ನ್ಯೂಸ್

ಹೆಚ್ಚವರಿ ಪ್ರತಿ ಕ್ವಿಂಟಾಲ್ ಭತ್ತಕೆ 500 ರೂ. ನೀಡಿ

ಭತ್ತಕ್ಕೆ ಬೆಂಬಲ ಬೆಲೆಯ ಜತೆಗೆ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಭತ್ತಕ್ಕೆ 500 ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘದ (ರೈತ ಪರ್ವ) ಸಂಸ್ಥಾಪಕ ಅಧ್ಯಕ್ಷ ಟಿ.ವಿ.ಅರುಣ್ ಕುಮಾರ್ ಒತ್ತಾಯಿಸಿದರು.

ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಹೆಚ್ಚುವರಿ ಐದು ಕೆಜಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ದೂರುತ್ತಾ ಬೇರೆ ರಾಜ್ಯಗಳಿಂದ ರಾಜ್ಯ ಸರ್ಕಾರ ಅಕ್ಕಿ ಖರೀದಿಗೆ ಯತ್ನಿಸುತ್ತಿದೆ. ತಿಂಗಳ ಹಿಂದೆಯೇ ಭತ್ತ ಖರೀದಿ ಕೇಂದ್ರ ತೆರೆದಿದ್ದರೆ ಕರ್ನಾಟಕದಲ್ಲೇ ಅಗತ್ಯವಾದಷ್ಟು ಭತ್ತ ಖರೀದಿಸಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ಒದಗಿಸಬಹುದಿತ್ತು. ಇದೀಗ ಖರೀದಿ ಕೇಂದ್ರ ತೆರೆದಿರುವುದರಿಂದ ಭತ್ತ ಬೆಳೆದ ರೈತರಿಗೂ ಹೆಚ್ಚಿನ ಅನುಕೂಲವಾಗುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಡಿ.13ರಂದು ಕೆ.ಆರ್.ನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ರೈತ ಪರ್ವ ಸಂಘಟನೆಯ ಗ್ರಾಮ ಘಟಕಗಳ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರೈತ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನೂ ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದರು.

ವಿಶ್ವ ರೈತ ದಿನವನ್ನು ಸಂಘಟನೆ ವತಿಯಿಂದ ಪ್ರತಿ ವರ್ಷ ಒಂದೊಂದು ತಾಲೂಕುಗಳಲ್ಲಿ ಆಚರಿಸುತ್ತಾ ಬಂದಿದ್ದು, ಈ ವರ್ಷ ಡಿ.23 ರಂದು ಎಚ್.ಡಿ.ಕೋಟೆ ತಾಲೂಕಿನಲ್ಲಿ ಆಚರಿಸಲಾಗುವುದು ಎಂದು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಉಮಾಪತಿ, ರಾಜ್ಯ ಕಾರ್ಯದರ್ಶಿ ಚಾಮರಾಜು ಮಂಡಕಳ್ಳಿ, ರಾಜ್ಯ ಉಪಾಧ್ಯಕ್ಷರುಗಳಾದ ನಾಗೇಶ್ ಬಂಡಿಪಾಳ್ಯ, ರಾಜ್ಯ ಮಹಿಳಾ ಕಾರ್ಯದರ್ಶಿ ರೂಪ, ಮೈಸೂರು ಜಿಲ್ಲಾ ಮಹಿಳಾ ಅಧ್ಯಕ್ಷೆ ಭಾಗ್ಯಮ್ಮ ಇದ್ದರು.