ್ಲಿ ನಾಗರಿಕರು ಕಳೆದುಕೊಂಡಿದ್ದ 430 ಮೊಬೈಲ್‌ಗಳನ್ನು ಚಿತ್ರದುರ್ಗ ಸೈಬರ್ ಪೊಲೀಸರು ಸಿಒಐಆರ್ ಪೋರ್ಟಲ್ ಮೂಲಕ ರಾಜ್ಯ, ಅಂತಾರಾಜ್ಯಗಳಲ್ಲಿ ಪತ್ತೆ ಮಾಡಿದ್ದಾರೆ.

ಸೈಬರ್ ಪೊಲೀಸರ ಸಲಹೆಗಳು ಏನು?

*ಯಾವುದೇ ಕಾರಣಕ್ಕೂ ಅನ್ಯರಿಗೆ ಬ್ಯಾಂಕ್ ಖಾತೆ ವಿವರ ಕೊಡಬೇಡಿ.

*ಅಶ್ಲೀಲ ಚಿತ್ರೀಕರಣ, ರವಾನೆ ಅನಾಹುತಕ್ಕೆ ದಾರಿ, ಅಪ್ರಾಪ್ತರ ಅಶ್ಲೀಲ ದೃಶ್ಯ ವೀಕ್ಷಣೆ, ಶೇಖರಣೆ ಪೋಕ್ಸೋ, ಐಟಿ ಆಕ್ಟ್ ಅಡಿ ಅಪರಾಧ.

* ವಾಟ್ಸ್‌ಆ್ಯಪ್, ಸ್ಕೈಪ್, ಕೊರಿಯರ್ ಮೂಲಕ ತಾವು ಐಟಿ, ಇಡಿ, ಟ್ರಾಯ್, ಸಿಬಿಐ ಮೊದಲಾದ ಅಧಿಕಾರಿಗಳೆಂದು ಬರುವಂಥ ಕರೆ, ವಿಡಿಯೋ ಕರೆಗಳ ಮೂಲಕ ಬರುವಂಥ ಡಿಜಿಟಲ್ ಅರೆಸ್ಟ್ ಬೆದರಿಕೆಗೆ ಜಗ್ಗದೆ ಪೊಲೀಸರಿಗೆ ಮಾಹಿತಿ ಕೊಡಿ.

*ಉದ್ಯೋಗ, ಟಾಸ್ಕ್ ಇತ್ಯಾದಿ ವಂಚಕ ವೆಬ್‌ಸೈಟ್‌ಗಳು, ಸಾಲದ ಆ್ಯಪ್‌ಗಳ ಡೌನ್‌ಲೋಡ್ ತಪ್ಪು. ಹೂಡಿಕೆ ವೇಳೆ ಎಚ್ಚರಿಕೆ ಅಗತ್ಯ.

---

ಕೋಟ್

ಸಾರ್ವಜನಿಕರು ಸೈಬರ್ ವಂಚನೆಗಳೆಡೆ ಸದಾ ಜಾಗೃತಿ ವಹಿಸಬೇಕು. ವಂಚಕರಿಂದ ಜಾಗೂಕರಾಗಿರಲು ಹಾಗೂ ವಂಚನೆಗೆ ಒಳಗಾದ ಲ್ಲಿ ಕೂಡಲೇ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು.

ರಂಜಿತ್‌ಕುಮಾರ್ ಬಂಡಾರು, ಎಸ್‌ಪಿ, ಚಿತ್ರದುರ್ಗ

---