ನ್ಯೂಸ್

ಹೆಣ್ಣು ಮಕ್ಕಳ ಸಮಸ್ಯೆಗಳ ಜಾಗೃತಿ ಅಗತ್ಯ: ಮಕ್ಕಳ ಕಲ್ಯಾಣ ಜಿಲ್ಲಾ ಸಮಿತಿ ಅಧ್ಯಕ್ಷೆ ಕಮಲಾ ಅಭಿಪ್ರಾಯ

ಮೈಸೂರು: ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ ಎಂದು ಮಕ್ಕಳ ಕಲ್ಯಾಣ ಜಿಲ್ಲಾ ಸಮಿತಿ ಅಧ್ಯಕ್ಷೆ ಕಮಲಾ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಅಂಗವಾಗಿ ಚೈಲ್ಡ್ ಲೈನ್- 1098ರಿಂದ ನಗರದ ವಾಣಿವಿಲಾಸ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ವಿಷಾದನೀಯ. ಮಕ್ಕಳ ಮನಸ್ಸು ಮುಗ್ಧ. ಅವರನ್ನು ಗೌರವದಿಂದ ಕಾಣಬೇಕು. ಶಿಕ್ಷಣ, ಪೋಷಣೆ, ಬಲವಂತದ ಬಾಲ್ಯವಿವಾಹ, ಕಾನೂನು ಹಕ್ಕುಗಳು ಮತ್ತು ವೈದ್ಯಕೀಯ ಹಕ್ಕುಗಳ ಜತೆಗೆ ಹದಿಹರೆಯದ ಹುಡುಗಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ ಎಂದು ಹೇಳಿದರು.
ಡ್ರಮ್ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ನಜರ್‌ಬಾದ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವೈಶಾಲಿ ಬಿರಾದರ್ ಮಾತನಾಡಿ, ಹದಿಹರೆಯದ ಹುಡುಗಿಯರಿಗೆ ಸಂಬಂಧಿಸಿದ ವಿಷಯಗಳ ಮೇಲೆ ಹೆಚ್ಚಿನ ಗಮನ ನೀಡುವುದು ಅಗತ್ಯ. ಹೆಣ್ಣು ಮಕ್ಕಳನ್ನು ಜೋಪಾನ ಮಾಡುವ, ಅವರ ಮೇಲೆ ನಡೆಯುವ ದೌರ್ಜನ್ಯವನ್ನು ಹೆದರಿಸುವುದು ಹೇಗೆ, ಯಾರಿಗೆ ದೂರು ನೀಡಬೇಕು ಎನ್ನುವ ಮಾಹಿತಿ ನೀಡಬೇಕು ಎಂದರು.
ಪೊಲೀಸರ ಬಗ್ಗೆ ಭಯ ಪಡೆದೆ ಭರವಸೆ ಎನ್ನುವ ಭಾವನೆ ಎಲ್ಲರಲ್ಲೂ ಮೂಡಬೇಕು. ಏನೇ ಸಮಸ್ಯೆ ಉಂಟಾದರೂ ತಂದೆ, ತಾಯಿ, ಪಾಲಕರು, ಸ್ನೇಹಿತರಲ್ಲಿ ಮುಕ್ತವಾಗಿ ಚರ್ಚಿಸಿ, ಪೊಲೀಸರನ್ನು ಸಂಪರ್ಕಿಸಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಚೈಲ್ಡ್ಲೈನ್ ನೋಡಲ್ ಸಂಯೋಜಕ ಧನರಾಜ್ ಅವರು ಚೈಲ್ಡ್ ಲೈನ್- 1098 ಮತ್ತು ಮಕ್ಕಳ ಹಕ್ಕುಗಳ ಕುರಿತು ತಿಳಿಸಿಕೊಟ್ಟರು. ವಾಣಿವಿಲಾಸ ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕಿ ಅನ್ನಪೂರ್ಣ ಅಧ್ಯಕ್ಷತೆ ವಹಿಸಿದ್ದರು. ಆರ್‌ಎಲ್‌ಎಚ್‌ಪಿ ಚೈಲ್ಡ್ ಲೈನ್ ಸಂಯೋಜಕರಾದ ಶಶಿಕುಮಾರ್, ಶೀಲಾ, ಮಕ್ಕಳ ವಿಶೇಷ ಪೊಲೀಸ್ ಅಧಿಕಾರಿಗಳು, ಮಕ್ಕಳ ವಿಶೇಷ ಪೊಲೀಸ್ ಘಟಕ, ಮೈಸೂರು ನಗರ ಪ್ರತಿನಿಧಿಗಳಾದ ಚೈತ್ರ, ಚೈತನ್ಯ, ಪ್ರಿಯದರ್ಶಿನಿ ಇತರರು ಇದ್ದರು.