ನ್ಯೂಸ್

ಹೆದ್ದಾರಿಯಲ್ಲಿ ಭೀಕರ ಅಪಘಾತ, ಮೂವರು ದುರ್ಮರಣ

ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದ ಗಣೇಶ ಹೋಟೆಲ್ ಬಳಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಭೀಕರ ಅಪಘಾತದಲ್ಲಿ ಮೂವರು ದುರ್ಮರಣಕ್ಕೀಡಾದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

ದಾವಣಗೆರೆ ಮೂಲದ ಚಾಲಕ ಶಾರೂಖ್ (27), ಸೊಹೇಲ್ (26), ಚಿಕ್ಕಮಗಳೂರು ಜಿಲ್ಲೆ ಆಲ್ದೂರಿನ ಎಚ್.ಕೆ. ಸುಶೀಲಾ (38) ಮೃತಪಟ್ಟಿದ್ದಾರೆ. ಇನ್ನೋರ್ವ ಗಾಯಗೊಂಡಿದ್ದಾನೆ.

ಅವಲಕ್ಕಿ ವ್ಯಾಪಾರ ಮಾಡಿಕೊಂಡಿದ್ದ ಇವರು ದಾವಣಗೆರೆಯಿಂದ ರಾತ್ರಿ ಹುಬ್ಬಳ್ಳಿ ಕಡೆಗೆ ಬರುತ್ತಿದ್ದಾಗ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ನಾಲ್ಕೈದು ಬಾರಿ ಪಲ್ಟಿ ಹೊಡೆದಿದೆ.

ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಕಿಮ್ಸ್ ಗೆ ದಾಖಿಲಿಸಿದ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ‌.

ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್ ರಮೇಶ ಗೋಕಾಕ, ಸಿಬ್ಬಂದಿ ಬೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.