ಶೃಂಗೇರಿಯಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯನ್ನು ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಕಾರ್ಯದರ್ಶಿ ಶೋಭಾ ವೆಂಕಟರಮಣ ಉದ್ಘಾಟಿಸಿದರು. ಭಾರ್ಗವಿ, ಸುಜಾತಾ, ಕುಸುಮಾ, ಮಲ್ಲಿಕಾ, ನವ್ಯಾ ಇದ್ದರು. 
ನ್ಯೂಸ್

ಹೆಣ್ಣಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ

ಶೃಂಗೇರಿ: ಮಹಿಳೆಯರು ಕನಸುಗಳನ್ನು ಹೊತ್ತು ಸಾಧನೆ ಹಾದಿಯಲ್ಲಿ ಮುನ್ನಡೆಯಬೇಕು. ಸಮಾಜದ ಟೀಕೆಗಳನ್ನು ಸಂಯಮದಿಂದ ಸ್ವೀಕರಿಸಿ ನಿರಂತರವಾಗಿ ತನ್ನ ಆಶಯಗಳ ಪರಿಪೂರ್ಣಕ್ಕಾಗಿ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ಶಿವಮೊಗ್ಗ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಕಾರ್ಯದರ್ಶಿ ಶೋಭಾ ವೆಂಕಟರಮಣ ತಿಳಿಸಿದರು.

ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಗುರುವಾರ ಚುಂಚಶೃಂಗ ತಾಲೂಕು ಒಕ್ಕಲಿಗರ ಮಹಿಳಾ ಸಂಘ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಹೆಣ್ಣಿಗೆ ಎಲ್ಲ ಸಮಸ್ಯೆಗಳನ್ನೂ ಎದುರಿಸಿ ಪರಿಹಾರ ಕಂಡುಕೊಳ್ಳುವ ಶಕ್ತಿ ಇದೆ. ಹುಟ್ಟುವಾಗ ಬಡತನ ಇದ್ದರೆ ತಪ್ಪಲ್ಲ. ಹುಟ್ಟಿದ ಬಳಿಕ ಸಾಧನೆ ಹಾದಿಯಲ್ಲಿ ನಡೆದು ಬದುಕು ರೂಪಿಸಿಕೊಳ್ಳದಿದ್ದರೆ ಅದು ದೊಡ್ಡತಪ್ಪು ಎಂದು ಸ್ವಾಮಿ ವಿವೇಕಾನಂದ ಅವರ ಮಾತಿನಂತೆ ಮಹಿಳೆಯರು ಎಲ್ಲ ಸ್ತರಗಳಲ್ಲಿ ವ್ಯಕ್ತಿತ್ವದ ಛಾಪು ಮೂಡಿಸಬೇಕು. ಹೆಣ್ಣು ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಧನೆಗೆ, ಸಬಲತೆಗೆ ಬೇಕಾಗುವ ದಾರಿಯನ್ನು ತಾನೇ ಸೃಷ್ಟಿಸಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣದ ಜತೆ ಅವರ ಸಂಸ್ಕಾರ ಬೆಳೆಸಿಕೊಳ್ಳಲು ತಾಯಿ ಹೆಚ್ಚಿನ ಗಮನ ನೀಡಬೇಕು ಎಂದರು.

ಮಹಿಳೆಯ ಅಂತರ್ಗತದಲ್ಲಿ ಅಡಕವಾಗಿರುವ ಆಶಯಗಳಿಗೆ ಮತ್ತೊಬ್ಬ ಮಹಿಳೆ ಪ್ರೋತ್ಸಾಹ ನೀಡಿದರೆ ಮಾತ್ರ ನಾವು ಆಚರಿಸುವ ದಿನಾಚರಣೆ ಅರ್ಥಪೂರ್ಣವಾಗಲು ಸಾಧ್ಯ ಎಂದು ಹೇಳಿದರು.

ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಸ್ಥಾಪಕ ಅಧ್ಯಕ್ಷೆ ಶ್ಯಾಮಿಲಿ ರಮೇಶ್, ಕಾರ್ಯದರ್ಶಿ ಗಾಯತ್ರಿ, ಕೋಶಾಧ್ಯಕ್ಷೆ ಪೂರ್ಣಿಮಾ ಜಗದೀಶ್, ನಿರ್ದೇಶಕರಾದ ಸುಮಿತ್ರಾ, ಲತಾ, ಮೇಘಾ, ನಯನಾ, ಇಂದಿರಾ ಇತರರಿದ್ದರು.