ಬೆಂಗಳೂರು : ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿದ್ದ ಆಟೋ ಚಾಲಕರ ವಿರುದ್ಧ ಪಶ್ಚಿಮ ವಿಭಾಗ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಬಿಎಂಟಿಸಿ ಬಸ್ ಸಂಚಾರ ಇಲ್ಲದೆ ಪ್ರಯಾಣಿಕರು ಪರದಾಟ ನಡೆಸುತ್ತಿದ್ದು, ಅನಿವಾರ್ಯವಾಗಿ ಆಟೋ, ಕ್ಯಾಬ್ ಮೊರೆ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಆಟೋ ಚಾಲಕರು ದುಬಾರಿ ಬಾಡಿಗೆ ವಸೂಲಿಗೆ ಮುಂದಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದನ್ನು ಮನಗೊಂಡ ಪಶ್ಚಿಮ ವಿಭಾಗದ ಪೊಲೀಸರು ಆಟೋಗಳ ವಿರುದ್ಧ ಪಶ್ಚಿಮ ಕಾರ್ಡ್ ರಸ್ತೆ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಕಾರ್ಯಾಚರಣೆ ನಡೆಸಿದರು. ಆಟೋಗಳನ್ನು ಪರಿಶೀಲನೆ ನಡೆಸಿ ವಾಹನ, ಪ್ರಯಾಣಿಕರ ಮೊಬೈಲ್ ನಂಬರ್ ಪಡೆದರು. ನಿಗದಿಗಿಂತ ಹೆಚ್ಚಿನ ಬಾಡಿಗೆ ವಸೂಲಿ ಮಾಡಿದ್ದ 50ಕ್ಕೂ ಅಧಿಕ ಆಟೋ ಚಾಲಕರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.
ಅಲ್ಲದೆ, ಆಟೋ ನಿಲ್ದಾಣಗಳಿಗೆ ಪೊಲೀಸರು ಭೇಟಿ ಕೊಟ್ಟು ಪ್ರಯಾಣಿಕರಿಂದ ನಿಗದಿಗಿಂತ ಹೆಚ್ಚಿನ ಬಾಡಿಗೆ ಪಡೆಯದಂತೆ ಸೂಚನೆ ಕೊಟ್ಟಿದ್ದಾರೆ. ಪಡೆದರೇ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಮೆಜೆಸ್ಟಿಕ್ ಸುತ್ತ ವಾರಕ್ಕೊಮ್ಮೆ ಸಂಚಾರ ಪೊಲೀಸರೊಂದಿಗೆ ಸೇರಿ ವಿಶೇಷ ಕಾರ್ಯಾಚರಣೆ ನಡೆಸುವುದಾಗಿ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಎಂ. ಪಾಟೀಲ್ ತಿಳಿಸಿದ್ದಾರೆ.