ಬೆಂಗಳೂರು: ಬಿಎಂಟಿಸಿಯ ಚಾಲಕರು ಮತ್ತು ನಿರ್ವಾಹಕರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಡಿ.ಜೆ.ಹಳ್ಳಿಯ ಟ್ಯಾನರಿ ರಸ್ತೆಯಲ್ಲಿ ಶನಿವಾರ ಸಂಜೆ ಕಿಡಿಗೇಡಿಗಳು ಚಾಲಕ ಹಾಗೂ ನಿರ್ವಾಹಕನಿಗೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ದಾರಿ ಬಿಡುವಂತೆ ಹಾರ್ನ್ ಮಾಡಿದ ವಿಚಾರಕ್ಕೆ ಜಗಳ ತೆಗೆದು ಜಗಳಕ್ಕಿಳಿದ ದುಷ್ಕರ್ಮಿಗಳು ಯಲಹಂಕ ಡಿಪೊ ಬಸ್ ಚಾಲಕ ಗಗನ್ ಮತ್ತು ನಿರ್ವಾಹಕ ಶಿವಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಗಗನ್, ಯಲಹಂಕದಿಂದ ಶಿವಾಜಿನಗರಕ್ಕೆ ಬಸ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಆಗ ಟ್ಯಾನರಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಕಿಡಿಗೇಡಿಗಳು ಬಸ್‌ಗೆ ದಾರಿ ಬಿಡದೆ ಸತಾಯಿಸಿದ್ದಾರೆ. ಹೀಗಾಗಿ, ಗಗನ್ ಅವರು ಹಾರ್ನ್ ಮಾಡಿ ಬಸ್ ಚಲಾಯಿಸಿಕೊಂಡು ಮುಂದಕ್ಕೆ ಹೋಗಿದ್ದಾರೆ. ಇದರಿಂದ ಕೆರಳಿದ ಕಿಡಿಗೇಡಿಗಳು ಬಸ್ ಅನ್ನು ಹಿಂಬಾಲಿಸಿಕೊಂಡು ಬಂದು ಕೆನರಾ ಬ್ಯಾಂಕ್ ನಿಲ್ದಾಣದ ಬಳಿ ಅಡ್ಡಗಟ್ಟಿದ್ದಾರೆ. ಬಳಿಕ ಗಗನ್, ಬಸ್‌ನ ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಒಳ ನುಗ್ಗಿದ ದುಷ್ಕರ್ಮಿಗಳು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಕೈ ತಿರುಗಿ ಮುಖಕ್ಕೆ ಗುದ್ದಿ ಪುಂಡಾಡ ಮೆರೆದಿದ್ದಾರೆ.
ನಂತರ ಗಗನ್‌ರ ರಕ್ಷಣೆಗೆ ಧಾವಿಸಿದ ನಿರ್ವಾಹಕ ಶಿವಕುಮಾರ್ ಅವರನ್ನು ದುಷ್ಕರ್ಮಿಗಳು ಬಸ್‌ನಿಂದ ಕೆಳಗೆ ಎಳೆದೊಯ್ದು ಮನಬಂದಂತೆ ಥಳಿಸಿದ್ದಾರೆ. ಸಮವಸ ಹಿಡಿದು ಎಳೆದಾಡಿ ಮುಖ, ಕತ್ತು ಮತ್ತು ಸೊಂಟದ ಭಾಗಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾರೆ. ಶಿವಕುಮಾರ್ ನೆಲಕ್ಕೆ ಬಿದ್ದರೂ ಬಿಡದೆ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳು ಪುಂಡಾಟದ ದೃಶ್ಯಾವಳಿಯು ಬಸ್‌ನ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಗಗನ್ ದೂರು ದಾಖಲಿಸಿದ್ದಾರೆ. ಗಾಯಾಳು ಶಿವಕುಮಾರ್‌ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿಗಳು ಮಾದಕ ವಸ್ತುಗಳನ್ನು ಸೇವಿಸಿ ನಶೆಯಲ್ಲಿ ಚಾಲಕ ಮತ್ತು ನಿರ್ವಾಹಕನಿಗೆ ಥಳಿಸಿರುವ ಶಂಕೆಯಿದೆ. ದುಷ್ಕೃತ್ಯದ ನಂತರ ಆರೋಪಿಗಳು ಪರಾರಿಯಾಗಿದ್ದಾರೆ. ಬಸ್‌ನ ಕ್ಯಾಮೆರಾ ಮತ್ತು ಘಟನಾ ಸ್ಥಳದ ಸುತ್ತಮುತ್ತಲಿನ ಸಿ.ಸಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಯ ಸುಳಿವು ಆಧರಿಸಿ ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿದ್ದೇವೆ ಎಂದು ಡಿ.ಜೆ.ಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.