ನ್ಯೂಸ್

ಹೆಣ್ಣು ಅಬಲೆಯಲ್ಲ ಸಬಲೆ


ಯಾದಗಿರಿ: ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಬಹು ದೊಡ್ಡದಿದೆ ಎಂದು ನೇರಡಗಂ-ಕೋಡಾಲ್ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಶ್ರೀಪಂಚಮ ಸಿದ್ಧಲಿಂಗ ಸ್ವಾಮಿಗಳು ನುಡಿದರು.

ವಡಗೇರಾ ತಾಲೂಕಿನ ಮಾಚನೂರ ಗ್ರಾಮದಲ್ಲಿ ಶ್ರೀಬಸವೇಶ್ವರರ ಜಾತ್ರಾ ಮಹೋತ್ಸವದ ನಿಮಿತ ಬುಧವಾರ ರಾತ್ರಿ ಆಯೋಜಸಿದ್ದ 501ಜನ ಮಾತೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ, ನವಮಾಸಗಳ ಕಾಲ ಮಗುವನ್ನು ಹೊತ್ತು ಬೆಳೆಸುವ ಮಾತೆಯರು ಸಾಕ್ಷಾತ್ ದೇವಿ ಸ್ವರೂಪ ಆಗಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಅತ್ಯುನ್ನತ ಸ್ಥಾನ ಕಲ್ಪಿಸಲಾಗಿದೆ ಎಂದರು.

ಹೆಣ್ಣು ಅಬಲೆಯಲ್ಲ, ಸಬಲೆ ಎಂಬುದನ್ನು ತಾವ್ಯಾರು ಮರೆಯಬಾರದು, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದಾಳೆ ಎಂಬುದನ್ನು ಇತಿಹಾಸದ ಪುಟಗಳನ್ನು ತೆಗೆದಾಗ ಸಾಕಷ್ಟು ಉದಾಹರಣೆಗಳನ್ನು ನೋಡಬಹುದಾಗಿದೆ. ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಮಹಿಳೆಯರು ಗಡಿ ಕಾಯುವ ಸೈನಿಕ ಹುದ್ದೆಯಿಂದ, ವಿಮಾನ ನಡೆಸುವ ಪೈಲಟ್ ಸೇರಿ ದೇಶದ ರಾಷ್ಟ್ರಪತಿಯಾಗಿಯೂ ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಖೇಳಗಿ ಶ್ರೀಮಠದ ಶಿವಲಿಂಗ ಮಹಾಸ್ವಾಮಿಗಳು, ದರೂರಿನ ಸಂಗನ ಬಸವೇಶ್ವರ ಮಠದ ಕೊಟ್ಟೂರೇಶ್ವರ ಸ್ವಾಮಿಗಳು, ಚಂದ್ರಶೇಖರ ದೇವರು ಇದ್ದರು.